ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ನಗರಸಭೆ ಅಧ್ಯಕ್ಷರು–ಉಪಾಧ್ಯಕ್ಷರ ಆರೋಪ ಪ್ರತ್ಯಾರೋಪ

Last Updated 18 ಮಾರ್ಚ್ 2022, 16:23 IST
ಅಕ್ಷರ ಗಾತ್ರ

ಕೋಲಾರ: ‘ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 22 ಸದಸ್ಯರು ಸಹಿ ಮಾಡಿ ಪತ್ರ ಕೊಟ್ಟಿದ್ಧಾರೆ. ಈ ಬಗ್ಗೆ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ’ ಎಂದು ನಗರಸಭೆ ಅಧ್ಯಕ್ಷೆ ಶ್ವೇತಾ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಒಬ್ಬೊಬ್ಬ ಸದಸ್ಯರದು ಒಂದೊಂದು ರೀತಿಯ ಅಭಿಪ್ರಾಯವಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

‘ನಗರೋತ್ಥಾನ ಯೋಜನೆಯಲ್ಲಿ ₹ 2.47 ಕೋಟಿ ಉಳಿತಾಯವಾಗಿತ್ತು. ಈ ಅನುದಾನದ ಬಳಕೆಗೆ ಶಾಸಕ ಕೆ.ಶ್ರೀನಿವಾಸಗೌಡರಿಂದ ಪತ್ರ ತೆಗೆದುಕೊಂಡು ಕ್ರಿಯಾಯೋಜನೆ ರೂಪಿಸಿ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಕಚೇರಿಗೆ ಕಳುಹಿಸಲಾಗಿತ್ತು’ ಎಂದು ವಿವರಿಸಿದರು.

‘ಆದರೆ, ಉಪಾಧ್ಯಕ್ಷ ಪ್ರವೀಣ್‍ಗೌಡರು ಶಾಸಕರಿಂದ 10 ಬಾರಿ ಪತ್ರ ತೆಗೆದುಕೊಂಡು ಕ್ರಿಯಾಯೋಜನೆ ಬದಲಾವಣೆ ಮಾಡಿಸಿದರು. ಇದರಿಂದ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋಗಿದೆ. ಹೀಗಾಗಿ ಸದಸ್ಯರು ಉಪಾಧ್ಯಕ್ಷರ ವಿರುದ್ಧ ಅಸಮಾಧಾನಗೊಂಡು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ’ ಎಂದು ಹೇಳಿದರು.

‘ನಾನು ಮತ್ತು ಉಪಾಧ್ಯಕ್ಷರು ಜೆಡಿಎಸ್ ಪಕ್ಷದವರು. ಅವಿಶ್ವಾಸ ನಿರ್ಣಯದ ಪತ್ರಕ್ಕೆ ಸಹಿ ಮಾಡಿರುವ ಸದಸ್ಯರಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಪಕ್ಷೇತರರು ಇದ್ದಾರೆ. ಈ ವಿಚಾರವನ್ನು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ತರುತ್ತೇವೆ. ಉಪಾಧ್ಯಕ್ಷರು ಅಭಿವೃದ್ಧಿ ವಿಚಾರದಲ್ಲಿ ನನಗೆ ಬೆಂಬಲ ಕೊಡುತ್ತಿಲ್ಲ. ಆದರೂ ಅವರು ನಮ್ಮ ಪಕ್ಷದವರೆಂದು ಸಹಿಸಿಕೊಂಡಿದ್ದೇನೆ. ನಗರೋತ್ಥಾನದ ಅನುದಾನ ವಾಪಸ್‌ ಹೋಗಿರುವುದಕ್ಕೆ ಅವರೇ ಕಾರಣ’ ಎಂದು ಆರೋಪಿಸಿದರು.

ಸುಳ್ಳು ಆರೋಪ: ಅಧ್ಯಕ್ಷರ ಆರೋಪಕ್ಕೆ ತಿರುಗೇಟು ನೀಡಿರುವ ಉಪಾಧ್ಯಕ್ಷ ಪ್ರವೀಣ್‌ಗೌಡ, ‘ನಗರೋತ್ಥಾನದ ₹ 2.47 ಕೋಟಿ ಉಳಿತಾಯವಾಗಿರುವುದು ಅಧ್ಯಕ್ಷರಿಗೆ ಗೊತ್ತೇ ಇರಲಿಲ್ಲ. ನಾನೇ ಈ ಸಂಗತಿಯನ್ನು ಅವರ ಗಮನಕ್ಕೆ ತಂದು ಕ್ರಿಯಾಯೋಜನೆ ರೂಪಿಸುವಂತೆ ಸಲಹೆ ನೀಡಿದೆ. ಆದರೆ, ಅವರು ಕ್ರಿಯಾಯೋಜನೆಯಲ್ಲಿ ಕೆಲ ವಾರ್ಡ್‌ಗಳನ್ನು ನಿರ್ಲಕ್ಷಿಸಿ ತಾರತಮ್ಯ ಮಾಡಿದರು’ ಎಂದು ದೂರಿದರು.

‘ಕ್ರಿಯಾಯೋಜನೆಯಲ್ಲಿ ಕೆಲ ವಾರ್ಡ್‌ಗಳಿಗೆ ಅನ್ಯಾಯವಾಗಿರುವ ಸಂಗತಿಯನ್ನು ಶಾಸಕರ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡಿದೆ. ಶಾಸಕರಿಂದ ಪತ್ರ ಪಡೆದು ಆ ವಾರ್ಡ್‌ಗಳ ವ್ಯಾಪ್ತಿಯ ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಲಾಯಿತು. ಈ ಒಂದು ಕಾರಣಕ್ಕೆ ಅಧ್ಯಕ್ಷರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಸದಸ್ಯರನ್ನು ಎತ್ತಿ ಕಟ್ಟುತ್ತಿದ್ದಾರೆ. ವಾಸ್ತವದಲ್ಲಿ ನಗರೋತ್ಥಾನದ ಅನುದಾನ ಸರ್ಕಾರಕ್ಕೆ ವಾ‍ಪಸ್‌ ಹೋಗಿಲ್ಲ. ಅಧ್ಯಕ್ಷರಿಗೆ ಸುಳ್ಳನ್ನೂ ಸರಿಯಾಗಿ ಹೇಳಲು ಬರುವುದಿಲ್ಲ’ ಎಂದು ಕುಟುಕಿದರು.

‘ನನ್ನ ವಿರುದ್ದ 2ನೇ ಸಲ ಅವಿಶ್ವಾಸ ನಿರ್ಣಯಕ್ಕೆ ಪ್ರಯತ್ನ ನಡೆದಿದೆ. ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಆದ ಬಿ.ಎಂ.ಮುಬಾರಕ್ ಅವರು ನಗರಸಭೆ ಮಳಿಗೆಗಳ ಹಂಚಿಕೆಯಲ್ಲಿ ಕಾನೂನು ಉಲ್ಲಂಘಿಸಿ ಅಕ್ರಮ ನಡೆಸಿದ್ದಾರೆ. ಈ ಬಗ್ಗೆ ದಾಖಲೆಪತ್ರ ಸಮೇತ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದು. ತನಿಖೆ ನಡೆಯುತ್ತಿದೆ’ ಎಂದು ವಿವರಿಸಿದರು.

ಸಂಚು: ‘ನಗರಸಭೆ ಅಧ್ಯಕ್ಷೆಯ ಪತಿ ಶಬರೀಶ್ ಮತ್ತು ಮುಬಾರಕ್ ಆತ್ಮೀಯ ಸ್ನೇಹಿತರು. ಮುಬಾರಕ್‌ರ ಅಣತಿಯಂತೆ ನಗರಸಭೆ ಆಡಳಿತ ನಡೆಯುತ್ತಿದೆ. ಅಧ್ಯಕ್ಷರ ಅಕ್ರಮಗಳ ಬಗ್ಗೆಯೂ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದೇನೆ. ಈ ಕಾರಣಕ್ಕೆ ಶಬರೀಶ್ ಮತ್ತು ಮುಬಾರಕ್ ಇಬ್ಬರೂ ಒಟ್ಟಾಗಿ ನನ್ನನ್ನು ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಸಲು ಅವಿಶ್ವಾಸ ನಿರ್ಣಯದ ಸಂಚು ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಅಧ್ಯಕ್ಷೆ ಶ್ವೇತಾ ಮತ್ತು ಮುಬಾರಕ್‌ರ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ಬಯಲು ಮಾಡುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ನಾನು ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದರೂ ಅವರ ವಿರುದ್ಧ ಕಾನೂನಾತ್ಮಕ ಹೋರಾಟ ಮುಂದುವರಿಸುತ್ತೇನೆ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT