ಬುಧವಾರ, ಏಪ್ರಿಲ್ 21, 2021
29 °C
ದೆಹಲಿ ಹೋರಾಟ ಬೆಂಬಲಿಸಿ ಕೆಪಿಆರ್‌ಎಸ್‌ ಕರಾಳ ದಿನ ಆಚರಣೆ

ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಸದಸ್ಯರು ಇಲ್ಲಿ ಶನಿವಾರ ಕೈಗೆ ಕಪ್ಪುಪಟ್ಟಿ ಧರಿಸಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ 100 ದಿನವಾದರೂ ಸರ್ಕಾರ ರೈತರ ಬೇಡಿಕೆ ಈಡೇರಿಸಿಲ್ಲ. ಕೇಂದ್ರದ ರೈತ ವಿರೋಧಿ ಧೋರಣೆ ಖಂಡಿಸಿ ದೇಶದೆಲ್ಲೆಡೆ ಕಪ್ಪು ಬಾವುಟ ಪ್ರದರ್ಶಿಸಿ ಕರಾಳ ದಿನ ಆಚರಿಸಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಬಂಡವಾಳಶಾಹಿಗಳು, ಕಾರ್ಪೊರೇಟ್‌ ಕಂಪನಿಗಳು ಹಾಗೂ ಹಣವಂತ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಈ ಜನ ವಿರೋಧಿ ನಡೆಯಿಂದ ಇಡೀ ರೈತ ಕುಲ ತಬ್ಬಲಿಯಾಗುವ ದುಸ್ಥಿತಿ ಬರಲಿದೆ’ ಎಂದು ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.

‘ರೈತರು ದೇಶಕ್ಕೆ ಅನ್ನ ನೀಡುವ ಜನ ತಾವೆಂದು ಸಂಭ್ರಮಿಸುವ ಬದಲು ಸಮಸ್ಯೆ ಮುಂದಿಟ್ಟುಕೊಂಡು ಕರಾಳ ದಿನ ಆಚರಿಸುವ ಪರಿಸ್ಥಿತಿ ಬಂದಿದೆ. ಜವಾಬ್ದಾರಿಯುತ ಕೇಂದ್ರ ಸರ್ಕಾರ ಹೋರಾಟನಿರತ ರೈತರನ್ನು ಕರೆದು ಚರ್ಚಿಸುವ ಬದಲು ರೈತರಿಗೆ ಅವಮಾನ ಮಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತುಘಲಕ್‌ ದರ್ಬಾರ್‌: ‘ಸರ್ಕಾರಗಳು ಕೃಷಿ ಕ್ಷೇತ್ರ ನಾಶ ಮಾಡಿ ಆಹಾರ ಭದ್ರತೆಗಾಗಿ ಹೊರ ದೇಶಗಳತ್ತ ಕೈಚಾಚುವ ಪರಿಸ್ಥಿತಿ ಸೃಷ್ಟಿಸುತ್ತಿವೆ. ರೈತರ ಬೇಡಿಕೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ರೈತರನ್ನು ಶೋಷಿಸುತ್ತಿವೆ. ರೈತ ವಿರೋಧಿ ಕಾಯ್ದೆಗಳನ್ನು ಮಂಡಿಸಿ ತುಘಲಕ್‌ ದರ್ಬಾರ್‌ ನಡೆಸುತ್ತಿವೆ. ಲಜ್ಜೆಗೆಟ್ಟ ಸರ್ಕಾರಗಳಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ’ ಎಂದು ಸಂಘಟನೆಯ ತಾಲ್ಲೂಕು ಘಟಕದ ಕಾರ್ಯದರ್ಶಿ ವಿ ನಾರಾಯಣರೆಡ್ಡಿ ಗುಡುಗಿದರು.

‘ತೈಲೋತ್ಪನ್ನ ಹಾಗೂ ಕೃಷಿ ಸಲಕರಣೆಗಳ ಬೆಲೆ ಗಗನಕ್ಕೇರಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಗಳು ರೈತರನ್ನು ಬೀದಿಗೆ ತಳ್ಳಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಹಿತ ಕಾಯಲು ಹೊರಟಿವೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಕೈಗೊಂಬೆಯಾಗಿರುವ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಸಣ್ಣ ಭೂ ಹಿಡುವಳಿದಾರರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ’ ಎಂದು ಕಿಡಿಕಾರಿದರು.

ಅಪಾಯಕಾರಿ ಕಾಯ್ದೆ

‘ಕೇಂದ್ರ ಸರ್ಕಾರವು ಬ್ರಿಟೀಷರಿಗಿಂತಲೂ ಕಡೆಯಾದ ಅಪಾಯಕಾರಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ. ರೈತ ಕುಲಕ್ಕೆ ಮಾರಕವಾಗಿರುವ ಈ ಕಾಯ್ದೆಗಳನ್ನು ಹಿಂಪಡೆಯಬೇಕು. ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೊಳಿಸಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕಾನೂನು ಜಾರಿ ಮಾಡಬೇಕು. ಜನಪ್ರತಿನಿಧಿಗಳು ಪಕ್ಷಾತೀತವಾಗಿ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಧ್ವನಿ ಎತ್ತಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘಟನೆ ತಾಲ್ಲೂಕು ಘಟಕದ ಉಪಾಧ್ಯಕ್ಷರಾದ ಬಿ.ಸಿ.ರಾಮರೆಡ್ಡಿ, ಕೃಷ್ಣೇಗೌಡ, ವೆಂಕಟೇಶ್, ಸಹ ಕಾರ್ಯದರ್ಶಿಗಳಾದ ಶ್ರೀಧರ್‌, ಎನ್.ಯಲ್ಲಪ್ಪ, ಸದಸ್ಯರಾದ ರಾಜೇಶ್, ಬಾಲಕೃಷ್ಣ, ರಾಜೇಂದ್ರ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.