ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ದಾಳಿ ಖಂಡಿಸಿ ಪ್ರತಿಭಟನೆ

ಶತ್ರುರಾಷ್ಟ್ರ ಪಾಕಿಸ್ತಾನದ ಕೈವಾಡ: ಪ್ರತಿಭಟನಾಕಾರರ ಆಕ್ರೋಶ
Last Updated 15 ಫೆಬ್ರುವರಿ 2019, 13:25 IST
ಅಕ್ಷರ ಗಾತ್ರ

ಕೋಲಾರ: ಕಾಶ್ಮೀರದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಉಗ್ರರ ದಾಳಿ ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ಇಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

‘ಉಗ್ರರ ದಾಳಿ ಹಿಂದೆ ಶತ್ರು ರಾಷ್ಟ್ರ ಪಾಕಿಸ್ತಾನದ ಕೈವಾಡವಿದೆ. ಗಡಿ ವಿಷಯವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನವು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಭಯೋತ್ಪಾದನಾ ದಾಳಿ ಮೂಲಕ 42 ಯೋಧರನ್ನು ಬಲಿ ಪಡೆದಿರುವುದು ಅಮಾನವೀಯ ಕೃತ್ಯ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಪಾಕಿಸ್ತಾನವು ಒಂದೆಡೆ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಮತ್ತೊಂದೆಡೆ ಕದನ ವಿರಾಮ ಉಲ್ಲಂಘಿಸಿ ಜಮ್ಮು ಮತ್ತು ಕಾಶ್ಮೀರವನ್ನು ಅತಿಕ್ರಮಿಸುವ ಸಂಚು ಮಾಡಿದೆ. ಪಾಕಿಸ್ತಾನದ ಕುತಂತ್ರಕ್ಕೆ ದೇಶದ ಸೈನಿಕರು ಬಲಿಯಾಗಿದ್ದಾರೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ಕಿಡಿಕಾರಿದರು.

‘ದೇಶದಲ್ಲಿ ಪೊಲೀಸ್‌ ಮತ್ತು ಗುಪ್ತಚರ ಇಲಾಖೆ ವೈಫಲ್ಯದಿಂದ ಭಯೋತ್ಪಾದನಾ ಚಟುವಟಿಕೆಗಳು ತೀವ್ರಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿದ್ದಾರೆ. ಭಯೋತ್ಪಾದನಾ ಚಟುವಟಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಟೀಕಿಸಿದರು.

ರಕ್ಷಣೆ ಇಲ್ಲವಾಗಿದೆ: ‘ಚಳಿ, ಮಳೆ, ಬಿಸಿಲು ಲೆಕ್ಕಿಸದೆ ದೇಶದ ಗಡಿ ಕಾಯುತ್ತಿರುವ ಸೈನಿಕರ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಸೈನಿಕರ ಶ್ರಮದ ಫಲವಾಗಿ ಪ್ರಜೆಗಳು ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಆದರೆ, ಸೈನಿಕರಿಗೆ ರಕ್ಷಣೆ ಇಲ್ಲವಾಗಿದೆ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ವಿ.ಕೆ.ರಾಜೇಶ್‌ ಕಳವಳ ವ್ಯಕ್ತಪಡಿಸಿದರು.

‘ಕೇಂದ್ರವು ಹುತಾತ್ಮ ಯೋಧರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಆ ಮೂಲಕ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಬೇಕು. ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನ ಸೇನಾ ಪಡೆಗೆ ತಕ್ಕ ಪಾಠ ಕಲಿಸಬೇಕು. ದೇಶದ ಯೋಧರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಸಬೇಕು. ಭಯೋತ್ಪಾದನಾ ಚಟುವಟಿಕೆಗಳ ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹುತಾತ್ಮ ಯೋಧರ ಸ್ಮರಣಾರ್ಥ ಮೌನಾಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಚಂಬೆ ರಾಜೇಶ್, ಎಪಿಎಂಸಿ ಮಂಡಿ ಮಾಲೀಕ ಪುಟ್ಟರಾಜು, ದಲಿತ ಪ್ರಜಾಸೇನೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎಂ.ಮುನಿರಾಜು, ರವಿ ಬಿಇಡಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT