ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕೃಷಿ ವಿಜ್ಞಾನಿಯಾಗಿ ಕೋಲಾರದ ಹಳ್ಳಿ ಹುಡುಗ ಪ್ರತಾಪ್

ರಾಷ್ಟ್ರೀಯ ಮಟ್ಟದ ಪರೀಕ್ಷೆ; ಕಷ್ಟಗಳ ಮೆಟ್ಟಿ ನಿಂತು ಸಾಧಿಸಿದ ಪ್ರತಾಪ್
Last Updated 25 ಜನವರಿ 2023, 6:34 IST
ಅಕ್ಷರ ಗಾತ್ರ

ಕೋಲಾರ: ‘ತಂದೆ ಗಾರೆ ಕೆಲಸ ಮಾಡುತ್ತಾರೆ. ಬೆಳಿಗ್ಗೆ 8 ಗಂಟೆಗೆ ಹೊರಟರೆ ಬರುವುದು ರಾತ್ರಿ 9ಕ್ಕೆ. ನಿತ್ಯದ ಅವರ ಶ್ರಮ ಜೀವನ ನೋಡುತ್ತಿದ್ದ ನನಗೆ ಏನಾದರೂ ಸಾಧನೆ ಮಾಡಬೇಕೆಂಬ ಛಲ ಮೂಡಿತು. ಈಗ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೃಷಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದೇನೆ’

–ಹೀಗೆಂದು ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡಿದ್ದು ಕೋಲಾರ ಜಿಲ್ಲೆಯ ಸುಗಟೂರು ಹೋಬಳಿಯ ಬೈಪನಹಳ್ಳಿ ಗ್ರಾಮದ ಸಾಧಕ ಪ್ರತಾಪ್‌ ವಿ. ಗ್ರಾಮೀಣ ಭಾಗದ ಇವರು ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ನವದೆಹಲಿಯ ಭಾರತೀಯ ಕೃಷಿ ವಿಜ್ಞಾನಿ ನೇಮಕಾತಿ ಮಂಡಳಿಯು ನಡೆಸಿದ ಕೃಷಿ ಸಂಶೋಧನಾ ಸೇವೆ (ಎಆರ್‌ಎಸ್‌) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್‌) ಕೃಷಿ ವಿಜ್ಞಾನಿಯಾಗಿ ಅವರು ಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದ ಈ ಹುದ್ದೆಗಾಗಿ ಸಾವಿರಾರು ಮಂದಿ ಪರೀಕ್ಷೆ ಬರೆದಿದ್ದರು.

ಐದನೇ ತರಗತಿವರೆಗೆ ಬೈಪನಹಳ್ಳಿ ಗ್ರಾಮದ ಸರ್ಕಾರಿ ಶಾಲೆ, ಬಳಿಕ ಎಸ್ಸೆಸ್ಸೆಲ್ಸಿವರೆಗೆ ಸುಗಟೂರಿನ ಸಬರಮತಿ ಪ್ರೌಢಶಾಲೆಯಲ್ಲಿ ಓದಿದರು. ಕೋಲಾರದ ಬಾಲಕರ ಜೂನಿಯರ್‌ ಕಾಲೇಜಿನಲ್ಲಿ ಪಿಯುಸಿ (ವಿಜ್ಞಾನ) ಹಾಗೂ ಹಾಸನದ ಕೃಷಿ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ (ಜೈವಿಕ ತಂತ್ರಜ್ಞಾನ) ಪೂರ್ಣಗೊಳಿಸಿದರು.

ನಂತರ ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆ ಬರೆದು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ಎಂ.ಎಸ್ಸಿ (ಜೈವಿಕ ರಾಸಾಯನ ವಿಜ್ಞಾನ) ವ್ಯಾಸಂಗ ಪೂರೈಸಿದರು. ಈ ಸಂದರ್ಭದಲ್ಲಿ ಜೆಆರ್‌ಎಫ್‌ ಫೆಲೋಶಿಪ್‌ ಸಿಕ್ಕಿದ್ದು, ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ಸಸ್ಯ–ಜೈವಿಕ ರಾಸಾಯನ ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ಪದವಿ ಪ್ರವೇಶ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ಪಡೆದು ಸಂಶೋಧನೆಯಲ್ಲಿ ತೊಡಗಿದ್ದಾರೆ. ತಿಂಗಳಿಗೆ ₹ 35 ಸಾವಿರ ಫೆಲೋಷಿಪ್‌ ಸಿಗುತ್ತಿದ್ದು, ಅಂತಿಮ ವರ್ಷದಲ್ಲಿದ್ದಾರೆ.

ಈಚೆಗೆ ದೆಹಲಿಯಲ್ಲಿ ಮೂರು ಹಂತದ (ಪ್ರಾಥಮಿಕ, ಮುಖ್ಯ ಹಾಗೂ ಸಂದರ್ಶನ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅವರಿಗೆ ಗ್ರೇಡ್ ‘ಎ’ ವಿಜ್ಞಾನಿ ಹುದ್ದೆ ಸಿಕ್ಕಿದೆ. ಈ ವಿಭಾಗದಲ್ಲಿ ಕೇವಲ ಮೂರು ಹುದ್ದೆಗಳು ಇದ್ದವು. ಹೈದರಾಬಾದ್‌ನಲ್ಲಿ ತರಬೇತಿ ಬಳಿಕ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಶಾಖೆಗಳಲ್ಲಿ ಹುದ್ದೆ ದೊರೆಯಲಿದೆ. ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಇಲಾಖೆಯಡಿ ಈ ಮಂಡಳಿ ಕಾರ್ಯನಿರ್ವಹಿಸುತ್ತದೆ.

ಇವರದ್ದು ಒಕ್ಕಲಿಗ ಕುಟುಂಬ. ಗಾರೆ ಕೆಲಸದ ಮೂಲಕ ಜೀವನ ಕಟ್ಟಿಕೊಂಡಿರುವ ಇವರ ತಂದೆ ವೆಂಕಟರೆಡ್ಡಿ ಪಿಯುಸಿ ವಿಜ್ಞಾನ ಓದಿದ್ದರು. ಆದರೆ, ಕಾರಣಾಂತರದಿಂದ ವ್ಯಾಸಂಗ ಮುಂದುವರಿಸಲು ಸಾಧ್ಯವಾಗದೆ ಕೂಲಿಯಲ್ಲಿ
ತೊಡಗಿದರು.

‘ಇಷ್ಟರವರೆಗೆ ಗ್ರಾಮದಲ್ಲಿ ಹಳೆ ಮನೆಯಲ್ಲಿದ್ದೆವು. ಅದು ಈಚೆಗೆ ಮಳೆ ಬಂದು ಬಿದ್ದು ಹೋಯಿತು. ನಾನು ಓದುವಾಗ ಬಂದ ವಿದ್ಯಾರ್ಥಿವೇತನದ ಹಣವನ್ನು ಕೂಡಿಟ್ಟು, ಅಲ್ಲೇ ಹೊಸದಾಗಿ ಮನೆ ನಿರ್ಮಿಸಿದ್ದೇನೆ’ ಎಂದು ಪ್ರತಾಪ್‌ ಹೇಳಿದರು.

‘ಜಾನುವಾರುಗಳಿದ್ದು, ತಾಯಿ ಮುನಿರತ್ನಮ್ಮ ನೋಡಿಕೊಳ್ಳುತ್ತಾರೆ. ಒಂದು ಎಕರೆ ಜಮೀನು ಇದ್ದು. ರಾಗಿ ಬೆಳೆಯುತ್ತೇವೆ. ಅಕ್ಕ ಲಾವಣ್ಯಾ ಅವರನ್ನು ಮದುವೆ ಮಾಡಿ ಕೊಟ್ಟಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT