ಮಂಗಳವಾರ, ಜನವರಿ 26, 2021
16 °C
ಸರ್ಕಾರದ ವಿರುದ್ಧ ಪ್ರಗತಿಪರ ಸಂಘಟನೆಗಳ ಆಕ್ರೋಶ

ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಪ್ರತಿ ಸುಟ್ಟು ಕೋಲಾರದಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ–2020 ಹಿಂಪಡೆಯುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಸದಸ್ಯರು ಇಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು ಸುಗ್ರೀವಾಜ್ಞೆಯ ಪ್ರತಿ ಸುಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರವು ವಿಧಾನ ಪರಿಷತ್‌ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿಲ್ಲ. ವಿಧಾನಸಭೆಯಲ್ಲಿ ಮಾತ್ರ ಮಸೂದೆಗೆ ಅನುಮೋದನೆ ಪಡೆದಿದ್ದ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯಪಾಲರಿಂದ ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿ ಮಾಡಿಸಿದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ತರಾತುರಿಯಲ್ಲಿ ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಜಾರಿ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಹೈನುಗಾರಿಕೆಯನ್ನೇ ಜೀವಾಳವಾಗಿಸಿಕೊಂಡಿರುವ ರೈತ ಕುಟುಂಬಗಳ ಆರ್ಥಿಕತೆಗೆ ಸರ್ಕಾರದ ಕ್ರಮದಿಂದ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರ ಜನರ ಆಹಾರದ ಹಕ್ಕನ್ನೇ ಕಸಿದುಕೊಂಡಿದೆ’ ಎಂದು ಕಿಡಿಕಾರಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಆರ್‌ಎಸ್ಎಸ್ ಅಜೆಂಡಾದಂತೆ ಸರ್ಕಾರ ನಡೆಸುತ್ತಿದೆ. ದೇಶದಲ್ಲಿ ಮನುವಾದಿಗಳು ಹೆಚ್ಚುತ್ತಿದ್ದಾರೆ. ಸಂವಿಧಾನ ತೆಗೆದು ಮನುವಾದ ಜಾರಿಗೊಳಿಸುವ ಹುನ್ನಾರ ಸದ್ದಿಲ್ಲದೆ ನಡೆಯುತ್ತಿದೆ’ ಎಂದು ಆರೋಪಿಸಿದರು.

ಹೈನುಗಾರಿಕೆಯಿಂದ ವಿಮುಖ: ‘ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್‌ನಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ್ದರಿಂದ ಅಲ್ಲಿನ ರೈತರು ಅನುಪಯುಕ್ತ ಹಸು, ಎಮ್ಮೆಗಳನ್ನು ಬೀದಿಯಲ್ಲಿ ಬಿಟ್ಟಿದ್ದಾರೆ. ಸಾಕಷ್ಟು ರೈತರು ಹೈನುಗಾರಿಕೆಯಿಂದ ವಿಮುಖರಾಗಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ರಾಜಪ್ಪ ಹೇಳಿದರು.

‘ಗೋಮಾಂಸ ನಿಷೇಧಿಸಿರುವ ಸರ್ಕಾರಗಳು ಗೋಮಾಂಸ ರಫ್ತು ಮಾಡಲು ಕಾರ್ಪೊರೇಟ್‌ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಿವೆ. ಗೋಮಾಂಸ ನಿಷೇಧದಿಂದ ಕೋಳಿ ಮಾಂಸದ ಬೆಲೆ ಏರಿಕೆಯಾಗುತ್ತದೆ. ಸರ್ಕಾರದ ಈ ಅವೈಜ್ಞಾನಿಕ ನೀತಿಗಳಿಂದ ಶ್ರೀಮಂತ ವ್ಯಾಪಾರಿಗಳಿಗೆ ಅನುಕೂಲ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ರೈತರಿಗೆ ಹೊರೆ: ‘ರೈತರು ಹೈನುಗಾರಿಕೆಯನ್ನು ಉಪ ಕಸುಬಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅನುಪಯುಕ್ತ ಜಾನುವಾರು, ಬಂಜೆತನದ ರಾಸುಗಳು ಮತ್ತು ಗಂಡು ಕರುಗಳ ಮಾರಾಟದಿಂದ ರೈತರಿಗೆ ಆರ್ಥಿಕವಾಗಿ ಸಹಾಯವಾಗುತ್ತಿತ್ತು. ಗೋಹತ್ಯೆ ನಿರ್ಬಂಧದಿಂದ ರೈತರಿಗೆ ಆರ್ಥಿಕ ಹೊರೆ ಬೀಳಲಿದೆ’ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

‘ಬಿಜೆಪಿ ಆಡಳಿತವಿರುವ ಗೋವಾ ರಾಜ್ಯದಲ್ಲಿ ಗೋಮಾಂಸದ ಕೊರತೆ ಉಂಟಾಗಿ ಗೋವುಗಳು ಮತ್ತು ಗೋಮಾಂಸ ಪೂರೈಸುವಂತೆ ಅಲ್ಲಿನ ಸರ್ಕಾರ ಇತರೆ ರಾಜ್ಯಗಳಿಗೆ ಮನವಿ ಮಾಡಿದೆ. ಕರ್ನಾಟಕದಲ್ಲಿ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುವುದನ್ನು ಬಿಟ್ಟು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧಿಸಿರುವುದು ಖಂಡನೀಯ. ಈ ಸುಗ್ರೀವಾಜ್ಞೆ ವಾಪಸ್‌ ಪಡೆಯದಿದ್ದರೆ ರಾಜ್ಯದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎನ್.ಶ್ರೀರಾಮ್, ದಲಿತ ಮುಖಂಡರಾದ ಐಪಲ್ಲಿ ನಾರಾಯಣಸ್ವಾಮಿ, ನಾಗೇಶ್, ರೈತ ಸಂಘ ಸದಸ್ಯರಾದ ಶಿವಪ್ಪ, ರಾಮೇಗೌಡ, ನಗರಸಭೆ ಮಾಜಿ ಸದಸ್ಯರಾದ ಸಲ್ಲಾವುದ್ದೀನ್ ಬಾಬು, ಅಫ್ರೋಜ್‌ ಪಾಷಾ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು