ಶನಿವಾರ, ಮೇ 28, 2022
30 °C
ರಾಬರ್ಟ್‌ಸನ್‌ಪೇಟೆ ನಗರಸಭೆ ವಿನೂತನ ಪ್ರಯೋಗ

ಪೌರ ಕಾರ್ಮಿಕರಿಂದ ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ಭರದ ಸಿದ್ಧತೆ

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ಈ ಬಾರಿಯ ಗಣ ರಾಜ್ಯೋತ್ಸವದ ಪಥ ಸಂಚಲನದಲ್ಲಿ ಪೊಲೀಸ್‌ ಮತ್ತು ಗೃಹ ರಕ್ಷಕರೊಂದಿಗೆ ಪೌರ ಕಾರ್ಮಿಕರೂ ಹೆಜ್ಜೆ ಹಾಕಲಿದ್ದಾರೆ! ಇದಕ್ಕಾಗಿ ಅಭ್ಯಾಸವನ್ನೂ ಪ್ರಾರಂಭಿಸಿದ್ದಾರೆ.

ಪಥ ಸಂಚಲನಕ್ಕೆ ಪುರುಷರು, ಮಹಿಳೆಯರು ಸೇರಿದಂತೆ ಒಟ್ಟು 30 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಎಲ್ಲರಿಗೂ ಖಾಕಿ ಪ್ಯಾಂಟ್‌, ಬಿಳಿ ಟೀಶರ್ಟ್‌, ಸೈಡ್‌ ಬೆಲ್ಟ್‌, ಕೈಗೆ ರಿಬ್ಬನ್‌, ತಲೆಗೆ ಟೊಪ್ಪಿಗೆಗಳನ್ನು ನೀಡಲಾಗಿದೆ.

ಹೇಗಿದೆ ಅಭ್ಯಾಸ: ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗುವ ಪೌರ ಕಾರ್ಮಿಕರ ಕೆಲಸ ಮಧ್ಯಾಹ್ನ 2 ಗಂಟೆಗೆ ಮುಗಿಯಲಿದೆ. ಅವರ ಕೆಲಸ ಮುಗಿದ ಬಳಿಕ ಮೈದಾನದಲ್ಲಿ ಅಭ್ಯಾಸ ಮಾಡುತ್ತಾರೆ.

‘ಪಥ ಸಂಚಲನವನ್ನು ಇಂಥವರೆ ಮಾಡಬೇಕು ಎಂದೇನೂ ಇಲ್ಲ. ನಾವು ಹತ್ತು ಮಹಿಳೆಯರು ಕೂಡ ಹೆಜ್ಜೆ ಹಾಕುತ್ತಿದ್ದೇವೆ’ ಎಂದು ಖುಷಿಯಿಂದ ಹೇಳುತ್ತಾರೆ ಪೌರ ಕಾರ್ಮಿಕ ಮಹಿಳೆ ರಾಣಿಯಮ್ಮ.

ಎಲ್ಲ ಪೌರ ಕಾರ್ಮಿಕರಿಗೂ ನಗರಸಭೆ ಪೌರಾಯುಕ್ತ ನವೀನ್ ಚಂದ್ರ ಹಾಗೂ ಪೌರ ಕಾರ್ಮಿಕ ಸಂತೋಷ್ ತರಬೇತಿ ನೀಡುತ್ತಿದ್ದಾರೆ. ಸಂತೋಷ್‌ ಈ ಮೊದಲು ಗೃಹರಕ್ಷಕ ದಳದಲ್ಲಿದ್ದರು.

ತರಬೇತಿಗೆ ಒಪ್ಪದ ಪೊಲೀಸರು: ಈ ಬಾರಿಯ ಪಥ ಸಂಚಲನದಲ್ಲಿ ಪೌರ ಕಾರ್ಮಿಕರೂ ಭಾಗವಹಿಸಬೇಕು ಎಂದು ರಾಬರ್ಟ್‌ಸನ್‌ಪೇಟೆ ನಗರಸಭೆಯ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಅವರು ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾವನೆ ಇಟ್ಟರು. ಇದಕ್ಕೆ ತಕ್ಷಣಕ್ಕೆ ಯಾರದ್ದೂ ಒಪ್ಪಿಗೆ ಸಿಗಲಿಲ್ಲ.

ಪೌರ ಕಾರ್ಮಿಕರಿಗೆ ಯಾರು ತರಬೇತಿ ನೀಡಬೇಕು ಎನ್ನುವ ಪ್ರಶ್ನೆ ಕಾಡಿತು. ಇದಕ್ಕಾಗಿ ಪೊಲೀಸರನ್ನು ಕೇಳಿದಾಗ ‘ಸಿಬ್ಬಂದಿ ಕೊರತೆ ಇದೆ’ ಎಂಬ ಉತ್ತರ ಬಂತು. ನಂತರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಕೇಳಲಾಯಿತು. ಅವರೂ ನಿರಾಕರಿಸಿದರು. ಹೀಗಾಗಿ ನಗರಸಭೆ ‍ಪೌರಾಯುಕ್ತ ನವೀನ್ ಚಂದ್ರ ಅವರೇ ತರಬೇತಿ ನೀಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು