ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿದು ಪ್ರತಿಭಟನೆ: ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹ

ಕೋಲಾರ ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ
Last Updated 21 ಮೇ 2020, 15:32 IST
ಅಕ್ಷರ ಗಾತ್ರ

ಕೋಲಾರ: ರೈತ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ವಿರುದ್ಧ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದ್ದು, ವಿವಿಧ ಸಂಘಟನೆಗಳ ಸದಸ್ಯರು ಲಾಕ್‌ಡೌನ್‌ ನಡುವೆಯೂ ಗುರುವಾರ ರಸ್ತೆಗಿಳಿದು ಪ್ರತಿಭಟನೆ ಮಾಡಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಲ್ಲಿ ಮಾಧುಸ್ವಾಮಿಯವರ ಪ್ರತಿಕೃತಿ ದಹಿಸಲು ಯತ್ನಿಸಿದರು. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡದಿದ್ದರಿಂದ ಪರಸ್ಪರ ಮಾತಿನ ಚಕಮಕಿ ನಡೆಯಿತು.

‘ಸಚಿವ ಮಾಧುಸ್ವಾಮಿ ಅವರಿಗೆ ಅಧಿಕಾರದ ಮದವೇರಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಸಚಿವ ಸ್ಥಾನದ ಘನತೆ ಮರೆತು ರೈತ ಮಹಿಳೆ ವಿರುದ್ಧ ಕಟುವಾಗಿ ಮಾತನಾಡಿದ್ದಾರೆ. ಸಾರ್ವಜನಿಕವಾಗಿ ಹೆಣ್ಣು ಮಗಳಿಗೆ ಅಗೌರವ ತೋರುವ ಮೂಲಕ ಇಡೀ ಮಹಿಳಾ ಸಮುದಾಯವನ್ನು ಅವಮಾನಿಸಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ಜನಪ್ರತಿನಿಧಿಗಳು ಜನ ಸೇವಕರಾಗಿರಬೇಕು. ಆದರೆ, ಮಾಧುಸ್ವಾಮಿ ಅವರು ಜನಪ್ರತಿನಿಧಿ ಎಂಬುದನ್ನು ಮರೆತು ಗೂಂಡಾ ರೀತಿ ವರ್ತಿಸುತ್ತಿದ್ದಾರೆ. ಜನರ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿಯಿಲ್ಲ. ಸಭ್ಯತೆಯ ಎಲ್ಲೆ ಮೀರಿರುವ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ’ ಎಂದು ಕಿಡಿಕಾರಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಸದಸ್ಯರಾದ ಹರಿಕುಮಾರ್, ನಾಗರಾಜ್, ಅನುಶ್ರೀ, ಪವಿತ್ರಾ, ಕಾವ್ಯಾಂಜಲಿ, ಹನುಮಯ್ಯ ಪಾಲ್ಗೊಂಡರು.

ಬುದ್ಧಿ ಭ್ರಮಣೆ: ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಿದ ನಂಜುಂಡಸ್ವಾಮಿ ಬಣದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು, ‘ಸಚಿವ ಮಾಧುಸ್ವಾಮಿ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಹೋರಾಟಗಾರರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿರುವ ಅವರಿಗೆ ಬುದ್ಧಿ ಭ್ರಮಣೆಯಾಗಿದೆ’ ಎಂದು ವ್ಯಂಗ್ಯವಾಡಿದರು.

‘ರೈತ ಮಹಿಳೆ ವಿರುದ್ಧ ಕೆಟ್ಟ ಪದ ಬಳಕೆ ಮಾಡಿರುವ ಮಾಧುಸ್ವಾಮಿ ರಾಜ್ಯದ ಮಾನ ಹರಾಜು ಹಾಕಿದ್ದಾರೆ. ಅವರಿಗೆ ನೈತಿಕತೆಯಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಯವರೇ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮುಶಿವಣ್ಣ, ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ನೀರಾವರಿ ಹೋರಾಟಗಾರರಾದ ವೆಂಕಟೇಶ್, ಶ್ರೀನಿವಾಸ್ ಪಾಲ್ಗೊಂಡರು.

ಸಚಿವರ ವರ್ತನೆ ಖಂಡಿಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ಉಪಾಧ್ಯಕ್ಷೆ ವಿ.ಗೀತಾ, ‘ಕೆರೆಗಳನ್ನು ಭೂಗಳ್ಳರಿಂದ ರಕ್ಷಿಸುವುದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯವರ ಆದ್ಯ ಕರ್ತವ್ಯ. ಆದರೆ, ಅವರು ಜವಾಬ್ದಾರಿ ಮರೆತು ಭೂಗಳ್ಳರ ರಕ್ಷಣೆಗಾಗಿ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಕಾನೂನಿನ ಅರಿವಿಲ್ಲದೆ ರೈತ ಮಹಿಳೆ ವಿರುದ್ಧ ನಾಲಿಗೆ ಹರಿಬಿಟ್ಟಿರುವ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT