ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ ಪ್ರವಾಸವೇ ಪ್ರಧಾನಿ ಮೋದಿ ಸಾಧನೆ

ರಾಜ್ಯ ಕಾಂಗ್ರೆಸ್ ಎಸ್ಸಿ ಘಟಕದ ಸಂಚಾಲಕ ರಾಮಕೃಷ್ಣ ಲೇವಡಿ
Last Updated 22 ಮಾರ್ಚ್ 2019, 14:30 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತು ಜನರಿಗೆ ಅರಿವು ಮೂಡಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು’ ಎಂದು ರಾಜ್ಯ ಕಾಂಗ್ರೆಸ್ ಎಸ್ಸಿ ಘಟಕದ ಸಂಚಾಲಕ ಸಿ.ರಾಮಕೃಷ್ಣ ಕಾರ್ಯಕರ್ತರಿಗೆ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿ, ‘ಕೇಂದ್ರದಲ್ಲಿ 5 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಬಡವರಿಗೆ, ರೈತರಿಗೆ, ದಲಿತರಿಗೆ ಹಾಗೂ ಮಹಿಳೆಯರಿಗೆ ಯಾವುದೇ ಅನುಕೂಲ ಕಲ್ಪಿಸಿಲ್ಲ’ ಎಂದು ದೂರಿದರು.

‘ಕೇಂದ್ರವು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವ ರೀತಿಯ ಆರ್ಥಿಕ ನೀತಿ ಅನುಸರಿಸುತ್ತಿದೆ. ಜನ ಸಾಮಾನ್ಯರು ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿದ್ದ ಹಣವನ್ನು ಸಾಲವಾಗಿ ಪಡೆದು ದೇಶ ಬಿಟ್ಟು ಓಡಿ ಹೋಗುವವರಿಗೆ ಕೇಂದ್ರ ಪ್ರೋತ್ಸಾಹ ನೀಡಿತು. ದಿನಕ್ಕೆ ಮೂರು ಜತೆ ಬಟ್ಟೆ ಬದಲಿಸಿದ್ದು ಮತ್ತು ವಿದೇಶ ಪ್ರವಾಸವೇ ಪ್ರಧಾನಿ ಮೋದಿಯವರ ಬಹು ದೊಡ್ಡ ಸಾಧನೆ’ ಎಂದು ಲೇವಡಿ ಮಾಡಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಭರವಸೆಗಳ ಪೈಕಿ ಬಹುಪಾಲು ಭರವಸೆಗಳನ್ನು ಈಡೇರಿಸಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷಿ ಸಾಲ ಮನ್ನಾ ಮಾಡುವಂತೆ ಬಿಜೆಪಿ ನಾಯಕರು ಒತ್ತಡ ಹಾಕಿದ್ದರು. ಕೇಂದ್ರ ಸರ್ಕಾರವನ್ನು ಕೇಳಿ ಎಂದಾಕ್ಷಣ ಬಿಜೆಪಿ ನಾಯಕರು ಸುಮ್ಮನಾದರು’ ಎಂದು ಟೀಕಿಸಿದರು.

ರಾಜಕೀಯ ಬದಲಾವಣೆ: ‘ವರ್ಷಕ್ಕೆ 2 ಕೋಟಿ ಉದ್ಯೋಗಾವಕಾಶ ಸೃಷ್ಟಿಸುತ್ತೇವೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಜಾರಿಗೊಳಿಸುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಬಿಜೆಪಿಯು ಭರವಸೆ ಈಡೇರಿಸದೆ ವಂಚನೆ ಮಾಡಿದೆ. ಜನ ಬಿಜೆಪಿಗೆ ಅಧಿಕಾರ ಕೊಟ್ಟು ರೋಸಿ ಹೋಗಿದ್ದು, ರಾಜಕೀಯ ಬದಲಾವಣೆ ಬಯಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಡವರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಹೇಳಿದ್ದ ಮೋದಿ ಲೂಟಿಕೋರರಿಗೆ ಹಣ ಕೊಟ್ಟಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೇಂದ್ರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತಂದು ಬಡವರ ಗಾಯದ ಮೇಲೆ ಬರೆ ಎಳೆದಿದೆ. ರಾಮ ಮಂದಿರ, ಬಾಬರಿ ಮಸೀದಿ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವ ಬಿಜೆಪಿಯು ಜನರ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ’ ಎಂದು ಕಿಡಿಕಾರಿದರು.

ಭ್ರಷ್ಟ ಪ್ರಧಾನಿ: ‘ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದರು. ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮ ಕೈಗೊಂಡಿದ್ದರು. ಆದರೆ, ಮೋದಿ ಭ್ರಷ್ಟ ಪ್ರಧಾನಿಯಾಗಿದ್ದಾರೆ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಮಾಡಬೇಕು. ಪಕ್ಷ ಸಂಘಟನೆ ನಿಟ್ಟಿನಲ್ಲಿ ಕಾರ್ಯಕರ್ತರು ಬೂತ್‌ ಮಟ್ಟದಿಂದ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ, ಕಿಸಾನ್ ಖೇತ್ ಜಿಲ್ಲಾ ಘಟಕದ ಅಧ್ಯಕ್ಷ ಆಂಜಿನಪ್ಪ, ಕೆಪಿಸಿಸಿ ಕಾರ್ಯದರ್ಶಿ ರಾಜಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT