ಶನಿವಾರ, ಜೂಲೈ 11, 2020
29 °C

ಬ್ಯಾಂಕ್‌ ಪಾಸ್‌ಬುಕ್‌ನಲ್ಲಿ ಕನ್ನಡ ಕಡೆಗಣನೆ: ಎಸ್‌ಬಿಐ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಪಾಸ್‌ಬುಕ್‌ನಲ್ಲಿ ಕನ್ನಡ ಭಾಷೆ ಕೈಬಿಟ್ಟು, ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ನೀಡಿರುವ ಸ್ಟೇಟ್‌ ಬ್ಯಾಂಕ್‌ ಇಂಡಿಯಾದ (ಎಸ್‌ಬಿಐ) ಕ್ರಮ ಖಂಡಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕನ್ನಡಪರ ಸಂಘಟನೆಗಳ ಸದಸ್ಯರು ಇಲ್ಲಿ ಮಂಗಳವಾರ ಎಸ್‌ಬಿಐನ ಗೌರಿಪೇಟೆ ಶಾಖೆ ಎದುರು ಪ್ರತಿಭಟನೆ ಮಾಡಿದರು.

‘ದೇಶದ ತ್ರಿಭಾಷಾ ಸೂತ್ರದ ಅನ್ವಯ ಸ್ಥಳೀಯ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಆದರೆ, ಎಸ್‌ಬಿಐ ಪಾಸ್‌ಬುಕ್‌ನಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯನ್ನು ಬಳಕೆ ಮಾಡುತ್ತಿದೆ. ಬ್ಯಾಂಕ್‌ ಕನ್ನಡ ಭಾಷೆಯನ್ನು ಕಗ್ಗೊಲೆ ಮಾಡುತ್ತಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಇತ್ತೀಚೆಗೆ ಮುದ್ರಣವಾಗುತ್ತಿರುವ ಪಾಸ್‌ಬುಕ್‌ಗಳಲ್ಲಿ ಬ್ಯಾಂಕ್‌ನ ಕನ್ನಡದಲ್ಲಿನ ಹೆಸರು ಮಾಯವಾಗಿದೆ. ಬ್ಯಾಂಕ್‌ ಕರ್ನಾಟಕದಲ್ಲಿ ಇದ್ದರೂ ಮಾತೃ ಭಾಷೆಯನ್ನು ಕಡೆಗಣಿಸಿದೆ. ಎಸ್‌ಬಿಐ ಕನ್ನಡ ವಿರೋಧಿ ಬ್ಯಾಂಕ್‌ ಆಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ದೂರಿದರು.

‘ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ಬಿಎಂ) ರಾಜ್ಯದಲ್ಲೇ ಕಾರ್ಯಾರಂಭ ಮಾಡಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಆರಂಭದಿಂದಲೂ ಎಸ್‌ಬಿಎಂ ಪಾಸ್‌ಬುಕ್‌ ಮಂಗಳೂರಿನಲ್ಲಿ ಮುದ್ರಣವಾಗುತ್ತಿದ್ದವು. ಬ್ಯಾಂಕ್‌ ಎಸ್‌ಬಿಐ ಜತೆ ವಿಲೀನವಾದ ನಂತರ ಮುಂಬೈನಲ್ಲಿ ಪಾಸ್‌ಬುಕ್‌ ಮುದ್ರಣವಾಗುತ್ತಿವೆ. ಪಾಸ್‌ಬುಕ್‌ನಲ್ಲಿ ಉದ್ದೇಶಪೂರ್ವಕವಾಗಿ ಕನ್ನಡವನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿದರು.

ಅಪಮಾನ ಮಾಡಿದೆ: ‘ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದ್ದು, ಶಾಸ್ತ್ರೀಯ ಸ್ಥಾನಮಾನ ಪಡೆದಿದೆ. 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಭಾಷೆಗೆ ಎಸ್‌ಬಿಎಂ ಅಪಮಾನ ಮಾಡಿದೆ. ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳು ಮೊದಲಿಗೆ ಕರ್ನಾಟಕದಲ್ಲೇ ಕಾರ್ಯಾರಂಭ ಮಾಡಿದವು. ದೇಶದ ಅರ್ಥ ವ್ಯವಸ್ಥೆಗೆ ಮತ್ತು ಬ್ಯಾಂಕ್‌ನ ಬೆಳವಣಿಗೆಗೆ ಕನ್ನಡಿಗರ ಕೊಡುಗೆ ಅಪಾರ. ಎಸ್‌ಬಿಎಂ ಅಧಿಕಾರಿಗಳು ಈ ಸಂಗತಿ ಮರೆಯಬಾರದು’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ಎಸ್‌ಬಿಐ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಕನ್ನಡಿಗರ ಸ್ವಾಭಿಮಾನ ಪ್ರಶ್ನಿಸುವಂತೆ ಮಾಡಿದೆ. ಕೇಂದ್ರ ಸರ್ಕಾರ 1968ರಲ್ಲಿ ಜಾರಿಗೆ ತಂದಿರುವ ತ್ರಿಭಾಷಾ ಸೂತ್ರವನ್ನು ಬ್ಯಾಂಕ್‌ ಕಡ್ಡಾಯವಾಗಿ ಜಾರಿ ಮಾಡಬೇಕು. ಪಾಸ್‌ಬುಕ್‌ನ ಮುಖಪುಟದಲ್ಲಿ ಹಿಂದಿನಂತೆ ಕನ್ನಡದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ಎಂದು ಮುದ್ರಿಸಬೇಕು. ಬ್ಯಾಂಕ್‌ನ ವ್ಯವಹಾರವನ್ನು ಕನ್ನಡದಲ್ಲೇ ನಡೆಸಬೇಕು. ಕನ್ನಡಕ್ಕೆ ಅಪಮಾನ ಮಾಡಿರುವವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳಾದ ವೆಂಕಟಸ್ವಾಮಿ, ಬಿ.ಶಿವಕುಮಾರ್, ರತ್ನಪ್ಪ ಮೇಲಾಗಣಿ, ಸುರೇಶ್, ಮುಕುಂದ್, ಶ್ರೀಕಾಂತ್, ಮುರಳಿ ಮೋಹನ್‌, ಜಗದೀಶ್‌ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು