ವಸತಿಶಾಲೆ ವಿದ್ಯಾರ್ಥಿನಿಯರು ಅಸ್ವಸ್ಥ ಪ್ರಕರಣ: ಪ್ರಾಂಶುಪಾಲೆ– ಶಿಕ್ಷಕರ ಅಮಾನತು

7

ವಸತಿಶಾಲೆ ವಿದ್ಯಾರ್ಥಿನಿಯರು ಅಸ್ವಸ್ಥ ಪ್ರಕರಣ: ಪ್ರಾಂಶುಪಾಲೆ– ಶಿಕ್ಷಕರ ಅಮಾನತು

Published:
Updated:
Prajavani

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ರಾಜೇನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಳಪೆ ಆಹಾರ ಸೇವಿಸಿ 50 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಪ್ರಕರಣ ಸಂಬಂಧ ಶಾಲೆಯ ಪ್ರಾಂಶುಪಾಲೆ ಹಾಗೂ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿ ಜಿ.ಪಂ ಸಿಇಒ ಜಿ.ಜಗದೀಶ್ ಸೋಮವಾರ ಆದೇಶ ಹೊರಡಿಸಿದ್ದಾರೆ.

ವಸತಿ ಶಾಲೆಯ ಪ್ರಾಂಶುಪಾಲೆ ಉಮಾದೇವಿ, ಗಣಿತ ಶಿಕ್ಷಕ ಚತುರ್ಥಿ ಗಜಕೋಶ ಮತ್ತು ಹಿಂದಿ ಶಿಕ್ಷಕ ಎಸ್.ರಘುನಾಥ್ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿದೆ ಎಂದು ಸಿಇಒ ಆದೇಶದಲ್ಲಿ ತಿಳಿಸಿದ್ದಾರೆ.

ಶಾಲೆಯ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಅಡುಗೆ ಸಿಬ್ಬಂದಿಯನ್ನು ಬದಲಾವಣೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಿಇಒ ಆದೇಶಿಸಿದ್ದಾರೆ.

ಫೆ.7ರಂದು ಅಡುಗೆ ಸಿಬ್ಬಂದಿಯು ವಸತಿ ಶಾಲೆ ಮಕ್ಕಳಿಗೆ ಬೆಳಗಿನ ಉಪಹಾರದ ವೇಳಾಪಟ್ಟಿಯಂತೆ ಇಡ್ಲಿ ಸಾಂಬಾರ್ ನೀಡದೆ ಉಪ್ಪಿಟ್ಟು ತಯಾರಿಸಿ ಕೊಟ್ಟಿದ್ದರು. ಉಪ್ಪಿಟ್ಟು ಸರಿಯಾಗಿ ಬೆಂದಿಲ್ಲದ ಕಾರಣ ವಿದ್ಯಾರ್ಥಿನಿಯರು ಸೇವಿಸಿರಲಿಲ್ಲ. ಮಧ್ಯಾಹ್ನ ಮತ್ತು ರಾತ್ರಿ ಊಟ ಕಳಪೆಯಾಗಿದ್ದ ಕಾರಣ ಸೇವಿಸಿರಲಿಲ್ಲ. ಇದರಿಂದ ನಿಶಕ್ತರಾದ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ವಾಂತಿ ಮತ್ತು ಹೊಟ್ಟೆ ನೋವಿನ ಲಕ್ಷಣ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಫೆ.8ರಂದು ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.

ಪ್ರಾಥಮಿಕ ತನಿಖೆ: ಘಟನೆ ಸಂಬಂಧ ಸಮಾಜ ಕಲ್ಯಾಣ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದಾಗ ಆಹಾರಕ್ಕೆ ಅವಧಿ ಮೀರಿದ ಸಾಮಗ್ರಿಗಳನ್ನು ಬಳಸಿದ್ದ ಮತ್ತು ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಸಂಗತಿ ಬೆಳಕಿಗೆ ಬಂದಿತ್ತು.

ಜತೆಗೆ ತರಕಾರಿಗಳು ತಾಜಾವಾಗಿರಲಿಲ್ಲ ಮತ್ತು ಶಾಲೆ ಸಿಬ್ಬಂದಿ ವರ್ಗ ಹಾಗೂ ಪ್ರಾಂಶುಪಾಲರ ನಡುವೆ ಸಮನ್ವಯವಿಲ್ಲದೆ ಮಕ್ಕಳಿಗೆ ಕಳಪೆ ಆಹಾರ ನೀಡುತ್ತಿರುವುದು, ಶಿಕ್ಷಣದ ಗುಣಮಟ್ಟ ಇಲ್ಲದಿರುವ ಸಂಗತಿ ಗೊತ್ತಾಗಿತ್ತು. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸಿಂಧೂ ಅವರು ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯ ನಿರ್ವಾಹಕ ನಿರ್ದೇಶಕರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗೆ ವರದಿ ನೀಡಿದ್ದರು.

ನಿರ್ಲಕ್ಷ್ಯ ತೋರಿದ್ದಾರೆ: ‘ಈ ಘಟನೆ ಸಂಭವಿಸುವುದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ ಅವರು ಆ ವಸತಿ ಶಾಲೆಗೆ ಭೇಟಿ ನೀಡಿ ಅವ್ಯವಸ್ಥೆ ಸರಿಪಡಿಸಿಕೊಳ್ಳುವಂತೆ ಶೋಕಾಸ್ ನೋಟಿಸ್ ನೀಡಿದ್ದರು. ಆದರೂ ಅಲ್ಲಿನ ಸಿಬ್ಬಂದಿ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ. ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಸಂಬಂಧ ಶಾಲೆಯ 3 ಮಂದಿಯನ್ನು ಅಮಾನತು ಮಾಡಲಾಗಿದೆ’ ಎಂದು ಸಿಇಒ ಜಗದೀಶ್ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಾಂಶುಪಾಲೆ ಹಾಗೂ ಶಿಕ್ಷಕರ ಮಧ್ಯೆ ಭಿನ್ನಾಭಿಪ್ರಾಯವಿದೆ. ಪ್ರಾಂಶುಪಾಲೆ ವಿರುದ್ಧದ ಅಸಮಾಧಾನದ ಕಾರಣಕ್ಕೆ ಶಿಕ್ಷಕರು ಸರಿಯಾಗಿ ಪಠ್ಯ ಬೋಧನೆ ಮಾಡುತ್ತಿಲ್ಲ. ಶಿಕ್ಷಕ ವೃತ್ತಿಗೂ ದ್ರೋಹ ಬಗೆದಿದ್ದಾರೆ. ಜತೆಗೆ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಲು ಕಾರಣರಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !