ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್ ವಿರುದ್ಧ ದಸಂಸ ಧರಣಿ

ಮತದಾರರ ಹೆಸರು ಕೈಬಿಟ್ಟು ವಂಚನೆ: ಆರೋಪ
Last Updated 9 ಮೇ 2019, 13:01 IST
ಅಕ್ಷರ ಗಾತ್ರ

ಕೋಲಾರ: ತಹಶೀಲ್ದಾರ್‌ ಶ್ರೀನಿವಾಸ್‌ಪ್ರಸಾದ್‌ ಅವರು ತಾಲ್ಲೂಕಿನ 18 ವರ್ಷ ವಯಸ್ಸಿನ ಯುವಕರಿಗೆ ಮತದಾನದ ಹಕ್ಕು ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಮತ್ತು ರೈತಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಇಲ್ಲಿನ ತಾಲ್ಲೂಕು ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

‘18 ವರ್ಷ ತುಂಬಿದ ಪ್ರತಿ ಪ್ರಜೆಗೂ ಮತದಾನದ ಹಕ್ಕಿದೆ. ಆದರೆ, ತಹಶೀಲ್ದಾರ್‌ ತಾಲ್ಲೂಕಿನ ಬೆಟ್ಟಹೊಸಪುರದಲ್ಲಿ ಯುವ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ವಂಚಿಸಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು.

‘ಕೇಂದ್ರ ಚುನಾವಣಾ ಆಯೋಗವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚುನಾವಣೆ ನಡೆಸುತ್ತದೆ. ಪ್ರತಿ ಪ್ರಜೆಗೂ ಮತದಾನದ ಹಕ್ಕು ಕಲ್ಪಿಸುವಂತೆ ಆಯೋಗ ಆದೇಶ ಹೊರಡಿಸಿದೆ. ಆದರೆ, ಕೋಲಾರ ತಾಲ್ಲೂಕಿನಲ್ಲಿ ತಹಶೀಲ್ದಾರ್‌ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಟ್ಟಹೊಸಪುರದ 19 ಯುವ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಾಗೇಶ್ ಹೇಳಿದರು.

‘ಲೋಕಸಭಾ ಚುನಾವಣೆಯಲ್ಲಿ ಬೆಟ್ಟಹೊಸಪುರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಲು ತಹಶೀಲ್ದಾರ್ ನೇರ ಕಾರಣ. ರಾಜಕೀಯ ದುರುದ್ದೇಶಕ್ಕೆ ಯುವ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ತಹಶೀಲ್ದಾರ್‌ ಮತದಾರರಿಗೆ ಸಂವಿಧಾನಬದ್ಧವಾಗಿ ಬಂದಿರುವ ಹಕ್ಕನ್ನೇ ಕಸಿದುಕೊಂಡಿದ್ದಾರೆ’ ಎಂದು ಕಿಡಿಕಾರಿದರು.

‘ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಲು ಇಷ್ಟು ದಿನ ಚುನಾವಣೆ ನೀತಿಸಂಹಿತೆಯ ನೆಪ ಹೇಳಿ ಕಾಲಹರಣ ಮಾಡುತ್ತಿದ್ದರು. ಚುನಾವಣೆ ಮುಗಿದರೂ ಅದೇ ಪ್ರವೃತ್ತಿ ಮುಂದುವರಿಸಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲ. ಅಧಿಕಾರಿಗಳು ಜನ ವಿರೋಧ ನೀತಿ ಅನುಸರಿಸುತ್ತಿದ್ದಾರೆ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗಿರುವ ಬಗ್ಗೆ ತನಿಖೆ ನಡೆಸಬೇಕು. ಈ ಮತದಾರರಿಗೆ ಶೀಘ್ರವೇ ಗುರುತಿನ ಚೀಟಿ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ತಹಶೀಲ್ದಾರ್‌ರನ್ನು ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸಮಿತಿ ಸದಸ್ಯರಾದ ನಾಗರಾಜ್, ಜಿ.ಎಂ.ರವಿ, ಎನ್.ರಮೇಶ್, ಮಂಜುನಾಥ್‌, ಹನುಮಪ್ಪ, ಎಸ್.ಎಂ.ಸುಬ್ರಮಣಿ, ರವಿಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT