ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ ಶಾಲೆ ದುರಸ್ತಿಗೆ ಒತ್ತಾಯ: ಪ್ರತಿಭಟನೆ

ಜೀವ ಭಯದಲ್ಲಿ ಮಕ್ಕಳು: ರೈತ ಸಂಘ ಸದಸ್ಯರ ಆಕ್ರೋಶ
Last Updated 24 ಮೇ 2022, 14:14 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಾದ್ಯಂತ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ ರೈತ ಸಂಘ ಸದಸ್ಯರು ಇಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಜಿಲ್ಲೆಯಲ್ಲಿ ಕಳೆದ ವರ್ಷ ಮತ್ತು ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಬಹುಪಾಲು ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ. ಸಾಕಷ್ಟು ಶಾಲಾ ಕಟ್ಟಡಗಳು ಹಳೆಯವಾಗಿದ್ದು, ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಇಂತಹ ಕಟ್ಟಡಗಳಲ್ಲಿ ಮಕ್ಕಳು ಜೀವ ಭಯದಲ್ಲಿ ದಿನ ದೂಡುವಂತಾಗಿದೆ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಹಾಗೂ ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಿದ್ದಾರೆ. ಶಿಕ್ಷಣ ಇಲಾಖೆಗೆ ಪ್ರತಿ ವರ್ಷ ಕೋಟಿಗಟ್ಟಲೇ ಅನುದಾನ ಬಿಡುಗಡೆಯಾದರೂ ಸರ್ಕಾರಿ ಶಾಲೆಗಳ ಸ್ಥಿತಿ ಸುಧಾರಿಸಿಲ್ಲ. ಹೀಗಾಗಿ ಮಕ್ಕಳ ದಾಖಲಾತಿ ಕುಸಿಯುತ್ತಿದ್ದು, ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಶಿಕ್ಷಕರು ಶಿಥಿಲ ಶಾಲಾ ಕಟ್ಟಡಗಳಲ್ಲಿ ಪ್ರತಿನಿತ್ಯ ಭಯದಲ್ಲೇ ಪಠ್ಯ ಬೋಧನೆ ಮಾಡುವಂತಾಗಿದೆ. ಸಾಕಷ್ಟು ಶಾಲೆಗಳಲ್ಲಿ ಶೌಚಾಲಯ ಸಮಸ್ಯೆಯಿದ್ದು, ವಿದ್ಯಾರ್ಥಿನಿಯರ ಬವಣೆ ಹೇಳತೀರದು. ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆಯಿದ್ದು, ಪೋಷಕರು ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳಿಗೆ ಸಕಾಲಕ್ಕೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಮಾಡುತ್ತಿಲ್ಲ’ ಎಂದು ದೂರಿದರು.

ಕಾಳಜಿಯಿಲ್ಲ: ‘ರೈತರು, ಕೂಲಿ ಕಾರ್ಮಿಕರು, ಬಡ ಹಾಗೂ ಮಧ್ಯಮ ವರ್ಗದವರ ಮಕ್ಕಳು ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳನ್ನೇ ನಂಬಿದ್ದಾರೆ. ಆಳುವ ಸರ್ಕಾರಕ್ಕೆ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿಯಿಲ್ಲ. ದೇಶದ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರ ಸರಿಪಡಿಸದಿದ್ದರೆ ಭವಿಷ್ಯದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಸಮಾಜದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗುತ್ತದೆ’ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.

‘ಸರ್ಕಾರಗಳು ದೇಶದ ಭವಿಷ್ಯ ರೂಪಿಸುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡದೆ ನಿರ್ಲಕ್ಷ್ಯ ತೋರುತ್ತಿವೆ. ಜನಪ್ರತಿನಿಧಿಗಳು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು ರಾಜಕೀಯಕ್ಕೆ ಬೀದಿ ಕಾಳಗ ನಡೆಸುತ್ತಿದ್ದಾರೆ. ಸರ್ಕಾರವು ಅನುದಾನದ ಕೊರತೆ ನೆಪದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬೆಂಬಲಿಸುತ್ತಾ ಬಡ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುತ್ತಿದೆ’ ಎಂದು ಆರೋಪಿಸಿದರು.

‘ಶಿಥಿಲ ಶಾಲಾ ಕಟ್ಟಡಗಳನ್ನು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನೆಲಸಮಗೊಳಿಸಬೇಕು. ಮಳೆಗೆ ಸೋರುತ್ತಿರುವ ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಬೇಕು. ಮೂಲಸೌಕರ್ಯ ಸಮಸ್ಯೆ ಪರಿಹರಿಸಬೇಕು. ಶಿಕ್ಷಕರ ಕೊರತೆ ನೀಗಿಸಬೇಕು. ಮಕ್ಕಳಿಗೆ ಸಕಾಲಕ್ಕೆ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್‌ ವಿತರಣೆ ಮಾಡಬೇಕು. ಮಕ್ಕಳ ದಾಖಲಾತಿ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘ ರಾಜ್ಯ ಘಟಕದ ಸಂಚಾಲಕ ನಾಗರಾಜಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್, ಸದಸ್ಯರಾದ ತಿಮ್ಮಣ್ಣ, ವೆಂಕಟೇಶಪ್ಪ, ಗೋವಿಂದಪ್ಪ, ಹರೀಶ್, ಮುನಿಯಪ್ಪ, ಆಂಜಿನಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT