ಗುರುವಾರ , ಡಿಸೆಂಬರ್ 5, 2019
20 °C
ಪರಿಸರ ನಿಯಂತ್ರಾಧಿಕಾರಿ ಮಂಜುನಾಥ್ ಸಲಹೆ

ಕನ್ನಡ ನಾಡು ನುಡಿ ರಕ್ಷಣೆಗೆ ಶ್ರಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕನ್ನಡ ನಾಡು ಮತ್ತು ನುಡಿಯ ಉಳಿವಿಗೆ ಕನ್ನಡಿಗರು ಶ್ರಮಿಸಬೇಕು’ ಎಂದು ಪರಿಸರ ನಿಯಂತ್ರಾಧಿಕಾರಿ ಸಿ.ಆರ್.ಮಂಜುನಾಥ್ ಸಲಹೆ ನೀಡಿದರು.

ಕನ್ನಡ ಸಾಂಸ್ಕೃತಿಕ ಪರಿಷತ್ ವತಿಯಿಂದ ಇಲ್ಲಿನ ನೂತನ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ವೈಭವದ ಭಾಷೆಯನ್ನು ಹೆಚ್ಚು ಹೆಚ್ಚು ಬಳಸುತ್ತಾ ಹೋದರೆ ಇನ್ನೂ ಬೃಹದಾಕಾರವಾಗಿ ಬೆಳೆಸಹುದು’ ಎಂದು ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳು ತಂದೆ-ತಾಯಿ, ಗುರುಗಳ ಮಾರ್ಗದರ್ಶನ ಪಡೆದರೆ ಬದುಕು ಹಸನಾಗುತ್ತದೆ. ಕನ್ನಡ ಪರಸಂಘಟನೆಗಳು ಇಲ್ಲದಿದ್ದರೆ ಪರಭಾಷಿಕರು ನಮ್ಮ ಭಾಷೆಯನ್ನು ನಿರ್ನಾಮ ಮಾಡುತ್ತಿದ್ದರು. ಈ ಕಾರಣಕ್ಕಾಗಿ ಕನ್ನಡಪರ ಸಂಘಟನೆಗಳು ಹೆಚ್ಚು ಅಗತ್ಯವಿದೆ’ ಎಂದು ಹೇಳಿದರು.

‘ಜನ್ಮ ನೀಡಿದ ತಂದೆ–ತಾಯಿಯನ್ನು ದೂರ ಮಾಡುವುದು ಮಹಾಪಾಪಕ್ಕೆ ಸಮ. ಮಕ್ಕಳು ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಪೋಷಕರ ಮತ್ತು ಗುರುಗಳ ಪಾತ್ರ ಪ್ರಮುಖವಾದುದ್ದು, ಬದುಕಿಗೆ ಬೆಳಕು ನೀಡಿದವರನ್ನು ಮರೆತರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ’ ಎಂದರು.

ಕನ್ನಡ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ವೆಂಕಟಕೃಷ್ಣಪ್ಪ ಮಾತನಾಡಿ, ‘ಕನ್ನಡ ರಾಜ್ಯೋತ್ಸವ ಆಚರಣೆ ಒಂದು ದಿನಕ್ಕೆ ಸಿಮೀತಗೊಳ್ಳಬಾರದು, ಅದು ನಿತ್ಯೋತ್ಸವವಾಗಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಪರಿಷತ್ತು ಕನ್ನಡದ ಧ್ವನಿ ಮೊಳಗಿಸುತ್ತದೆ. ಕನ್ನಡ ಪರವಾದ ಅನೇಕ ಕಾವ್ಯ ಕಮ್ಮಟ, ವಿಚಾರ ಸಂಕಿರಣ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಮಾಜ ಸೇವೆಗಾಗಿ ದುಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದು ಹೇಳಿದರು.

ಪಿಯು ಕನ್ನಡ ಉಪನ್ಯಾಸಕರ ವೇದಿಕಯ ಅಧ್ಯಕ್ಷ ಜೆ.ಜಿ.ನಾಗರಾಜ ಮಾತನಾಡಿ, ‘ನಾಡಿನಲ್ಲಿ ಕನ್ನಡ ಪರವಾದ ಆಲೋಚನೆಗಳು ಇನ್ನಷ್ಟು ಪ್ರಚುರಗೊಳಿಸುವ ಸಂಘಟನೆಗಳು ಜನ್ಮತಾಳಬೇಕು’ ಎಂದರು.

‘ಮನೆ ಮಾತಿನಿಂದ ಕನ್ನಡ ಬಲಿಷ್ಠವಾಗಬೇಕು, ವಿದ್ಯಾರ್ಥಿಗಳು ಗುರಿಯ ಸಾಧನೆಯ ಕಡೆ ನಡೆಯಬೇಕು, ಜೀವನದಲ್ಲಿ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಮಾಧ್ಯಮ ದೃಶ್ಯಗಳ ಮೂಲಕ ಚೆಂದವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಿಜವಾದ ಬದುಕು ತಂದೆ, ತಾಯಿ, ಗುರು ಸಂಬಂಧ ಸಮಾಜ ಮುಖಿಯಾದದ್ದು’ ಎಂದು ಹೇಳಿದರು.

ನೂತನ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಿ.ರುದ್ರಪ್ಪ, ಪಿಯು ನಿವೃತ್ತ ಉಪ ನಿರ್ದೇಶಕ ಎಸ್. ವೆಂಕಟಸ್ವಾಮಿ, ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ, ಕರವೇ (ಪ್ರವೀಣಶೆಟ್ಟಿ ಬಣ) ಅಧ್ಯಕ್ಷ ರಾಜೇಶ್, ಭುವನೇಶ್ವರಿ ಕನ್ನಡ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಪಿ.ನಾರಾಯಣಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಶ್ರೀನಿವಾಸ್, ಕವಿ ಶರಣಪ್ಪ ಗಬ್ಬೂರು ಹಾಜರಿದ್ದರು.

ಪ್ರತಿಕ್ರಿಯಿಸಿ (+)