ಶುಕ್ರವಾರ, ಜೂನ್ 18, 2021
28 °C
ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆ: ಆಕ್ರೋಶ

ಕೋಲಾರ ಜಿಲ್ಲೆಯಲ್ಲಿ ‘ಭಾರತ ರಕ್ಷಿಸಿ’ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೇಂದ್ರ ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾರ್ಮಿಕ ಮತ್ತು ರೈತ ಸಂಘರ್ಷ ಸಮನ್ವಯ ಸಮಿತಿ ಸದಸ್ಯರು ಇಲ್ಲಿ ಸೋಮವಾರ ಪ್ರಧಾನ ಅಂಚೆ ಕಚೇರಿ ಎದುರು ‘ಭಾರತ ರಕ್ಷಿಸಿ’ ಚಳವಳಿ ನಡೆಸಿದರು.

‘ಕೇಂದ್ರವು ಬಂಡವಾಳ ಹೂಡಿಕೆ ನೆಪದಲ್ಲಿ ದೇಶವನ್ನು ಲೂಟಿ ಮಾಡಲು ಕಾರ್ಪೊರೇಟ್‌ ಕಂಪನಿಗಳಿಗೆ ನೆರವಾಗುತ್ತಿದೆ. ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುತ್ತಿದೆ. ಕಾರ್ಪೊರೇಟ್‌ ಕಂಪನಿಗಳು ರೈತರು ಮತ್ತು ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿವೆ’ ಎಂದು ಸಮಿತಿ ಸದಸ್ಯರು ಕಿಡಿಕಾರಿದರು.

’ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದ ಅವಧಿಯಲ್ಲಿ ರೈತರು ಹಾಗೂ ಕಾರ್ಮಿಕರು ಹೋರಾಟದ ಮೂಲಕ ಗಳಿಸಿದ್ದ ಕಾನೂನುಗಳನ್ನು ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಕಸ ಗುಡಿಸಿದಂತೆ ಗುಡಿಸಿ ಹಾಕುತ್ತಿವೆ. ಕಾರ್ಪೊರೇಟ್‌ ಕಂಪನಿಗಳು ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುತ್ತಿವೆ’ ಎಂದು ಕೆಪಿಆರ್‌ಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ದೂರಿದರು.

‘ದೇಶವು ಮೊದಲೇ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿತ್ತು. ಕೋವಿಡ್‌ ಸಂಕಷ್ಟದಿಂದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸರ್ಕಾರಗಳು ಕೋವಿಡ್‌ ಸಂದರ್ಭ ಬಳಸಿಕೊಂಡು ತೆರೆಮರೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜನವಿರೋಧಿ ಕಾನೂನು ಜಾರಿಗೊಳಿಸಲಾಗುತ್ತಿವೆ. ಈ ದುರಾಡಳಿತ ಖಂಡಿಸಿ ಕ್ವಿಟ್ ಇಂಡಿಯಾ ಚಳವಳಿ ಮಾದರಿಯಲ್ಲಿ ದೇಶದೆಲ್ಲೆಡೆ ಭಾರತ ರಕ್ಷಿಸಿ ಚಳವಳಿ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಕಾರ್ಮಿಕರು ಕಂಗಾಲು: ‘ಅಸಂಘಟಿತ ವಲಯದಲ್ಲಿ ಉದ್ಯೋಗ ನಷ್ಟ ಮತ್ತು ಆದಾಯ ಕುಸಿತದಿಂದ ಕಾರ್ಮಿಕರು ಕಂಗಾಲಾಗಿದ್ದಾರೆ. ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಕೃಷಿಕರು, ಬಡವರು, ದಲಿತರ ಬದುಕು ಬರ್ಬರವಾಗಿದೆ. ಸರ್ಕಾರಗಳು ಬಡ ಜನರ ಬದುಕು ಸುಧಾರಿಸುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಸಮಿತಿ ಸದಸ್ಯರು ದೂರಿದರು.

‘ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ₹ 7,500 ನಗದು ವರ್ಗಾವಣೆ ಮಾಡಬೇಕು. ದುಡಿಯುವ ಜನರ ನೈಜ ವರಮಾನ ಹಾಗೂ ಅನುಭೋಗ ವೆಚ್ಚ ಹೆಚ್ಚಿಸಿ ದೇಶದ ಅರ್ಥ ವ್ಯವಸ್ಥೆಗೆ ಪುನಶ್ಚೇತನ ಒದಗಿಸಬೇಕು. ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿಯಂತೆ 6 ತಿಂಗಳು ಪಡಿತರ ವಿತರಿಸಬೇಕು. ನರೇಗಾ ಕೂಲಿ ಮೊತ್ತವನ್ನು ₹ 600ಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಖಾಸಗೀಕರಣ ಬೇಡ: ‘ಕಾರ್ಮಿಕ ಸಂಘಟನೆಗಳಿಗೆ ಪ್ರಾತಿನಿಧ್ಯ ನೀಡಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯಡಿ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಕ್ಕೆ ಪ್ರತಿ ವರ್ಷ ₹ 10 ಸಾವಿರ ಕೋಟಿಯ ವರ್ತುಲ ನಿಧಿ ಸ್ಥಾಪಿಸಬೇಕು. ನಗರ ಪ್ರದೇಶದ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು’ ಎಂದು ಮನವಿ ಮಾಡಿದರು.

ಸಿಐಟಿಯು, ಕೆಪಿಆರ್‌ಎಸ್, ಎಸ್‌ಎಫ್‌ಐ, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ ಸಂಘಟನೆ ಸದಸ್ಯರು ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.