ಮಂಗಳವಾರ, ಡಿಸೆಂಬರ್ 7, 2021
20 °C
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಜಿಲ್ಲಾಧಿಕಾರಿ ಸೆಲ್ವಮಣಿ ಹೇಳಿಕೆ

ಐತಿಹಾಸಿಕ ಸ್ಮಾರಕ–ದೇವಸ್ಥಾನ ಸಂರಕ್ಷಿಸಿ: ಜಿಲ್ಲಾಧಿಕಾರಿ ಸೆಲ್ವಮಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿನ ಐತಿಹಾಸಿಕ ಸ್ಮಾರಕಗಳು ಮತ್ತು ದೇವಸ್ಥಾನಗಳನ್ನು ಸಂರಕ್ಷಿಸಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಹೇಳಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳ ಚಿತ್ರಕಲಾ ಶಿಕ್ಷಕರಿಗೆ ಆಯೋಜಿಸಿದ್ದ ಇಲ್ಲಿ ಸೋಮವಾರ ಆಯೋಜಿಸಿದ್ದ ವರ್ಣಚಿತ್ರ ಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಐತಿಹಾಸಿಕ ಸ್ಮಾರಕಗಳು ಮತ್ತು ದೇವಸ್ಥಾನಗಳನ್ನು ಸಂರಕ್ಷಣೆ ಮಾಡದಿದ್ದರೆ ಮುಂದಿನ ತಲೆಮಾರಿಗೆ ತೋರಿಸಲು ಆಗುವುದಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸಣ್ಣ ಸಣ್ಣ ಉದ್ಯಮ ಬೆಳೆಸಿದಂತಾಗುತ್ತದೆ. ಹೊರಗಿನಿಂದ ಬರುವ ಪ್ರವಾಸಿಗರಿಂದ ಸ್ಥಳೀಯವಾಗಿ ವಾಣಿಜ್ಯ ಚಟುವಟಿಕೆಗಳು ವೃದ್ಧಿಯಾಗುತ್ತವೆ. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಜನರು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಗಂಗರು, ಚೋಳರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನಗಳಿವೆ. ಪುರಾತನ ಕಾಲದ ಈ ಸ್ಮಾರಕಗಳನ್ನು ಕೆಲವರು ಹಾಳು ಮಾಡುತ್ತಿದ್ದಾರೆ. ಅಂತಹವರಿಗೆ ಅರಿವು ಮೂಡಿಸುವ ಮೂಲಕ ಸ್ಮಾರಕಗಳನ್ನು ಸಂರಕ್ಷಣೆ ಮಾಡಲು ದೇವಸ್ಥಾನ ಆಡಳಿತ ಮಂಡಳಿ, ಪೊಲೀಸ್ ಇಲಾಖೆ ಜತೆ ಕೈ ಜೋಡಿಸಿ’ ಎಂದು ಪ್ರವಾಸಿ ಮಿತ್ರರಿಗೆ ಸೂಚಿಸಿದರು.

‘ಜಿಲ್ಲೆಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರವಾಸಿ ಮಿತ್ರರನ್ನು ನೇಮಿಸಲಾಗಿದೆ. ಅವರು ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಜತೆಗೆ ಸುರಕ್ಷತೆಗೆ ಕ್ರಮ ವಹಿಸುತ್ತಾರೆ. ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯ. ಜಿಲ್ಲೆಯ ಪ್ರವಾಸಿ ಸ್ಥಳಗಳು ಮತ್ತು ಐತಿಹಾಸಿಕ ತಾಣಗಳ ಚಿತ್ರ ಬಿಡಿಸಿ, ಅವುಗಳನ್ನು ಜಿಲ್ಲಾಧಿಕಾರಿ ಕಚೇರಿ ಅಥವಾ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದರ್ಶಿಸುತ್ತೇವೆ. ಅತ್ಯುತ್ತಮ 3 ಚಿತ್ರಗಳಿಗೆ ಬಹುಮಾನ ನೀಡಲಾಗುತ್ತದೆ’ ಎಂದು ಘೋಷಿಸಿದರು.

ಉದ್ಯೋಗ ಸೃಷ್ಟಿ: ‘ದೇಶಕ್ಕೆ ವರ್ಷದಲ್ಲಿ 1.70 ಕೋಟಿ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇದರಿಂದ ಸಾಕಷ್ಟು ಅನುಕೂಲವಾಗಿದೆ. ಪ್ರವಾಸೋದ್ಯಮದಿಂದ ಶೇ 8.1ರಷ್ಟು ಉದ್ಯೋಗಾವಕಾಶ ಸೃಷ್ಟಿಯಾಗಿವೆ. ಪ್ರವಾಸದಿಂದಾಗಿ ಕಲೆ ಮತ್ತು ಸಂಸ್ಕೃತಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ 319 ಪ್ರಮುಖ ಪ್ರವಾಸಿ ತಾಣಗಳಿದ್ದು, ಈ ಪೈಕಿ ಕೋಲಾರ ಜಿಲ್ಲೆಯ 9 ತಾಣಗಳು ಸೇರಿವೆ. ಪ್ರವಾಸೋದ್ಯಮ ಇಲಾಖೆಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರವಾಸಿ ಟ್ಯಾಕ್ಸಿ ನೀಡಲಾಗಿದೆ’ ಎಂದು ವಿವರಿಸಿದರು.

ಸುಸ್ಥಿರ ಬೆಳವಣಿಗೆ: ‘ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ ಸಂದೇಶದೊಂದಿಗೆ ಈ ವರ್ಷ ಇಲಾಖೆಯು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯು.ಜಿತೇಂದ್ರನಾಥ್ ಮಾಹಿತಿ ನೀಡಿದರು.

‘ಪ್ರವಾಸೋದ್ಯಮವು ವಿಶ್ವದಲ್ಲೇ ದೊಡ್ಡ ಉದ್ಯಮವಾಗಿದ್ದು, ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ದೇಶದ ಜಿಡಿಪಿ ಪ್ರಮಾಣ ಹೆಚ್ಚಿಸುವ ಸಾಮರ್ಥ್ಯ ಪ್ರವಾಸೋದ್ಯಮಕ್ಕಿದೆ’ ಎಂದು ಹೇಳಿದರು.

ಚಿತ್ರಕಲಾ ಶಿಕ್ಷಕರು ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಕುರಿತ ಚಿತ್ರಗಳನ್ನು ಬಿಡಿಸಿದರು. ಚಿತ್ರಕಲಾ ಶಿಕ್ಷಕ ಕಾಳಿದಾಸ, ಪರಿಸರವಾದಿ ತ್ಯಾಗರಾಜ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು