ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಪೊಲೀಸರ ವೈಫಲ್ಯ ಖಂಡಿಸಿ ಪ್ರತಿಭಟನೆ

ನಾರಾಯಣಪ್ಪ ಕೊಲೆ ಪ್ರಕರಣದ ಆರೋಪಿಗಳಿಗೆ ಜನಪ್ರತಿನಿಧಿಗಳ ರಕ್ಷಣೆ: ಸಂತ್ರಸ್ತ ಕುಟುಂಬದ ಆರೋಪ
Last Updated 31 ಮೇ 2022, 4:31 IST
ಅಕ್ಷರ ಗಾತ್ರ

ಕೆಜಿಎಫ್‌: ಬೀರನಕುಪ್ಪದ ಬೋವಿ ಜನಾಂಗದ ನಾರಾಯಣಪ್ಪ ಅವರ ಕೊಲೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸದೆ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ಬೀರನಕುಪ್ಪ ಗ್ರಾಮದಿಂದ ಕೆಜಿಎಫ್ ವರೆಗೆ ಸಮುದಾಯದ ಮುಖಂಡರು ಕಾಲ್ನಡಿಗೆ ಜಾಥಾ ನಡೆಸಿದರು.

ಬೋವಿ ಸಮುದಾಯದ ಜೊತೆಗೆ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೇತಮಂಗಲದಿಂದ ಕ್ಯಾಸಂಬಳ್ಳಿ ಮಾರ್ಗವಾಗಿ ಬೀರನಕುಪ್ಪಕ್ಕೆ ಬಂದ ಪ್ರತಿಭಟನಕಾರರು ಪೊಲೀಸರ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು. ನಂತರ ಅಲ್ಲಿಂದ ಕಾಲ್ನಡಿಗೆಯಲ್ಲಿ ಸುಮಾರು 6 ಕಿ.ಮೀ ನಡೆದು ರಾಬರ್ಟಸನ್‌ಪೇಟೆಗೆ ಬಂದರು. ಸೂರಜ್‌ ಮಲ್‌ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು. ನಂತರ ಅಂಬೇಡ್ಕರ್ ಉದ್ಯಾನದಲ್ಲಿ ಸಮಾವೇಶಗೊಂಡರು.

ಮುಖಂಡ ಸಿ.ವಿ. ಗೋಪಾಲ್‌ ಮಾತನಾಡಿ, ನಾರಾಯಣಪ್ಪ ಕುಟುಂಬದ ನಾಲ್ವರನ್ನು ಜೀವಂತವಾಗಿ ಸುಟ್ಟುಹಾಕುವ ಯತ್ನ ನಡೆದಿತ್ತು. ಮಳೆ, ಗಾಳಿಯಿಂದ ಪ್ರಯತ್ನ ವಿಫಲವಾಯಿತು. ನಂತರ ಮನೆ ಮೇಲೆ ದಾಳಿ ನಡೆಸಿ ಬರ್ಬರವಾಗಿ ನಾರಾಯಣಪ್ಪನನ್ನು ಕೊಲೆ ಮಾಡಲಾಗಿದೆ ಎಂದು ದೂರಿದರು.

ನಾರಾಯಣಪ್ಪ ಅವರ ಪತ್ನಿ ಲಕ್ಷ್ಮಮ್ಮ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಇಷ್ಟೆಲ್ಲಾ ನಡೆದಿದ್ದರೂ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಮೃತ ನಾರಾಯಣಪ್ಪ ಅವರ ತಿಥಿ ಮಾಡಲು ಕೂಡ ಅವಕಾಶ ಕೊಡಲಿಲ್ಲ ಎಂದು ಟೀಕಿಸಿದರು.

ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ, ಮಾಜಿ ಶಾಸಕ ವೈ. ಸಂಪಂಗಿ, ಸಂಸದ ಎಸ್‌. ಮುನಿಸ್ವಾಮಿ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಸಂಸದರು ಮನಸ್ಸು ಮಾಡಿದ್ದರೆ ಪ್ರಕರಣದ ಬಗ್ಗೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿತ್ತು. ಬಿಜೆಪಿ ಮುಖಂಡರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ದೂರಿದರು.

ನಾರಾಯಣಪ್ಪ ಕುಟುಂಬಕ್ಕೆ ಪೊಲೀಸರು ತೊಂದರೆ ಕೊಟ್ಟಿದ್ದಾರೆ. ಸುಳ್ಳು ಪ್ರಕರಣ ದಾಖಲಿಸಿ ಅವ ರನ್ನು ಜೈಲಿಗೆ ಕಳಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಪಿ ಕೃಷ್ಣಾರೆಡ್ಡಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ತನಿಖಾಧಿಕಾರಿಯಾದ ಡಿವೈಎಸ್‌ಪಿ ಯನ್ನು ಬದಲಾಯಿಸಬೇಕು. ಪ್ರಕರಣ ವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು. ಆರೋಪಿ ಪುರುಷೋತ್ತಮ ರೆಡ್ಡಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘಟನೆಯ ಮುಖಂಡ ಹೂವರಸನಹಳ್ಳಿ ರಾಜಪ್ಪ ಮಾತನಾಡಿ, ತಾಲ್ಲೂಕಿನ ನಾಗಲಾಪಲ್ಲಿಯಲ್ಲಿ ದಲಿತರ ನರಮೇಧವಾಯಿತು. ಕಂಬಾಲಪಲ್ಲಿ ಯಲ್ಲಿಯೂ ನರಮೇಧ ನಡೆಯಿತು. ಎಲ್ಲವೂ ಪೊಲೀಸರ ನಿರ್ಲಕ್ಷ್ಯದಿಂದಲೇ ನಡೆದಿವೆ ಎಂದು ಟೀಕಿಸಿದರು.

ಇದೇ ರೀತಿ ನಾರಾಯಣಪ್ಪ ಕೊಲೆ ಕೂಡ ನಡೆದಿದೆ. ಭೂ ಮಾಲೀಕರನ್ನು ಪ್ರಶ್ನಿಸುವ ದಲಿತರನ್ನು ಕೊಲೆ ಮಾಡುವ ಮಟ್ಟಕ್ಕೆ ಭೂ ಮಾಲೀಕರು ಬಂದಿದ್ದಾರೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಮುಖಂಡರಾದ ಮೀಸೆ ರಂಗಣ್ಣ, ಮುನಿರಾಜು ಮಾತನಾಡಿ, ಆರೋಪಿ ಗಳನ್ನು ಬಂಧಿಸದೆ ಪಕ್ಷಪಾತ ಧೋರಣೆ ತೋರಿದರೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಮಾಲೂರು ಲೋಕೇಶ್‌, ಬೆನ್ನವಾರ ವೆಂಕಟೇಶ್‌, ಜೆಸಿಬಿ ನಾರಾಯಣಪ್ಪ, ಬಾಬು ಮಾತನಾಡಿದರು. ಮೃತ ನಾರಾಯಣಪ್ಪ ಕುಟುಂಬದವರು ಹಾಜರಿದ್ದರು.

‘ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ನೀಡಲಾಗಿರುವ ಮನವಿ ಯನ್ನು ಪರಿಶೀಲಿಸಲಾಗುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಧರಣಿದೇವಿ ಮಾಲಗತ್ತಿ
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT