ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ ನಗರ ನಿವಾಸಿಗಳಿಂದ ಪ್ರತಿಭಟನೆ

ಕೆಜಿಎಫ್‌: ಮನೆಗಳನ್ನು ಉಳಿಸುವಂತೆ ಗ್ರಾಮಸ್ಥರ ಮನವಿ
Last Updated 18 ಸೆಪ್ಟೆಂಬರ್ 2020, 6:56 IST
ಅಕ್ಷರ ಗಾತ್ರ

ಕೆಜಿಎಫ್‌: ಸರ್ಕಾರದ ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಕಟ್ಟಿರುವ ಮನೆಗಳನ್ನು ‘ಒತ್ತುವರಿ ಮಾಡಿಕೊಂಡು ಕಟ್ಟಿರುವ ಮನೆ’ಗಳೆಂದು ಅಧಿಕಾರಿಗಳು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿ ಗೌತಮನಗರದ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಗೌತಮನಗರ ಬಡಾವಣೆಯ ಪೂರ್ವಕ್ಕಿರುವ ಗೌಡನ ಕೆರೆ ಒತ್ತುವರಿ ತೆರವು ಕಾರ್ಯ ಬುಧವಾರದಂದು ನಡೆದಿತ್ತು. ಆ ಸಂದರ್ಭದಲ್ಲಿ ಕಂದಾಯ ಮತ್ತು ಜಿಲ್ಲಾ ಪಂಚಾಯತಿ ಇಲಾಖೆಯ ಅಧಿಕಾರಿಗಳು ಕೆರೆಯ ವ್ಯಾಪ್ತಿ ಹಿಗ್ಗಿಸಿದ್ದಾರೆ. ಕೆರೆಯಲ್ಲಿ ಮನೆಗಳನ್ನು ಕಟ್ಟಲಾಗಿದೆ ಎಂದು ಆರೋಪಿಸಿದ್ದಾರೆ. ಅನೇಕ ವರ್ಷಗಳಿಂದ ಸ್ವಂತ ಮನೆಯಲ್ಲಿ ವಾಸ ಮಾಡುತ್ತಿರುವ ನಿವಾಸಿಗಳು ಅಧಿಕಾರಿಗಳ ವರ್ತನೆಯಿಂದ ಭೀತಿಗೊಳಗಾಗಿದ್ದಾರೆ. ಇಡೀ ಜೀವಮಾನವೆಲ್ಲಾ ಗಳಿಸಿ ಕಟ್ಟಿದ ಮನೆಗಳನ್ನು ಅನಧಿಕೃತ ಎಂದು ಘೋಷಿಸಿ, ನಿವಾಸಿಗಳಿಗೆ ಆತಂಕವನ್ನು ಉಂಟು ಮಾಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದರು.

ಅಧಿಕಾರಿಗಳು ಹೇಳುತ್ತಿರುವ ಮನೆಗಳ ನಿವೇಶನಗಳನ್ನು ಹರಾಜಿನಲ್ಲಿ ಖರೀದಿ ಮಾಡಲಾಗಿತ್ತು. ನಗರಸಭೆಯು 2003ರ ಮೇ 28ರಂದು ಹರಾಜು ಮಾಡಿತ್ತು. ಗೌತಮ ನಗರದ ಎರಡನೇ ಹಂತ, ಬಿ.ಆರ್. ಅಂಬೇಡ್ಕರ್‌ ನಗರ ಮತ್ತು ರಿಮ್ಯಾಂಡ್‌ ಹೋಂ ವಸತಿ ಗೃಹಗಳ ಹಿಂದಿನ ಪ್ರದೇಶದಲ್ಲಿ ನಿವೇಶನಗಳನ್ನು ಹರಾಜು ಮಾಡಲಾಗಿತ್ತು. ಹರಾಜಿನಲ್ಲಿ ಖರೀದಿ ಮಾಡಿದ ನಿವೇಶನಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಕ್ಷೆಯಲ್ಲಿ ಅನುಮೋದಿಸಿ ಕಟ್ಟಡ ಕಟ್ಟಲು ಪರವಾನಿಗೆ ಪಡೆಯಲಾಗಿತ್ತು. ನಗರಸಭೆಯಲ್ಲಿ ಖಾತೆ ಕೂಡ ಮಾಡಲಾಗಿದೆ. ಇಂತಹ ಮನೆಗಳನ್ನು ಈಗ ಅನಧಿಕೃತ ಎಂದು ಹೇಳುವುದು ಯಾವ ನ್ಯಾಯ ಎಂದು ನಿವಾಸಿಗಳು ಪ್ರಶ್ನಿಸಿದರು.

ಕೆಲವು ರಾಜಕೀಯ ಮುಖಂಡರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ಕೆರಯ ವ್ಯಾಪ್ತಿ ಹಿಗ್ಗಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಮಸ್ಕಂನ ಕೆಲ ನಿವಾಸಿಗಳು ಕೂಡ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಯಾವುದೇ ಕಾರಣದಿಂದಲೂ ಮನೆಗಳನ್ನು ತೆರವು ಮಾಡುವ ಪ್ರಶ್ನೆಯೇ ಇಲ್ಲ. ಜೀವವನ್ನು ಕೊಡುತ್ತೇವೆಯೇ ಹೊರೆತು ಮನೆಗಳನ್ನು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವಾಸಿಗಳ ಬಗ್ಗೆ ಜನ ಪ‍್ರತಿನಿಧಿಗಳು ಕರುಣೆ ತೋರಬೇಕು. ಅವರಿಗೆ ನ್ಯಾಯ ಒದಗಿಸಬೇಕು. ಕೆಲವು ದಿನಗಳಿಂದ ನಿದ್ದೆ ಮತ್ತು ಊಟ ಮಾಡದೆ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಕಾಂಗ್ರೆಸ್‌ ಮುಖಂಡ ನಂದಕುಮಾರ್‌, ಕಾರ್ಮಿಕ ಮುಖಂಡ ಎ.ಆರ್.ಬಾಬು, ನಿವಾಸಿಗಳಾದ ಯಶ್ವಂತ್, ಜಯಕುಮಾರ್, ಲೂಯಿಸ್‌, ರಾಜು, ಗುಣಶೇಖರ್‌, ಇನ್‌ಫ್ಯಾಂಟ್‌, ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT