ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಡಿಕೆಶಿ ಪದಗ್ರಹಣ ವೀಕ್ಷಣೆಗೆ ಸಿದ್ಧತೆ

ಸರ್ವ ಧರ್ಮ ಪ್ರಾರ್ಥನೆ– ಹೋಮ: ಮುಬಾರಕ್‌ ಹೇಳಿಕೆ
Last Updated 30 ಜೂನ್ 2020, 14:21 IST
ಅಕ್ಷರ ಗಾತ್ರ

ಕೋಲಾರ: ‘ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣ ಸಮಾರಂಭ ಜುಲೈ 2ರಂದು ನಡೆಯಲಿದ್ದು, ಕಾರ್ಯಕ್ರಮ ವೀಕ್ಷಣೆಗೆ ನಗರದ ಬೈರೇಗೌಡ ನಗರ ಮೈದಾನದಲ್ಲಿ ಸಿದ್ಧತೆ ಮಾಡಲಾಗಿದೆ’ ಎಂದು ನಗರಸಭೆ ಸದಸ್ಯ ಬಿ.ಎಂ.ಮುಬಾರಕ್‌ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾರ್ಯಕರ್ತರಿಗೆ ಪದಗ್ರಹಣ ಸಮಾರಂಭ ವೀಕ್ಷಿಸಲು ಬೃಹತ್‌ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಶಿವಕುಮಾರ್‌ ಅವರಿಗೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಒಳಿತು ಬಯಸಿ ಸರ್ವಧರ್ಮ ಪ್ರಾರ್ಥನೆ ಹಾಗೂ ಹೋಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಮೈದಾನದಲ್ಲಿ ಹಾಕಿರುವ ಬೃಹತ್ ಪೆಂಡಾಲ್‌ನಲ್ಲಿ ಜುಲೈ 2ರಂದು ಬೆಳಿಗ್ಗೆ 7 ಗಂಟೆಯಿಂದ ಭಗವದ್ಗೀತೆ, ಕುರಾನ್, ಬೈಬಲ್, ಬೌದ್ಧ ಧರ್ಮ ಸೇರಿದಂತೆ ಸರ್ವ ಧರ್ಮ ಪ್ರಾರ್ಥನೆ ನಡೆಸಲಾಗುತ್ತದೆ. ಕಾರ್ಯಕ್ರಮ ವೀಕ್ಷಣೆಗೆ ಬರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ವೇದಿಕೆಯಲ್ಲಿ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ ಮಾಡುತ್ತೇವೆ’ ಎಂದು ವಿವರಿಸಿದರು.

ಡಿಜಿಟಲ್ ತಂತ್ರಜ್ಞಾನ: ‘ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆಗೆ ಲಕ್ಷಾಂತರ ಕಾರ್ಯಕರ್ತರು ಸೇರುತ್ತಿದ್ದರು. ಆದರೆ, ಕೋವಿಡ್‌–19 ಸಂಕಷ್ಟದಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಆದರೆ, ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮ ವೀಕ್ಷಿಸುವಂತೆ ಮಾಡಲು ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆ ಜತೆಗೆ ಸ್ಥಳೀಯವಾಗಿ ಪ್ರತಿಜ್ಞೆ ಸ್ವೀಕಾರ ನಡೆಯಲಿದೆ. ಚಳಿಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ 500 ಮಂದಿ ಬಡ ಜನರಿಗೆ ಕಂಬಳಿ ವಿತರಿಸುತ್ತೇವೆ. ಅದೇ ದಿನ ಸದಸ್ಯತ್ವ ನೋಂದಣಿಗೆ ಚಾಲನೆ ನೀಡುತ್ತೇವೆ. ಆನ್‌ಲೈನ್ ತಂತ್ರಜ್ಞಾನ ಬಳಸಿ ಯಾರೇ ಲಾಗಿನ್‌ ಆಗಿ ಮಿಸ್ಡ್ ಕಾಲ್ ನೀಡಿದರೂ ಅವರ ಆಧಾರ್ ಸಂಖ್ಯೆಯೊಂದಿಗೆ ಪಕ್ಷದ ಸದಸ್ಯರಾಗುವಂತೆ ಅಭಿಯಾನ ನಡೆಯಲಿದೆ’ ಎಂದರು.

ಮೀಸಲಾತಿ ಪ್ರಕಟಿಸಿ: ‘ನಗರಸಭೆ ಸದಸ್ಯರು ಆಯ್ಕೆಯಾಗಿ 10 ತಿಂಗಳಾಗಿದೆ. ಈವರೆಗೂ ಚುನಾಯಿತ ಆಡಳಿತ ಮಂಡಳಿ ರಚನೆಯಾಗಿಲ್ಲ. ಸರ್ಕಾರವೇ ಹೈಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡು ಮೀಸಲಾತಿ ಪ್ರಕಟಿಸುವುದಾಗಿ ತಿಳಿಸಿದೆ. ಅಧ್ಯಕ್ಷರ ಆಡಳಿತ ಇಲ್ಲದಿರುವ ಕಾರಣ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರೀಕ್ಷೆಯಂತೆ ನಡೆಯುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯರಾದ ನಾರಾಯಣಮ್ಮ, ಅಸ್ಲಾಂ, ಷಫಿ, ರಮೇಶ್, ಜನಾರ್ದನ್‌, ಮಾಜಿ ಸದಸ್ಯರಾದ ರಮೇಶ್, ಬಾಬಾಜಾನ್, ನವಾಜ್, ಕಾಂಗ್ರೆಸ್‌ ಮುಖಂಡರಾದ ನಾಗಭೂಷಣ್, ಜೆ.ಕೆ.ಜಯರಾಮ್‌, ರಾಮಯ್ಯ, ವೇಣು, ಕೃಷ್ಣ, ಶಾಂತಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT