ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಲಸ ಕದಿಯುವ ವೈದ್ಯರಿಗೆ ತಕ್ಕ ಶಾಸ್ತಿ’

‘ಪ್ರಜಾವಾಣಿ’ ಫೋನ್‌–ಇನ್‌ನಲ್ಲಿ ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಜಗದೀಶ್‌ಕುಮಾರ್‌ ಖಡಕ್‌ ಎಚ್ಚರಿಕೆ
Last Updated 25 ಜನವರಿ 2020, 14:31 IST
ಅಕ್ಷರ ಗಾತ್ರ

ಕೋಲಾರ: ‘ಪಶು ವೈದ್ಯರು ಕೆಲಸದ ಅವಧಿಯಲ್ಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲಿರಬೇಕು. ಕೆಲಸ ಕದಿಯುವ ವೈದ್ಯರಿಗೆ ತಕ್ಕ ಶಾಸ್ತಿ ಮಾಡುತ್ತೇವೆ’ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎನ್‌.ಜಗದೀಶ್‌ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದರು.

‘ಪ್ರಜಾವಾಣಿ’ಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತರು ಹಾಗೂ ಹೈನೋದ್ಯಮಿಗಳ ಸಮಸ್ಯೆಗೆ ಕಿವಿಗೊಟ್ಟ ಉಪ ನಿರ್ದೇಶಕರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಬೆಳಿಗ್ಗೆ 10 ಗಂಟೆಯಿಂದ 11.30ರವರೆಗೆ ಸತತ ಒಂದೂವರೆ ತಾಸು ಜಿಲ್ಲೆಯ ಮೂಲೆ ಮೂಲೆಯಿಂದ ರೈತರು ಕರೆ ಮಾಡಿ ಪಶು ಆಸ್ಪತ್ರೆಗಳ ಅವ್ಯವಸ್ಥೆ ಹಾಗೂ ವೈದ್ಯರ ಕೊರತೆ ಬಗ್ಗೆ ಅಳಲು ತೋಡಿಕೊಂಡರು.

ಜಗದೀಶ್‌ಕುಮಾರ್‌, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಅಧೀಕ್ಷಕ ಡಾ.ವಿಶ್ವನಾಥ್‌, ಜಿಲ್ಲಾ ಕೋಳಿ ಸಾಕಾಣಿಕೆ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಮಂಜುನಾಥ್‌ರೆಡ್ಡಿ, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಆಂಜನೇಯರೆಡ್ಡಿ, ಡಾ.ಸುಭಾನ್‌, ಡಾ.ಗಂಗ ತುಳಸಿರಾಮಯ್ಯ ಅವರು ಬಿಡುವಿಲ್ಲದೆ ಕರೆ ಸ್ವೀಕರಿಸಿ ರೈತರ ಅಹವಾಲು ಆಲಿಸಿದರು. ಉಪ ನಿರ್ದೇಶಕರು ರೈತರ ಪ್ರಶ್ನೆಗಳಿಗೆ ನೀಡಿದ ಉತ್ತರ ಕೆಳಗಿನಂತಿದೆ.

* ಮಹೇಶ್, ಗುಟ್ಟಹಳ್ಳಿ: ಗ್ರಾಮದಲ್ಲಿ ಹೊಸದಾಗಿ ಪಶು ಆಸ್ಪತ್ರೆ ನಿರ್ಮಿಸಲಾಗಿದೆ. ಆದರೆ, ರಾಸುಗಳ ಚಿಕಿತ್ಸೆಗೆ ಅತ್ಯಗತ್ಯವಾದ ಟ್ರೆವಿಸ್‌ ಉಪಕರಣವಿಲ್ಲ. ನೀರಿನ ಸೌಕರ್ಯವಿಲ್ಲ ಹಾಗೂ ಆಸ್ಪತ್ರೆಗೆ ಕಾಂಪೌಂಡ್ ಇಲ್ಲ.
–ಆಸ್ಪತ್ರೆಯಲ್ಲಿ 3 ದಿನದೊಳಗೆ ಟ್ರೆವಿಸ್‌ ಅಳವಡಿಸುತ್ತೇವೆ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ತಡೆಗೋಡೆ ಸಹ ನಿರ್ಮಿಸುತ್ತೇವೆ. ಸ್ಥಳೀಯರು ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಒತ್ತಡ ತಂದು ಆಸ್ಪತ್ರೆಗೆ ನೀರಿನ ಸೌಕರ್ಯ ಪಡೆಯಬೇಕು.

* ಚೌಡರೆಡ್ಡಿ, ಪಣಸಮಾಕನಹಳ್ಳಿ: ಹಸು ಹಾಗೂ ಎಮ್ಮೆಗಳಿಗೆ ಪಿಡದೆ ಕಾಟ ಹೆಚ್ಚಿದೆ. ಬಂತೆ ಬೈರಪ್ಪನಿಗೆ ಪೂಜೆ ಮಾಡಿದರೆ ಪಿಡದೆ ಕಾಟ ತಪ್ಪುತ್ತದೆ ಎಂಬ ನಂಬಿಕೆಯಿದೆ. ಸಮಸ್ಯೆಗೆ ಪರಿಹಾರವೇನು?
–ಮೊದಲು ಮೂಢನಂಬಿಕೆ ಬಿಡಿ. ರಾಸುಗಳಿಗೆ ಬ್ಯೂಟೆಕ್ಸ್ ಅಥವಾ ಅಮಿಟ್ರಾಸ್‌ ಔಷಧ ಹಚ್ಚಿ ಮೈ ತೊಳೆದರೆ ಪಿಡದೆಗಳು ನಿರ್ಮೂಲನೆಯಾಗುತ್ತವೆ. ಜಾನುವಾರುಗಳನ್ನು ಕಟ್ಟುವ ಕೊಟ್ಟಿಗೆ ಸ್ವಚ್ಛವಾಗಿದ್ದರೆ ಕಾಯಿಲೆ ತಡೆಯಬಹುದು.

* ನಂದಕುಮಾರ್‌, ಮುಳಬಾಗಿಲು: ಸೀಮೆ ಹಸುವಿಗೆ ನಾಲ್ಕೈದು ಬಾರಿ ಕೃತಕ ಗರ್ಭಧಾರಣೆ ಚಿಕಿತ್ಸೆ ಕೊಡಿಸಿದರೂ ಗರ್ಭ ಧರಿಸಿಲ್ಲ. ಇದಕ್ಕೆ ಪರಿಹಾರವೇನು?
–ಮುಳಬಾಗಿಲು ತಾಲ್ಲೂಕಿನಲ್ಲಿ ಸದ್ಯದಲ್ಲೇ ಬರಡು ರಾಸು ತಪಾಸಣಾ ಶಿಬಿರ ನಡೆಸಲಾಗುವುದು. ಶಿಬಿರದಲ್ಲಿ ನುರಿತ ವೈದ್ಯರಿಂದ ರಾಸುಗಳಿಗೆ ಕೃತಕ ಗರ್ಭಧಾರಣೆ ಚಿಕಿತ್ಸೆ ಕೊಡಿಸುತ್ತೇವೆ.

* ಪ್ರಸಾದ್, ಐಸಂದ್ರ ಮಿಟ್ಟೂರು: ಹಸುಗಳಿಗೆ ಓಲೆ ಹಾಕಲಾಗುತ್ತಿದೆ. ಇದರಿಂದ ರಾಸು ಮಾಲೀಕರಿಗೆ ಏನು ಪ್ರಯೋಜನ. ರಾಸುಗಳು ಹಸು ಮೃತಪಟ್ಟರೆ ಪರಿಹಾರ ಸಿಗುತ್ತದೆಯೆ?
–ಜನರಿಗೆ ಆಧಾರ್‌ ಸಂಖ್ಯೆ ನೀಡುವಂತೆ ಕೇಂದ್ರ ಸರ್ಕಾರದ ಇನಾಫ್‌ ಯೋಜನೆಯಡಿ ಜಾನುವಾರುಗಳ ಕಿವಿಗೆ ವಿಶಿಷ್ಟ ಗುರುತಿನ ಸಂಖ್ಯೆಯ ಬಿಲ್ಲೆ (ಇಯರ್‌ ಟ್ಯಾಗ್‌) ಹಾಕಲಾಗುತ್ತಿದೆ. ಜಾನುವಾರುಗಳ ಆರೋಗ್ಯ ಪೋಷಣೆ, ಕಾಲಕಾಲಕ್ಕೆ ಚುಚ್ಚುಮದ್ದು ಸಿಗುತ್ತದೆಯೇ ಎಂಬ ಮಾಹಿತಿ ಸಂಗ್ರಹ, ಉತ್ತಮ ಸಂತಾನ ಕ್ರಿಯೆ, ರಾಸುಗಳ ಆರೋಗ್ಯದ ಮೇಲೆ ನಿಗಾ ಇಡುವುದು, ಹಾಲು ಉತ್ಪಾದನೆ ಹೆಚ್ಚಳ ಮಾಡುವುದು ಇದರ ಉದ್ದೇಶ. ರಾಸುಗಳು ಮೃತಪಟ್ಟರೆ ಪರಿಹಾರ ಕೊಡುತ್ತೇವೆ.

* ಮಂಜುನಾಥ್, ತೊರಗನದೊಡ್ಡಿ: ಹಾಲು ಖರೀದಿ ದರ ಹೆಚ್ಚಳದ ಬೆನ್ನಲ್ಲೇ ಖಾಸಗಿ ಅಂಗಡಿಯವರು ಪಶು ಆಹಾರದ ಬೆಲೆ ಹೆಚ್ಚಿಸಿದ್ದಾರೆ. ಪಶು ಆಹಾರ ಮಾರಾಟಗಾರರನ್ನು ನಿಯಂತ್ರಣಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?
–ಇಲಾಖೆಗೆ ಪಶು ಆಹಾರ ಬೆಲೆ ನಿಯಂತ್ರಣದ ಅಧಿಕಾರವಿಲ್ಲ. ಖಾಸಗಿ ಅಂಗಡಿಯವರು ಏಕಾಏಕಿ ಹಿಂಡಿ, ಬೂಸಾ ಹಾಗೂ ಪಶು ಆಹಾರದ ಬೆಲೆ ಹೆಚ್ಚಿಸಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ. ಈ ಸಂಗತಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇವೆ.

* ಕೆ.ವಿ.ಶ್ರೀನಿವಾಸ್, ಮಾಲೂರು: ತಾಲ್ಲೂಕು ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ರಾಸುಗಳಿಗೆ ವಿದೇಶಿ ಆಮದು ವೀರ್ಯ ಲಭ್ಯವಿಲ್ಲ. ಗುಣಮಟ್ಟದ ವೀರ್ಯ ಕೊಡದ ಕಾರಣ ರಾಸುಗಳು ಗರ್ಭ ಧರಿಸುತ್ತಿಲ್ಲ. ಈ ಬಗ್ಗೆ ಗಮನಹರಿಸಿ.
–ಮಾಲೂರು ತಾಲ್ಲೂಕಿನಲ್ಲಿ ಶಿಬಿರ ನಡೆಸುತ್ತೇವೆ. ರಾಸುಗಳಿಗೆ 3 ಬಗೆಯ ವೀರ್ಯ (ಸೆಮನ್‌) ನೀಡಲಾಗುತ್ತದೆ. ವಿದೇಶಿ ಆಮದು ವೀರ್ಯಕ್ಕೆ ಹೆಚ್ಚು ವೆಚ್ಚವಾಗುತ್ತದೆ. ರೈತರು ಹಣ ಪಾವತಿಸಿದರೆ ರಾಸುಗಳಿಗೆ ಆಮದು ವೀರ್ಯವನ್ನೇ ಕೊಡುತ್ತಾರೆ.

* ರೆಡ್ಡಪ್ಪ, ಎಮ್ಮೆನತ್ತ: ಗ್ರಾಮದ ಪಶು ಆಸ್ಪತ್ರೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಮೇಲ್ಚಾವಣಿ ಸೋರುತ್ತಿದೆ. ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಿಸಿಕೊಡಿ.
–ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಲ್ಲಿ ಹೊಸ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. ಆಸ್ಪತ್ರೆಗೆ ಸುಮಾರು ₹ 48 ಲಕ್ಷ ಅಂದಾಜು ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಹುಡುಕುತ್ತಿದ್ದು, ಅನುದಾನ ಬಿಡುಗಡೆಯಾಗುತ್ತಿದ್ದಂತೆ ಆಸ್ಪತ್ರೆ ಕಾಮಗಾರಿ ಆರಂಭಿಸುತ್ತೇವೆ.

* ಕೆ.ಶ್ರೀನಿವಾಸಗೌಡ, ಹೊಸಮಟ್ನಹಳ್ಳಿ: ಪಶು ವೈದ್ಯರ ಹಳ್ಳಿಗಳಿಗೆ ಬಂದು ರಾಸುಗಳಿಗೆ ಚಿಕಿತ್ಸೆ ಕೊಡಲು ಹಣ ಕೇಳುತ್ತಾರೆ. ಇಲಾಖೆಯಲ್ಲಿ ಔಷಧ ಮಾತ್ರೆ ಲಭ್ಯವಿದ್ದರೂ ಹೊರಗಿನ ಖಾಸಗಿ ಅಂಗಡಿಗಳಲ್ಲಿ ಖರೀದಿಸುವಂತೆ ಚೀಟಿ ಬರೆದುಕೊಡುತ್ತಾರೆ. ಇದಕ್ಕೆ ಕಡಿವಾಣ ಹಾಕಿ.
–ಜಿಲ್ಲೆಯ ಎಲ್ಲಾ ಪಶು ಆಸ್ಪತ್ರೆಗಳಲ್ಲಿ ರಾಸುಗಳಿಗೆ ಔಷಧ ಮಾತ್ರೆ ಲಭ್ಯವಿವೆ. ಹೀಗಾಗಿ ವೈದ್ಯರು ಚೀಟಿ ಬರೆದು ಕೊಡುವಂತಿಲ್ಲ. ವ್ಯವಸ್ಥೆಯಲ್ಲಿನ ಲೋಪ ಸರಿಪಡಿಸಲು ಖಂಡಿತ ಕ್ರಮ ಕೈಗೊಳ್ಳುತ್ತೇವೆ.

* ವೇಣುಗೋಪಾಲ್, ತಾಯಲೂರು: ಗ್ರಾಮದ ಪಶು ಆಸ್ಪತ್ರೆಗೆ ಕಾಂಪೌಂಡ್ ಇಲ್ಲ. ಇದರಿಂದ ಆಸ್ಪತ್ರೆ ಆವರಣವು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಆಸ್ಪತ್ರೆ ಸುತ್ತ ಶೀಘ್ರವೇ ಕಾಂಪೌಂಡ್‌ ನಿರ್ಮಿಸಿ.
–ಈ ಹಿಂದೆ ಆಸ್ಪತ್ರೆಗಳಿಗೆ ಕಾಂಪೌಂಡ್‌ ನಿರ್ಮಿಸಲು ನರೇಗಾ ಅಡಿ ಹಣಕಾಸು ನೆರವು ಸಿಗುತ್ತಿತ್ತು. ಆದರೆ, ಈಗ ನರೇಗಾದಲ್ಲಿ ಹಣ ಕೊಡುವುದಿಲ್ಲ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕಾಂಪೌಂಡ್‌ ನಿರ್ಮಾಣ ಮಾಡುತ್ತೇವೆ.

* ಮುನಿರಾಜು, ಮಾಲೂರು: ಪಶು ಆಸ್ಪತ್ರೆಯಲ್ಲಿ ಜಂತುಹುಳ ನಿಯಂತ್ರಣ ಪುಡಿ ಬಿಟ್ಟರೆ ಬೇರೇನೂ ಸಿಗುವುದಿಲ್ಲ. ಲವಣ ಮಿಶ್ರಣ ಪುಡಿಯೂ ಇಲ್ಲ. ವೈದ್ಯರನ್ನು ಕೇಳಿದರೆ ಔಷಧ ಮಾತ್ರೆ ದಾಸ್ತಾನು ಇಲ್ಲ ಎನ್ನುತ್ತಾರೆ.
–ಡೇರಿಗಳಲ್ಲಿ ತಿಂಗಳ 30 ದಿನವೂ ಲವಣ ಮಿಶ್ರಣ ಪುಡಿ ಸಿಗುತ್ತದೆ. ಲಭ್ಯವಿಲ್ಲದಿದ್ದರೆ ಕೋಚಿಮುಲ್‌ ಉಪ ವ್ಯವಸ್ಥಾಪಕರ ಗಮನಕ್ಕೆ ತಂದು ಕೂಡಲೇ ವ್ಯವಸ್ಥೆ ಮಾಡಿಸುತ್ತೇವೆ. ರಾಸುಗಳ ಸಂಖ್ಯೆ ಹಾಗೂ ಆಸ್ಪತ್ರೆಗಳ ಅಗತ್ಯತೆ ಆಧರಿಸಿ ಔಷಧ ಮಾತ್ರೆ ಪೂರೈಸಲಾಗಿದೆ. ಔಷಧ ಮಾತ್ರೆ ಕೊರತೆ ಬಗ್ಗೆ ಗಮನ ಹರಿಸುತ್ತೇವೆ.

* ಶಿವಕುಮಾರ್, ಅಗ್ರಹಾರ ಬೀದಿ: ರಾಸುಗಳಿಗೆ ವಿಮೆ ಮಾಡಿಸಲು ಅವಕಾಶವಿದೆಯೇ? ವಿಮೆಯಿಂದ ಏನು ಪ್ರಯೋಜನ.
–ರಾಸುಗಳಿಗೆ ವಿಮೆ ಮಾಡಿಸಲು ನೀಡಿದ್ದ ಕಾಲಾವಕಾಶ ಮುಗಿದಿದೆ. ವಿಮೆ ನೋಂದಣಿಗೆ ಜೂನ್‌ನಲ್ಲಿ ಅರ್ಜಿ ಕರೆಯಲಾಗುತ್ತದೆ. ಆಗ ವಿಮೆ ಮಾಡಿಸಬಹುದು. ವಿಮೆ ಪರಿಹಾರ ಮಾಡಿಸದ ರಾಸು ಅನಾರೋಗ್ಯ ಅಥವಾ ಬೇರೆ ಯಾವುದೇ ಕಾರಣದಿಂದ ಮೃತಪಟ್ಟರೆ ಪರಿಹಾರ ನೀಡಲಾಗುತ್ತದೆ.

* ರಮೇಶ್‌ಕುಮಾರ್, ವಡ್ಡಹಳ್ಳಿ: ರಾಸುಗಳಿಗೆ ಬರುವ ಕಾಲುಬಾಯಿ ಜ್ವರದ ಬಗ್ಗೆ ರೈತರಿಗೆ ಮುಂಚಿತವಾಗಿ ಜಾಗೃತಿ ಮೂಡಿಸಬೇಕು. ಜತೆಗೆ ಕಾಯಿಲೆ ಬರುವುದಕ್ಕೂ ಮುನ್ನವೇ ಲಸಿಕೆ ಹಾಕಬೇಕು.
–ಕಾಲುಬಾಯಿ ಜ್ವರ ತಡೆಗಾಗಿ ಪ್ರತಿ ವರ್ಷ ರಾಸುಗಳಿಗೆ 2 ಸುತ್ತು ಲಸಿಕೆ ಹಾಕಲಾಗುತ್ತಿದೆ. ಈ ವರ್ಷದಿಂದ ಹಸು, ಎಮ್ಮೆಗಳ ಜತೆಗೆ ಹಂದಿಗಳಿಗೂ ಲಸಿಕೆ ಹಾಕುತ್ತೇವೆ. ಕಾಲುಬಾಯಿ ಜ್ವರ ಲಕ್ಷಣದ ವಿವರ ಒಳಗೊಂಡ ಕರಪತ್ರ ಮುದ್ರಿಸಿ ಗ್ರಾಮಗಳಲ್ಲಿ ರೈತರಿಗೆ ಹಂಚಲಾಗುತ್ತದೆ.

* ಅರುಣ್‌ರೆಡ್ಡಿ, ಮಡಿವಾಳ: ಗ್ರಾಮದ ಸಮೀಪದ ಕ್ಯಾಸಂಬಳ್ಳಿಯಲ್ಲಿರುವ ಪಶು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಔಷಧ ಮಳಿಗೆ ತೆರೆದರೆ ಅನುಕೂಲವಾಗುತ್ತದೆ. ಆಸ್ಪತ್ರೆಯನ್ನು ದೊಡ್ಡ ಕಟ್ಟಡಕ್ಕೆ ಸ್ಥಳಾಂತರಿಸಬೇಕು
–ಕ್ಯಾಸಂಬಳ್ಳಿಯಲ್ಲಿ ದೊಡ್ಡ ಆಸ್ಪತ್ರೆ ನಿರ್ಮಿಸಲು ಮಂಜೂರಾತಿ ದೊರೆತಿದೆ. ಜಾನುವಾರು ಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆ ನಿರ್ಮಿಸಲಾಗುವುದು. ಪಶು ಆಸ್ಪತ್ರೆಯಲ್ಲಿ ಔಷಧ ಮಳಿಗೆ ತೆರೆಯಲು ಅವಕಾಶವಿಲ್ಲ.

* ರಾಮೇಗೌಡ, ತ್ಯಾವನಹಳ್ಳಿ: ಹಸುಗಳು ಕರು ಹಾಕಿದ ನಂತರ ಮಾಸ ಹಾಕಲು ಸಮಸ್ಯೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಹಸು ಮೃತಪಡುತ್ತವೆ. ಇದರ ನಿಯಂತ್ರಣಕ್ಕೆ ಏನು ಮಾಡಬೇಕು?
–ಮಾಸಕ್ಕೆ ಕಲ್ಲು, ಇಟ್ಟಿಗೆ ಕಟ್ಟುವ ಕೆಲಸ ಮಾಡಬಾರದು. ಹಸುಗಳ ಗರ್ಭಕ್ಕೆ ವೈದ್ಯರಿಂದ ಕೈ ಹಾಕಿಸಿ ಬಲವಂತವಾಗಿ ಮಾಸ ತೆಗೆಸಬಾರದು. ಇದರಿಂದ ಹಸುಗಳಿಗೆ ಸೋಂಕು ತಗುಲುತ್ತದೆ. ಮಾಸ ಹಾಕದಿದ್ದರೆ ಆತಂಕಪಡಬೇಕಿಲ್ಲ. ಪಶು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಕೊಡಿಸಿದರೆ ಸಮಸ್ಯೆ ಬಗೆಹರಿಯುತ್ತದೆ.

* ರಘುರಾಮೇಗೌಡ, ಕೊಲದೇವಿ: ಬೇಸಿಗೆ ಕಾಲ ಸಮೀಪಿಸುತ್ತಿದ್ದು, ರಾಸುಗಳಿಗೆ ಮೇವು ಸಮಸ್ಯೆ ಎದುರಾಗದಂತೆ ಇಲಾಖೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮೇವು ಬಿತ್ತನೆ ಬೀಜ ಕೊಡಬೇಕು.
–ಬೇಸಿಗೆಯಲ್ಲಿ ಎದುರಾಗಬಹುದಾದ ಮೇವಿನ ಸಮಸ್ಯೆ ನಿವಾರಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಜಿಲ್ಲೆಗೆ 25 ಸಾವಿರ ಮೇವಿನ ಕಿಟ್‌ ನೀಡುವಂತೆ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಮೂಲಕ ಹೆಚ್ಚುವರಿ ಮೇವಿನ ಕಿಟ್‌ಗೆ ಪ್ರಸ್ತಾವ ಕಳುಹಿಸುತ್ತೇವೆ.

* ಶಂಕರಪ್ಪ, ಮಾಲೂರು: ಕುರಿಗಳಿಗೆ ಕಾಯಿಲೆ ಬಂದು ಸಾಯುತ್ತಿದ್ದು, ದಿಕ್ಕು ತೋಚದಂತಾಗಿದೆ. ಸಾವಿನ ಕಾರಣ ಸಹ ತಿಳಿಯುತ್ತಿಲ್ಲ.
–ಕುರಿಗಳಿಗೆ ಪಿಪಿಆರ್‌ ಚುಚ್ಚುಮದ್ದು ಹಾಕಿದೆ. ಕುರಿಗಳ ರಕ್ತ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲನೆ ಮಾಡುತ್ತೇವೆ. ಸಾವಿನ ನಿಖರ ಕಾರಣ ತಿಳಿದು ಚಿಕಿತ್ಸೆ ಕೊಡುತ್ತೇವೆ.

* ಪ್ರತಾಪ್‌, ಕ್ಯಾಸಂಬಳ್ಳಿ: ಗ್ರಾಮದ ಪಶು ಆಸ್ಪತ್ರೆಗೆ ವೈದ್ಯರು ಯಾವಾಗ ಆಸ್ಪತ್ರೆಗೆ ಬರುತ್ತಾರೆ ಹಾಗೂ ಆಸ್ಪತ್ರೆಯಿಂದ ಯಾವಾಗ ಹೋಗುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಆಸ್ಪತ್ರೆಯಲ್ಲಿ ಕೆಲಸದ ಅವಧಿಯ ಸೂಚನಾ ಫಲಕ ಹಾಕಿದರೆ ಅನುಕೂಲವಾಗುತ್ತದೆ.
–ಕ್ಯಾಸಂಬಳ್ಳಿ ಸೇರಿದಂತೆ ಜಿಲ್ಲೆಯ ಎಲ್ಲಾ ಪಶು ಆಸ್ಪತ್ರೆಗಳಲ್ಲಿ ಕೆಲಸದ ಅವಧಿಯ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ. ಜತೆಗೆ ಸೂಚನಾ ಫಲಕಗಳಲ್ಲಿ ವೈದ್ಯರ ಮೊಬೈಲ್‌ ಸಂಖ್ಯೆ ವಿವರವನ್ನು ನಮೂದಿಸಲಾಗುತ್ತದೆ.

* ನಳಿನಿ, ರೈತ ಸಂಘ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ: ಹೋಬಳಿ ಕೇಂದ್ರದ ಪಶು ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯರಿರುವುದಿಲ್ಲ. ರೈತರು ರಾಸುಗಳಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗಳಿಗೆ ಅಲೆಯುವ ಪರಿಸ್ಥಿತಿಯಿದೆ.
–ಎಲ್ಲಾ ಹೋಬಳಿ ಕೇಂದ್ರಗಳ ಆಸ್ಪತ್ರೆಗಳಲ್ಲಿ ವೈದ್ಯರಿದ್ದಾರೆ. ಕೆಲಸದ ಅವಧಿಯಲ್ಲಿ ವೈದ್ಯರು ಆಸ್‍ಪತ್ರೆಯಿಂದ ಹೊರ ಹೋಗಿ ಕರ್ತವ್ಯ ನಿರ್ಲಕ್ಷ್ಯ ತೋರಿದರೆ ದೂರು ಕೊಡಿ. ಅಂತಹ ವೈದ್ಯರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ.

* ರಾಮಸ್ವಾಮಿ, ಕುಂಬಾರಪೇಟೆ: ಪಶು ವೈದ್ಯರು ಕಾರ್ಯ ಸ್ಥಳದಲ್ಲಿ ಇರುವುದೇ ಇಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಇದರಿಂದ ರಾಸುಗಳಿಗೆ ಚಿಕಿತ್ಸೆ ಕೊಡಿಸಲು ಸಮಸ್ಯೆಯಾಗಿದೆ.
–ಜಿಲ್ಲೆಯ ಪಶು ಆಸ್ಪತ್ರೆಗಳಲ್ಲಿ ಶೇ 40ರಷ್ಟು ಸಿಬ್ಬಂದಿ ಕೊರತೆಯಿದೆ. ವೈದ್ಯರು ಆಸ್ಪತ್ರೆ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ಕೊಟ್ಟು ರಾಸುಗಳಿಗೆ ಚಿಕಿತ್ಸೆ ಕೊಡಬೇಕು. ಹೀಗಾಗಿ ಅವರು ಸದಾ ಆಸ್ಪತ್ರೆಯಲ್ಲಿರಲು ಸಾಧ್ಯವಾಗುವುದಿಲ್ಲ. ಕರೆ ಸ್ವೀಕರಿಸುವಂತೆ ಎಲ್ಲಾ ಪಶು ವೈದ್ಯರಿಗೆ ನಿರ್ದೇಶನ ಕೊಡುತ್ತೇವೆ.

–ನಿರ್ವಹಣೆ: ಜೆ.ಆರ್.ಗಿರೀಶ್‌ ಮತ್ತು ಕೆ.ಎಸ್‌ಸುದರ್ಶನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT