ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಬಿಟ್ಟು ಹೋಗುವವರಿಗೆ ಸಾಲ, ರಕ್ಷಣೆ ನೀಡಲಾಗುತ್ತಿದೆ: ಬ್ಯಾಲಹಳ್ಳಿ ಗೋವಿಂದಗೌಡ

Last Updated 29 ಫೆಬ್ರುವರಿ 2020, 13:39 IST
ಅಕ್ಷರ ಗಾತ್ರ

ಕೋಲಾರ: ‘ದೇಶ ಬಿಟ್ಟು ಹೋಗುವವರಿಗೆ ವಾಣಿಜ್ಯ ಬ್ಯಾಂಕ್‌ಗಳವರು ಸಾಲ ನೀಡುವುದರ ಜತೆಗೆ ರಕ್ಷಣೆ ನೀಡುತ್ತವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ದೂರಿದರು.

ನಗರದ ಡಿಸಿಸಿ ಬ್ಯಾಂಕ್ ಶಾಖೆ ವತಿಯಿಂದ ಶನಿವಾರ 127 ರೈತರಿಗೆ ಬೆಳೆಸಾಲದ ಚೆಕ್ ವಿತರಿಸಿ ಮಾತನಾಡಿ, ‘ಯೋಜನೆಯಡಿ ನಬಾರ್ಡ್ 892 ಮಂದಿಗೆ ₹ 8.82 ಕೋಟಿ ಬೆಳೆಸಾಲ ವಿತರಿಸಲಾಗಿದೆ’ ಎಂದರು.

‘ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು, ಬಡವರು ಇಟ್ಟಿರುವ ಹಣವನ್ನು ದೇಶ, ರಾಜ್ಯದ ಸಾಕಷ್ಟು ಮಂದಿ ಸಾಲದ ರೂಪದಲ್ಲಿ ಪಡೆದು ದೇಶ ಬಿಟ್ಟು ಹೋಗಿದ್ದಾರೆ. ಅವರಿಗೆ ರಕ್ಷಣೆ ನೀಡುವ ಜತೆಗೆ ಆಸ್ತಿಯನ್ನು ಉಳಿಸುತ್ತಿದ್ದಾರೆ. ಅವರ ನಷ್ಟವನ್ನು ಸರಿದೂಗಿಸಿಕೊಳ್ಳಲು ರೈತರ ಆಸ್ತಿಯನ್ನು ಹರಾಜು ಮಾಡುತ್ತಾರೆ’ ಎಂದು ಆರೋಪಿಸಿದರು.

‘ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಬ್ಯಾಂಕ್ ಖಾತೆಗೆ ವರ್ಷಕ್ಕೆ ₹ 6ಸಾವಿರ ಬರುತ್ತಿದೆ. ರೈತರನ್ನು ಅಲೆಸದೇ ಕರೆದು ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಡಿಸಿಸಿ ಬ್ಯಾಂಕಿನಲ್ಲೇ ರೈತರು ಉಳಿತಾಯ ಖಾತೆ ಮಾಡಿಸಿ ಹಣಕಾಸು ವ್ಯವಹಾರ ಮಾಡಬೇಕು’ ಎಂದು ಹೇಳಿದರು.

‘ಸಾಲಕ್ಕಾಗಿ ಸಹಕಾರಿ ಬ್ಯಾಂಕ್, ವ್ಯವಹಾರಕ್ಕೆ ವಾಣಿಜ್ಯ ಬ್ಯಾಂಕ್ ಎಂಬ ಮನೋಭಾವ ಬಿಡಬೇಕು. ರೈತರು ನೆಮ್ಮದಿಯ ಬದುಕು ನಡೆಸುತ್ತಿರುವುದೇ ಸಹಕಾರಿ ರಂಗದಿಂದ ಎಂಬ ಸತ್ಯ ಅರಿತು, ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು’ ಎಂದು ಕೋರಿದರು.

ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಮಾತನಾಡಿ, ‘ರೈತರು, ಮಹಿಳೆಯರು ನೆಮ್ಮದಿ ಬದುಕು ರೂಪಿಸಿಕೊಳ್ಳಲು ಡಿಸಿಸಿ ಬ್ಯಾಂಕ್ ಮತ್ತು ಕೋಚಿಮುಲ್ ಮುಖ್ಯ ಪಾತ್ರವಹಿಸುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಸಹಕಾರಿ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ರೈತರ, ಮಹಿಳೆಯರ ಮೇಲಿದೆ. ಪಡೆದುಕೊಂಡ ಸಾಲವನ್ನು ಪ್ರಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು’ ಎಂದು ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ‘ಸಹಕಾರಿ ಬ್ಯಾಂಕ್‌ನಿಂದಲೇ ಸರ್ಕಾರದ ಸಾಲ ಮನ್ನಾ ಯೋಜನೆಯು ಹೆಚ್ಚು ರೈತರಿಗೆ ಅನುಕೂಲವಾಯಿತು. ಬ್ಯಾಂಕಿಗೆ ಹಿಂದಿನ ಪರಿಸ್ಥಿತಿ ಎದುರಾಗದಂತೆ ಸಹಕಾರ ನೀಡಬೇಕು’ ಎಂದು ಕೋರಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ್, ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ನಾಗರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ವ್ಯವಸ್ಥಾಪಕ ಅಂಬರೀಷ್, ಸೂಪರ್‌ವೈಸರ್ಅಮೀನಾ, ನಾರಾಯಣಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT