ಮಂಗಳವಾರ, ಜುಲೈ 5, 2022
26 °C

ಎಂಇಎಸ್ ನಿಷೇಧಕ್ಕೆ ಆಗ್ರಹ: ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಸದಸ್ಯರು ಇಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

ಗಾಂಧಿವನದಿಂದ ಚಂಪಕ್‌ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಶಿವಸೇನೆ ಮತ್ತು ಎಂಇಎಸ್‌ ಕಾರ್ಯಕರ್ತರು ಕನ್ನಡದ ಬಾವುಟಕ್ಕೆ ಬೆಂಕಿ ಹಚ್ಚಿ ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನಗೊಳಿಸಿ ಪುಂಡಾಟಿಕೆ ನಡೆಸಿದ್ದಾರೆ. ಭಾಷೆ ಮತ್ತು ಗಡಿ ವಿಚಾರವಾಗಿ ಪದೇಪದೇ ಕ್ಯಾತೆ ತೆಗೆದು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ’ ಎಂದು ಕನ್ನಡ ಪಕ್ಷ ಜಿಲ್ಲಾ ಘಟಕದ ಅಧ್ಯಕ್ಷ ಕೋ.ನಾ.ಪ್ರಭಾಕರ್ ಕಿಡಿಕಾರಿದರು.

‘ಮರಾಠ ಮಹಾಮೇಳಕ್ಕೆ ಸರ್ಕಾರ ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ ಎಂಇಎಸ್‌ ಪುಂಡರು ಕನ್ನಡ ಬಾವುಟ ಸುಟ್ಟು ಅವಮಾನಿಸಿದ್ದಾರೆ. ಮಹಾರಾಷ್ಟ್ರದ ಗೂಂಡಾಗಳು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಹೆಚ್ಚಾಗುತ್ತಿದೆ’ ಎಂದು ಗುಡುಗಿದರು.

‘ಭಾಷಾವಾರು ಪ್ರಾಂತ್ಯ ವಿಂಗಡಣೆ ಬಳಿಕ ಮಹಾರಾಷ್ಟ್ರ ಸರ್ಕಾರ ಹಾಗೂ ಅಲ್ಲಿನ ರಾಜಕಾರಣಿಗಳ ಪ್ರಚೋದನೆಯಿಂದ ಎಂಇಎಸ್‌ ಮತ್ತು ಶಿವಸೇನೆ ಕಾರ್ಯಕರ್ತರು ಬೆಳಗಾವಿಯಲ್ಲಿ ನಾಡದ್ರೋಹಿ ಕೆಲಸ ಮಾಡುತ್ತಿವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಚಂಬೆ ರಾಜೇಶ್ ದೂರಿದರು.

‘ರಾಜ್ಯದ ಅವಿಭಾಜ್ಯ ಅಂಗವಾದ ಬೆಳಗಾವಿಯು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಕರ್ಮಭೂಮಿ. ರಾಜ್ಯದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸಹೋದರರಂತೆ ಇದ್ದಾರೆ. ಆದರೆ, ಮಹಾರಾಷ್ಟ್ರದ ಕೆಲ ಪುಂಡರು ಬೆಳಗಾವಿ ವಿಚಾರವಾಗಿ ಕನ್ನಡಿಗರನ್ನು ಕೆಣಕುತ್ತಿದ್ದಾರೆ. ಎಂಇಎಸ್ ಸಂಘಟನೆಯು ಮರಾಠಿ ಸಮುದಾಯವನ್ನು ಕನ್ನಡಿಗರ ಮೇಲೆ ಎತ್ತಿಕಟ್ಟಿ ಸಾಮರಸ್ಯ ಹಾಳು ಮಾಡುತ್ತಿದೆ’ ಎಂದು ಆರೋಪಿಸಿದರು.

ಮಹಾರಾಷ್ಟ್ರದ ನೆರವು: ‘ಬೆಳಗಾವಿಯನ್ನು ಕಾನೂನಾತ್ಮಕವಾಗಿ ಪಡೆದುಕೊಳ್ಳಲು ವಿಫಲವಾಗಿರುವ ಮಹಾರಾಷ್ಟ್ರದ ರಾಜಕೀಯ ನಾಯಕರು ವಾಮಮಾರ್ಗದಲ್ಲಿ ಕುತಂತ್ರ ನಡೆಸುತ್ತಿದ್ದಾರೆ. ಎಂಇಎಸ್‌ಗೆ ಮಹಾರಾಷ್ಟ್ರ ಸರ್ಕಾರ ಹಣಕಾಸು ನೆರವು ನೀಡುತ್ತಿದೆ. ಬೆಳಗಾವಿಯ ಕೆಲ ಜನಪ್ರತಿನಿಧಿಗಳು ರಾಜಕೀಯ ಲಾಭಕ್ಕಾಗಿ ನಾಡದ್ರೋಹಿ ಸಂಘಟನೆಗಳ ಜತೆ ಕೈಜೋಡಿಸಿದ್ದಾರೆ. ಅವರಿಗೆ ರಾಜ್ಯದ ರಕ್ಷಣೆ ಬೇಕಿಲ್ಲ. ಸರ್ಕಾರವು ರಾಜ್ಯದಲ್ಲಿ ಶಿವಸೇನೆ ಹಾಗೂ ಎಂಇಎಸ್ ನಿಷೇಧಿಸಲು ಮೀನಮೇಷ ಎಣಿಸುತ್ತಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಎಂಇಎಸ್‌ ಹಾಗೂ ಶಿವಸೇನೆ ನಿಷೇಧಿಸಬೇಕು. ಕನ್ನಡದ ಬಾವುಟ ಸುಟ್ಟಿರುವ ಮತ್ತು ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸಿರುವ ನಾಡದ್ರೋಹಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ರಾಜ್ಯದೆಲ್ಲೆಡೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಕನ್ನಡಪರ ಹೋರಾಟಗಾರರಾದ ಅ.ಕೃ.ಸೋಮಶೇಖರ್, ವೆಂಕಟಪ್ಪ, ವಿಷ್ಣು, ಜಯದೇವ ಪ್ರಸನ್ನ, ಮಂಜುನಾಥ್, ಶಿವಚಂದ್ರಪ್ಪ, ಸುಧೀರ್‌ಕುಮಾರ್, ಶೇಷಾದ್ರಿ, ಕೆ.ಆರ್.ತ್ಯಾಗರಾಜ್, ಸತೀಶ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು