ಮಂಗಳವಾರ, ಡಿಸೆಂಬರ್ 1, 2020
17 °C
ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್ ಅಭಿಪ್ರಾಯ

ವೃತ್ತಿ ಕೌಶಲಾಭಿವೃದ್ಧಿ: ಆರ್ಥಿಕವಾಗಿ ಸಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವೃತ್ತಿ ಕೌಶಲ ಅಭಿವೃದ್ಧಿಯಿಂದ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಬಹುದು. ಜತೆಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್ ಅಭಿಪ್ರಾಯಪಟ್ಟರು.

ಜಿಲ್ಲಾ ಉದ್ಯಮ ಕೇಂದ್ರವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುಧಾರಿತ ಉಪಕರಣಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡಿದರೆ ವೃತ್ತಿಪರರಾಗಿ ಹೊರ ಹೊಮ್ಮುತ್ತಾರೆ. ತರಬೇತಿಯಿಂದ ವೃತ್ತಿ ಕೌಶಲ ವೃದ್ಧಿಯಾಗಿ ಕೆಲಸದಲ್ಲಿ ಹೆಚ್ಚಿನ ಸಂಭಾವನೆ ಪಡೆದು ಆರ್ಥಿಕವಾಗಿ ಸದೃಢರಾಗಬಹುದು’ ಎಂದರು.

‘ಜಿಲ್ಲೆಯಲ್ಲಿ ಈ ಹಿಂದೆ ಉತ್ತಮ ಮಳೆಯಾಗುತ್ತಿದ್ದರಿಂದ ಕೃಷಿಯಲ್ಲಿ ಹೆಚ್ಚು ಲಾಭ ಬರುತ್ತಿತ್ತು. ಹೀಗಾಗಿ ಹೆಚ್ಚಿನ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಏಳೆಂಟು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಹೀಗಾಗಿ ರೈತರು ಜೀವನೋಪಾಯಕ್ಕೆ ಬೇರೆ ಕೆಲಸ ಅವಲಂಬಿಸುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.

‘ಜೀವನ ನಿರ್ವಹಣೆಗೆ ಎಲ್ಲರೂ ಒಂದಿಲ್ಲೊಂದು ಕೆಲಸ ಮಾಡುತ್ತಾರೆ. ಪುರುಷರು ದೂರದ ಊರುಗಳಿಗೆ ಹೋಗಿ ಕೆಲಸ ಮಾಡಬಹುದು. ಆದರೆ, ಮಹಿಳೆಯರು ಮನೆಯಲ್ಲಿ ಅಥವಾ ಹತ್ತಿರದ ಸ್ಥಳಗಳಲ್ಲಿ ಕೆಲಸ ಮಾಡಿ ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸಬೇಕು. ಸ್ವಉದ್ಯೋಗದಲ್ಲಿ ಕೌಶಲ ಅಳವಡಿಸಿಕೊಳ್ಳುವ ಮೂಲಕ ಸಾಂಪ್ರದಾಯಿಕ ವೃತ್ತಿ ಉನ್ನತೀಕರಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕೈಗಾರಿಕೆಗಳಿಗೆ ಒತ್ತು: ‘ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು, ಕೋಲಾರ, ಮುಳಬಾಗಿಲು ಮತ್ತು ಮಾಲೂರು ತಾಲ್ಲೂಕಿನಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸಲಾಗಿದೆ. ಮಾಲೂರು, ಕೋಲಾರ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ಕಾರ್ಯಾರಂಭ ಮಾಡಿವೆ. ಇದರಿಂದ ಉದ್ಯೋಗ ಸಮಸ್ಯೆ ನಿವಾರಣೆ ಆಗುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲಾ ಉದ್ಯಮ ಕೇಂದ್ರದ ಯೋಜನೆಯಲ್ಲಿ ಸ್ವಉದ್ಯೋಗಕ್ಕೆ ನೆರವಾಗುವ ಸಲುವಾಗಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರಿಗೆ ಸೌಲಭ್ಯ ನೀಡಲಾಗುತ್ತಿದೆ. ಸರ್ಕಾರಿ ಕೆಲಸ ನಂಬಿ ಕೂರುವ ಕಾಲ ಹೊರಟು ಹೋಗಿದೆ. ಈಗ ಖಾಸಗಿ ಮತ್ತು ಸ್ವಉದ್ಯೋಗದಲ್ಲಿ ಸರ್ಕಾರಿ ಕೆಲಸಕ್ಕಿಂತ ಹೆಚ್ಚು ಆದಾಯ ಗಳಿಸಬಹುದು’ ಎಂದರು.

ಉದ್ಯೋಗ ಸೃಷ್ಟಿ: ‘ಕೋಲಾರ ತಾಲ್ಲೂಕಿನ ನರಸಾಪುರ ಹಾಗೂ ವೇಮಗಲ್ ಭಾಗದಲ್ಲಿ ನೂರಾರು ಕೈಗಾರಿಕೆಗಳಿವೆ. ಇದರಿಂದ ಸ್ಥಳೀಯವಾಗಿ ಸಾವಿರಾರು ಉದ್ಯೋಗ ಸೃಷ್ಟಿಯಾಗಿವೆ. ಐಟಿಐ ಮತ್ತು ಇತರೆ ತಾಂತ್ರಿಕ ತರಬೇತಿ ಪಡೆದವರಿಗೆ ಉದ್ಯೋಗ ಸಿಗುತ್ತಿದ್ದು, ಸ್ಥಳೀಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಅಕ್ಟೋಬರ್‌ನಲ್ಲಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ನೀಡಲಾಗಿತ್ತು. ಈಗ ಗಾರೆ, ಬಡಗಿ, ಕುಲುಮೆ, ಕ್ಷೌರಿಕ, ದೋಬಿ ಮತ್ತು ಕಲ್ಲು ಕುಟಿಕರಿಗೆ ಸಾಂಪ್ರದಾಯಿಕ ವೃತ್ತಿಗೆ ಬೇಕಾದ ಆಧುನಿಕ ಸಲಕರಣೆ ನೀಡಲಾಗುತ್ತಿದೆ. ಈ ಸಲಕರಣೆ ಸದ್ಬಳಕೆ ಮಾಡಿಕೊಳ್ಳಿ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.