ಭಾನುವಾರ, ಆಗಸ್ಟ್ 25, 2019
28 °C
ಮದ್ಯ ವರ್ಜನ ಶಿಬಿರದಲ್ಲಿ ಎಪಿಎಂಸಿ ಅಧ್ಯಕ್ಷ ನಾಗರಾಜ್ ಒತ್ತಾಯ

ಸಮಾಜದ ಸ್ವಾಸ್ಥ್ಯಕ್ಕೆ ಸಾರಾಯಿ ನಿಷೇಧಿಸಿ

Published:
Updated:
Prajavani

ಕೋಲಾರ: ‘ಸಮಾಜದ ಸ್ವಾಸ್ಥ್ಯ ಹಾಗೂ ಕುಟುಂಬದ ನೆಮ್ಮದಿಗೆ ದೇಶದಲ್ಲಿ ಸಾರಾಯಿ ಮಾರಾಟ ನಿಷೇಧಿಸಬೇಕು’ ಎಂದು ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಒತ್ತಾಯಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮದ್ಯ ವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಮಹಾತ್ಮ ಗಾಂಧೀಜಿ ಮದ್ಯ ವ್ಯಸನಮುಕ್ತ ಭಾರತದ ಕನಸು ಕಂಡಿದ್ದರು. ಗುಜರಾತ್, ಬಿಹಾರ ರಾಜ್ಯದಲ್ಲಿ ಮದ್ಯಪಾನ ನಿಷೇಧ ಕಾನೂನು ಜಾರಿಗೆ ಬಂದಿದೆ. ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಅನೇಕ ರಾಜ್ಯಗಳಲ್ಲಿ ಈ ಕಾನೂನು ಜಾರಿಯಾಗಿಲ್ಲ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾದರೂ ಸರಿ ಸಾರಾಯಿ ಮಾರಾಟ ನಿಷೇಧಿಸಿದರೆ ಲಕ್ಷಾಂತರ ಕುಟುಂಬಗಳು ನೆಮ್ಮದಿಯಾಗಿರುತ್ತವೆ ಮತ್ತು ದೇಶವೂ ಚೆನ್ನಾಗಿರುತ್ತದೆ’ ಎಂದರು.

‘ಸರ್ಕಾರ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಕಾರ್ಯಗತಗೊಳಿಸುತ್ತಿದ್ದಾರೆ. ಅವರು ಅಲ್ಪಸಂಖ್ಯಾತ ಸಮುದಾಯ ಒಳಗೊಂಡಂತೆ ಯಾವುದೇ ಜಾತಿ, ಮತದ ಬೇಧವಿಲ್ಲದೆ ಸೇವಾ ಚಟುವಟಿಕೆ ನಡೆಸುತ್ತಿದ್ದಾರೆ’ ಎಂದು ಸ್ಮರಿಸಿದರು.

ಮದ್ಯವರ್ಜನ ಶಿಬಿರ: ‘ವೀರೇಂದ್ರ ಹೆಗಡೆಯವರು 30 ವರ್ಷಗಳ ಹಿಂದೆ ಬಡ ಕುಟುಂಬಗಳಿಗೆ ಅಕ್ಕಿ, ಬೇಳೆ, ಕೃಷಿ ಚಟುವಟಿಕೆಗೆ ಸೌಲಭ್ಯ ಕಲ್ಪಿಸಿದರು. ಆದರೂ ಕುಟುಂಬಗಳಲ್ಲಿ ಯಾವುದೇ ಸುಧಾರಣೆ ಕಾಣದಿದ್ದಾಗ ಜನಜಾಗೃತಿ ವೇದಿಕೆ ಮೂಲಕ ಮದ್ಯವರ್ಜನ ಶಿಬಿರ ನಡೆಸಿ ಮದ್ಯ ವ್ಯಸನಿಗಳ ಮನಪರಿರ್ತನೆ ಕೆಲಸಕ್ಕೆ ಮುಂದಾದರು. ನಂತರ 1.25 ಲಕ್ಷಕ್ಕೂ ಹೆಚ್ಚು ಜನರನ್ನು ಮದ್ಯ ವ್ಯಸನಮುಕ್ತರಾಗಿಸಿದರು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್ ಹೇಳಿದರು.

‘1990ರಲ್ಲಿ ವಿಶ್ವಸಂಸ್ಥೆಯು ಪಂಚ ಭೀಕರ ಕಾಯಿಲೆಗಳ ಪಟ್ಟಿ ಮಾಡಿದೆ. ಇದರಲ್ಲಿ ಏಡ್ಸ್, ಕ್ಯಾನ್ಸರ್, ಕ್ಷಯ, ಹೃದಯಾಘಾತದಿಂದ ಆಯಾ ವ್ಯಕ್ತಿಗೆ ಬಾಧೆಯಾದರೆ ಕುಟುಂಬಕ್ಕೆ ನೋವು ಉಂಟಾಗುತ್ತದೆ. ಆದರೆ, ಮದ್ಯಪಾನವೆಂಬ ಮಹಾ ಕಾಯಿಲೆಯು ಇಡೀ ಕುಟುಂಬದ ನೆಮ್ಮದಿ ಹಾಳು ಮಾಡುತ್ತದೆ. ಮದ್ಯ ವ್ಯಸನದಿಂದ ಆಗಿರುವ ಭೀಕರ ದುರಂತಗಳು ಕಣ್ಣ ಮುಂದಿವೆ’ ಎಂದು ನುಡಿದರು.

‘ನಮ್ಮ ಹೋರಾಟ ಮದ್ಯದಂಗಡಿಗಳ ವಿರುದ್ಧವಲ್ಲ. ಬದಲಿಗೆ ಮದ್ಯ ವ್ಯಸನಿಗಳ ವಿರುದ್ಧ ಎಂಬುದನ್ನು ವೀರೇಂದ್ರ ಹೆಗಡೆ ಸ್ಪಷ್ಟಪಡಿಸಿದ್ದಾರೆ. ಶಿಬಿರಕ್ಕೆ ಬಂದವರಲ್ಲಿ 10 ಮಂದಿ ವ್ಯಸನ ಮುಕ್ತರಾದರೂ ಅದು ದೊಡ್ಡ ಸಾಧನೆ. ಮದ್ಯವರ್ಜನ ಶಿಬಿರದ ಮೂಲಕ ಕುಟುಂಬಗಳ ಕಣ್ಣೀರು ಒರೆಸುವ ಕೆಲಸಕ್ಕೆ ಅನೇಕ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿವೆ’ ಎಂದು ತಿಳಿಸಿದರು.

ಫಲ ನೀಡುತ್ತಿದೆ: ‘ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 11ನೇ ಶಿಬಿರ ನಡೆಯುತ್ತಿದೆ. ಸುಮಾರು 750 ಮಂದಿ ಮದ್ಯ ವ್ಯಸನ ಮುಕ್ತರಾಗಿ ಸಂತಸದ ಜೀವನ ನಡೆಸುತ್ತಿದ್ದಾರೆ. ವೀರೇಂದ್ರ ಹೆಗೆಡೆಯವರ ದೂರದೃಷ್ಠಿಯ ಯೋಜನೆ ಫಲ ನೀಡುತ್ತಿದೆ’ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಲಕ್ಷ್ಮಣಗೌಡ ಹೇಳಿದರು.

ಮದ್ಯ ವರ್ಜನ ಶಿಬಿರಾಧಿಕಾರಿ ವಿದ್ಯಾಧರ್, ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್‌ಪ್ರಸಾದ್, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀನಿವಾಸ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಂಜುನಾಥ್, ಕಸಬಾ ವಲಯದ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷ ವಿಜಯಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಹರೀಶ್ ಪಾಲ್ಗೊಂಡಿದ್ದರು.

Post Comments (+)