ಶನಿವಾರ, ಮಾರ್ಚ್ 6, 2021
28 °C
ಮಾರುಕಟ್ಟೆ ಅಂಗಡಿಗಳ ಇ ಹರಾಜಿಗೆ ಭಾರೀ ವಿರೋಧ

ಸಾವಿರಾರು ವರ್ತಕರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ರಾಬರ್ಟ್‌ಸನ್‌ಪೇಟೆ ನಗರಸಭೆಗೆ ಸೇರಿದ ಅಂಗಡಿಗಳನ್ನು ಇ–ಹರಾಜು ಹಾಕುವುದನ್ನು ಕೈಬಿಟ್ಟು ಹೆಚ್ಚುವರಿ ಹಣ ಪಡೆದು ಹಾಲಿ ಅಂಗಡಿ ಮಾಲೀಕರಿಗೆ ಅಂಗಡಿಗಳನ್ನು ನೀಡಬೇಕು ಎಂದು ಒತ್ತಾಯಿಸಿ ಅಂಗಡಿ ಮಾಲೀಕರು ಸೋಮವಾರ ಪ್ರತಿಭಟನೆ ನಡೆಸಿದರು.

ರಾಬರ್ಟ್‌ಸನ್‌ ಪೇಟೆ, ಆಂಡರ್‌ಸನ್‌ಪೇಟೆ, ಸ್ಯಾನಿಟರಿ ಬೋರ್ಡ್‌ ಮತ್ತು ನಗರಸಭೆ ಮೈದಾನದ ಬಳಿಯ ಒಟ್ಟು 1,779 ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ನಗರಸಭೆಗೆ ಸೇರಿದ ಅಂಗಡಿಗಳನ್ನು ಇ– ಹರಾಜು ಮಾಡುವ ಪ್ರಕ್ರಿಯೆಗೆ ನಗರಸಭೆ ಚಾಲನೆ ನೀಡಿದ್ದರಿಂದ ಆತಂಕಗೊಂಡಿರುವ ವರ್ತಕರು ನಗರಸಭೆಯಿಂದ ಭೂಮಿ ಪಡೆದು, ಅದರ ಮೇಲೆ ಸ್ವಂತ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಿಕೊಂಡಿರುವ ವರ್ತಕರಿಗೆ ಮುಂದಿನ ಹನ್ನೆರಡು ವರ್ಷಗಳ ಕಾಲ ಬಾಡಿಗೆಗೆ ನೀಡಬೇಕು. ಯಾವುದೇ ಕಾರಣದಿಂದಲೂ ಇ ಹರಾಜು ಹಾಕಬಾರದು. ನಗರದ ಸುಮಾರು 20 ಸಾವಿರ ಕುಟುಂಬಗಳು ಮಾರುಕಟ್ಟೆಯ ಅಂಗಡಿಗಳಿಂದ ಜೀವನ ನಡೆಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವ್ಯಾಪಾರ ಇಲ್ಲದೆ ಸಾವಿರಾರು ವರ್ತಕರು ಸಾಲಗಾರರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಹರಾಜು ಪ್ರಕ್ರಿಯೆ ನಡೆಸಿದರೆ ದುಬಾರಿ ಬಾಡಿಗೆ ನೀಡಲು ಸಾಧ್ಯವಾಗುವುದಿಲ್ಲ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖಂಡರನ್ನು ಒತ್ತಾಯಿಸಿದ ವರ್ತಕರು, ಅಂಗಡಿ ವಿಷಯದಲ್ಲಿ ರಾಜಕೀಯ ಮಾಡಬೇಡಿ. ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡುವುದಿಲ್ಲ. ಕೊನೆ ಅವಕಾಶ ಕೊಡಿ. ಬಹುತೇಕ ಹಿಂದುಳಿದ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ವರ್ತಕರನ್ನು ಬೀದಿಗೆ ತಳ್ಳಬಾರದು ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ, ಇ–ಹರಾಜಿನಲ್ಲಿ ಈಗಿನ ಕೌನ್ಸಿಲ್ ಪಾತ್ರ ಏನೂ ಇಲ್ಲ. ವರ್ತಕರಿಗೆ ಅನುಕೂಲವಾಗುವ ವಿಷಯವಿದ್ದರೆ, ಮನವಿ ಕೊಡಿ. ಅದನ್ನು ಸರ್ಕಾರಕ್ಕೆ ಕೊಟ್ಟು ಮನವೊಲಿಸುವ ಕೆಲಸ ಮಾಡುತ್ತೇನೆ ಎಂದರು.

ವರ್ತಕರಿಂದ ₹106 ಕೋಟಿ ಬಾಕಿ ಹಣವನ್ನು ವಸೂಲಿ ಮಾಡಿ ಎಂದು ಯಾವುದೇ ನ್ಯಾಯಾಲಯ ಆದೇಶ ಮಾಡಿಲ್ಲ. ಈ ಸಂಬಂಧವಾಗಿ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ವರ್ತಕರಿಂದ ನಗರಸಭೆ ಹಣ ವಸೂಲಿ ಮಾಡುವುದಿಲ್ಲ. ಇ ಟೆಂಡರ್‌ ತೀರ್ಮಾನ ತೆಗೆದುಕೊಂಡಿರುವುದು ರಾಜ್ಯ ಸರ್ಕಾರವೇ ಹೊರೆತು ನಗರಸಭೆ ಅಲ್ಲ ಎಂದು ಹೇಳಿದರು.

ನಗರಸಭೆ ಸದಸ್ಯ ಜಯಪಾಲ್‌, ರಮೇಶ್‌ಕುಮಾರ್‌, ಕಾಂ‌ಗ್ರೆಸ್ ಮುಖಂಡ ಬಿ.ಕಾರ್ತಿಕ್‌, ವರ್ತಕರ ಸಂಘದ ಅಧ್ಯಕ್ಷ ದೇವೆಂದ್ರನ್‌, ಎಪಿಎಲ್ ರಂಗನಾಥ್‌, ಶಕ್ತಿವೇಲ್‌, ಮೊಹಮದ್‌ ಅಮೀರ್‌, ಪ್ರಕಾಶ್ ಚಂದ್‌, ಸಾಜಿದ್‌, ದೇವನ್‌, ಶ್ರೀಕಾಂತ್‌, ಜಾವಿದ್‌, ಮೂರ್ತಿ, ಜೈಪ್ರಕಾಶ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು