ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕಚ್ಚಿದ ಕೊತ್ತಂಬರಿ ಸೊಪ್ಪಿನ ಬೆಲೆ ರೈತ ಕಂಗಾಲು

Last Updated 17 ಜನವರಿ 2021, 1:29 IST
ಅಕ್ಷರ ಗಾತ್ರ

ನಂಗಲಿ: ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಸಂಪೂರ್ಣವಾಗಿ ಕುಸಿದಿದ್ದು ಕೊತ್ತಂಬರಿ ಬೆಳೆಗಾರರು ಕಂಗಾಲಾಗಿದ್ದಾರೆ.

ಕೊತ್ತಂಬರಿ ಸೊಪ್ಪಿನ ಬೆಲೆ ಮಾರುಕಟ್ಟೆಯಲ್ಲಿ ಕೇವಲ ಮೂರು ರೂಪಾಯಿಗಳಿಂದ ನಾಲ್ಕು ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಆದ್ದರಿಂದ ತೋಟಗಳನ್ನೇ ಒಟ್ಟಾಗಿ ತೆಗೆಯುತ್ತಿದ್ದ ವ್ಯಾಪಾರಸ್ಥರು ರೈತರ ಕೊತ್ತಂಬರಿ ತೋಟಗಳ ಕಡೆಗೆ ಹೋಗುತ್ತಿಲ್ಲ. ಇನ್ನು ರೈತರೇ ನೇರವಾಗಿ ಕೊತ್ತಂಬರಿ ಸೊಪ್ಪನ್ನು ಕಿತ್ತು ಮಾರುಕಟ್ಟೆಗೆ ಹಾಕೋಣ ಎಂದರೆ ಸೊಪ್ಪು ಕೀಳುವ ಕೂಲಿಯೂ ಸಿಗುತ್ತಿಲ್ಲ. ಆದ್ದರಿಂದ ಕೆಲವು ರೈತರು ಕೊತ್ತಂಬರಿ ಸೊಪ್ಪಿನ ತೋಟಗಳನ್ನು ಸೊಪ್ಪು ಕೀಳದೆ ಉಳುಮೆ ಮಾಡುತ್ತಿದ್ದರೆ ಮತ್ತೆ ಕೆಲವರು ತೋಟಗಳಿಗೆ ಹಸುಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.

ಈಚೆಗೆ ಎರಡು ತಿಂಗಳ ಹಿಂದೆ ಒಂದು ಕಟ್ಟಿನ ಬೆಲೆ 80 ರಿಂದ 90 ರೂಗಳಿಗೆ ಮಾರಾಟವಾಗಿತ್ತು. ನಂತರ ಕೆಲವು ದಿನಗಳಿಂದ ಕೇವಲ 10 ರೂಪಾಯಿಗಳಿಗೆ ಇಳಿದಿತ್ತು. ಆದರೆ ಇತ್ತೀಚೆಗೆ ಕೊತ್ತಂಬರಿ ಸೊಪ್ಪಿಗೆ ಬೇಡಿಕೆ ಸಂಪೂರ್ಣವಾಗಿ ಕುಸಿದಿರುವುದರಿಂದ ಕೇವಲ ಮೂರರಿಂದ ನಾಲ್ಕು ರೂಗಳಿಗೆ ದರ ಇಳಿದಿದೆ. ಆದ್ದರಿಂದ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬೆಳೆದಿದ್ದ ಕೊತ್ತಂಬರಿ ಬೆಳೆಗಾರರರಿಗೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ.

ಬರಗಾಲದ ತಾಲ್ಲೂಕು ಎಂಬ ಹಣೆಪಟ್ಟಿಗೆ ಒಳಗಾಗಿದ್ದ ಮುಳಬಾಗಿಲು ತಾಲ್ಲೂಕಿನಲ್ಲಿ ನೀರು ಹೆಚ್ಚಿಗೆ ಬೇಕಾಗುವ ಬೆಳೆಗಳನ್ನು ಬಿಟ್ಟು ಕಡಿಮೆ ನಿರು ಖರ್ಚಾಗುವ ಕೊತ್ತಂಬರಿ, ತರಕಾರಿಗಳನ್ನು ಹಾಗೂ ಗೆಣಸು ಮುಂತಾದ ಕಡಿಮೆ ಅವಧಿಯಲ್ಲಿ ಆಗುವ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆದರೆ ಇತ್ತೀಚಿಗೆ ಬಿದ್ದ ಮಳೆಯುಂದಾಗಿ ನೀರಿನ ಸಮಸ್ಯೆ ಅಷ್ಟೇನೂ ಇಲ್ಲ. ಆದರೂ ವಾಣಿಜ್ಯ ಬೆಳೆಗಳನ್ನು ಬೆಳೆಯುವುದನ್ನು ರೈತರು ಬಿಟ್ಟಿಲ್ಲ. ಆದರೆ ಮಾರುಕಟ್ಟೆಯಲ್ಲಿ ಏಕಾಏಕಿ ಕೊತ್ತಂಬರಿಗೆ ಬೆಲೆ ಕುಸಿತ ಕಂಡಿರುವುದರಿಂದ ಒಂದು ಕಡೆ ರೈತರು ಮತ್ತೊಂದು ಕಡೆ ಕೊತ್ತಂಬರಿ ಸೊಪ್ಪಿನ ತೋಟಗಳನ್ನು ಮಾರಾಟಕ್ಕೆ ತೆಗೆದಿರುವವರು ಕೈ ಸುಟ್ಟುಕೊಳ್ಳುವಂತಾಗಿದೆ ಎಂದು ಕೊತ್ತಂಬರಿ ಬೆಳೆಗಾರ ಯರಪ್ಪ ಅಳಲು ತೋಡಿಕೊಂಡರು.

ಕೊತ್ತಂಬರಿ ಸೊಪ್ಪಿಗೆ ಚೆನ್ನೈ ಉತ್ತಮ ಮಾರುಕಟ್ಟೆಯಾಗಿದ್ದು ಒಂದು ದಿನಕ್ಕೆ ಸಾವಿರಾರು ಮೂಟೆಗಳ ಕೊತ್ತಂಬರಿ ಮಾರಾಟ ಆಗುತ್ತಿತ್ತು. ಆದರೆ ಇತ್ತೀಚೆಗೆ ಬಹಳಷ್ಟು ಮಂದಿ ರೈತರು ಕೊತ್ತಂಬರಿ ಬೆಳೆಯಲು ಶುರು ಮಾಡಿರುವುದರಿಂದ ಮಾರುಕಟ್ಟೆಗೆ ಕೊತ್ತಂಬರಿ ಸೊಪ್ಪು ಯತೇಚ್ಚವಾಗಿ ಹೋಗುತ್ತಿದೆ. ಆದ್ದರಿಂದ ಸಹಜವಾಗಿ ದರ ಕಡಿಮೆಯಾಗಿದೆ. ಆದ್ದರಿಂದ ರೈತರು ಒಂದೇ ಬೆಳೆಯನ್ನು ಬೆಳೆಯದೆ ವಿವಿಧ ಬೆಳೆಗಳನ್ನು ಬೆಳೆದರೆ ಎಲ್ಲಾ ಬೆಳೆಗಳ ಬೆಲೆಯಲ್ಲಿ ಸಮತೋಲನ ಕಾಣಬಹುದು ಎಂದು ಕೊತ್ತಂಬರಿ ವ್ಯಾಪಾರಸ್ಥ ನಟರಾಜ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT