ಬುಧವಾರ, ಜನವರಿ 22, 2020
27 °C

ಕೈದಿಗಳು ಸಮಾಜದಲ್ಲಿ ಶಾಂತಿ ನೆಲೆಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದಿನನಿತ್ಯದ ಜೀವನದಲ್ಲಿ ಕಾನೂನು ಪಾಲಿಸುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಗೊಳ್ಳುವಂತೆ ಮಾಡಬೇಕು’ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್‌ ಕೈದಿಗಳಿಗೆ ಸಲಹೆ ನೀಡಿದರು.

ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಿಚಾರಣಾಧೀನ ಕೈದಿಗಳಿಗೂ ಹಲವು ಹಕ್ಕುಗಳಿವೆ. ಇವುಗಳನ್ನು ಸಮರ್ಥವಾಗಿ ರಕ್ಷಿಸಿಕೊಂಡು ಉತ್ತಮ ಜೀವನ ನಡೆಸಬೇಕು. ತ್ವರಿತವಾಗಿ ಪ್ರಕರಣಗಳ ವಿಚಾರಣೆ ನಡೆಸಿ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಕಲ್ಪಿಸಬೇಕೆಂಬ ಕಾನೂನನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ನ್ಯಾಯಾಂಗ ಶಕ್ತಿ ಮೀರಿ ಶ್ರಮಿಸುತ್ತಿದೆ. ದುಡುಕು ನಿರ್ಧಾರದಿಂದ ತಪ್ಪು ನಡೆದಿದ್ದು, ಕೈದಿಗಳು ಜೈಲಿನಿಂದ ಹೊರ ಹೋಗಿ ಸತ್ಪ್ರಜೆಗಳಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಒಂದು ಅಪರಾಧಕ್ಕೆ ಒಂದೇ ಶಿಕ್ಷೆ ಎಂದು ಸಂವಿಧಾನ ಹೇಳಿದೆ. ಹೀಗಾಗಿ ನ್ಯಾಯಾಲಯ ಸಹ ಇದನ್ನೇ ಅನುಮೋದಿಸುತ್ತದೆ. ಬಡ ವಿಚಾರಣಾಧೀನ ಕೈದಿಗಳಿಗೆ ಪ್ರಾಧಿಕಾರದಿಂದ ಉಚಿತವಾಗಿ ವಕೀಲರ ಸೇವೆ ನೀಡಲಾಗುತ್ತದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ತಿಳಿಸಿದರು.

ಕೈದಿಗಳ ಹಕ್ಕು: ‘ಜೈಲಿಗೆ ಬಂದಾಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು, ಸಂಬಂಧಿಕರ ಜೊತೆ ಮಾತನಾಡುವುದು ಮತ್ತು ಪ್ರಕರಣದ ವಿಚಾರಣಾ ದಿನಾಂಕ ತಿಳಿದುಕೊಳ್ಳುವ ಹಕ್ಕು ಕೈದಿಗಳಿಗೆ ಇದೆ’ ಎಂದು ಜಿಲ್ಲಾ ಕಾರಾಗೃಹದ ಸೂಪರಿಂಟೆಂಡೆಂಟ್‌ ಕೆ.ಎನ್.ಮೋಹನ್‌ಕುಮಾರ್ ವಿವರಿಸಿದರು.

‘ಕೈದಿಗಳು ತಮ್ಮ ಈಗಿನ ಪರಿಸ್ಥಿತಿ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ಜೈಲಿನಿಂದ ಹೊರ ಹೋದ ನಂತರ ಸನ್ಮಾರ್ಗದಲ್ಲಿ ಬದುಕು ಸಾಗಿಸುವ ಬಗ್ಗೆ ಚಿಂತಿಸಬೇಕು. ಯಾವುದೇ ಕೆಲಸ ಮಾಡುವ ಮುನ್ನ ಹತ್ತಾರು ಬಾರಿ ಯೋಚಿಸಿ ಎಲ್ಲವನ್ನೂ ಕಾನೂನು ವ್ಯಾಪ್ತಿಯಲ್ಲಿ ಮಾಡಬೇಕು. ಸಮಸ್ಯೆ ಬಂದಾಗ ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕು’ ಎಂದು ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಟಿ.ಆರ್.ಜಯರಾಮ್ ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)