ಬುಧವಾರ, ನವೆಂಬರ್ 20, 2019
25 °C
ಪಶ್ಚಿಮ ಬಂಗಾಳ: ಎಸ್‌ಎಫ್‌ಐ– ಡಿವೈಎಫ್‌ಐ ಸದಸ್ಯರ ಮೇಲೆ ದೌರ್ಜನ್ಯ

ಸರ್ಕಾರದ ವಿರುದ್ಧ ಧರಣಿ: ರಸ್ತೆತಡೆ

Published:
Updated:
Prajavani

ಕೋಲಾರ: ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ವೇಳೆ ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಸದಸ್ಯರ ಮೇಲೆ ತೃಣಮೂಲ ಕಾಂಗ್ರೆಸ್‌ ಸರ್ಕಾರ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಸದಸ್ಯರು ಇಲ್ಲಿ ಶನಿವಾರ ಧರಣಿ ಮಾಡಿದರು.

‘ಎಲ್ಲಾ ವರ್ಗದವರಿಗೂ ಉದ್ಯೋಗ ಹಾಗೂ ಶಿಕ್ಷಣದ ಹಕ್ಕು ನೀಡುವಂತೆ ಒತ್ತಾಯಿಸಿ ಪಾದಯಾತ್ರೆ ಮಾಡಿ ಹೋರಾಟ ನಡೆಸುತ್ತಿದ್ದ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸದಸ್ಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲಿನ ಸರ್ಕಾರ ಪೊಲೀಸ್‌ ಬಲ ಬಳಸಿಕೊಂಡು ಹೋರಾಟ ಹತ್ತಿಕ್ಕಲು ಯತ್ನಿಸಿದೆ’ ಎಂದು ಧರಣಿನಿರತರು ಕೆಎಸ್ಆರ್‌ಟಿಸಿ ವೃತ್ತದಲ್ಲಿ ರಸ್ತೆತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

‘ಸಂಘಟನೆಯ ಸುಮಾರು 35 ಸಾವಿರ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಾದಯಾತ್ರೆ ಕೋಲ್ಕೊತ್ತಾ ಪ್ರವೇಶಿಸಿದಾಗ ಪೊಲೀಸರು ಜಲಪಿರಂಗಿ ಬಳಸಿದ್ದಾರೆ ಹೋರಾಟಗಾರರನ್ನು ಚದುರಿಸಿದ್ದಾರೆ. ಆಗ ಹಲವು ಸದಸ್ಯರು ಗಾಯಗೊಂಡಿದ್ದಾರೆ’ ಎಂದು ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಾಸುದೇವರೆಡ್ಡಿ ದೂರಿದರು.

‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಗೂಂಡಾಗಿರಿ ನಡೆಸುತ್ತಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ತೃಣಮೂಲ ಕಾಂಗ್ರೆಸ್‌ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಮಮತಾ ಬ್ಯಾನರ್ಜಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ನಿರುದ್ಯೋಗ ತಾಂಡವ: ‘ಪಶ್ಚಿಮ ಬಂಗಾಳ ಸರ್ಕಾರ ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ವಿಫಲವಾಗಿದೆ. ನಿರುದ್ಯೋಗ ತಾಂಡವವಾಡುತ್ತಿದ್ದು, ವಿದ್ಯಾವಂತ ಯುವಕ ಯುವತಿಯರು ಕೆಲಸಕ್ಕೆ ಅಲೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಉದ್ಯೋಗದ ಹಕ್ಕಿಗಾಗಿ ಧ್ವನಿ ಎತ್ತಿದವರ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಲಾಗಿದೆ’ ಎಂದು ಧರಣಿನಿರತರು ಆರೋಪಿಸಿದರು.

‘ಪೊಲೀಸ್‌ ದೌರ್ಜನ್ಯ ಸಂಬಂಧ ನ್ಯಾಯಾಂಗ ತನಿಖೆ ನಡೆಸಬೇಕು. ಲಾಠಿ ಪ್ರಹಾರ ನಡೆಸಿರುವ ಪೊಲೀಸರನ್ನು ಅಮಾನತು ಮಾಡಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕು. ಪಶ್ಚಿಮ ಬಂಗಾಳ ಸರ್ಕಾರ ಜನವಿರೋಧಿ ಧೋರಣೆ ಕೈಬಿಟ್ಟು ಜನಪರವಾಗಿ ನಡೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಎಸ್‍ಎಫ್‍ಐ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಪ್ಪ, ಉಪಾಧ್ಯಕ್ಷ ಭೀರಾಜ್, ಜಿಲ್ಲಾ ಸಮಿತಿ ಸದಸ್ಯರಾದ ಆನಂದ್, ಅಂಕಿತಾ, ತಾಲ್ಲೂಕು ಘಟಕದ ಅಧ್ಯಕ್ಷೆ ಗಾಯಿತ್ರಿ, ಡಿವೈಎಫ್‌ಐ ಸದಸ್ಯರಾದ ಡಿವೈಎಫ್‍ಐ ವೇಣುಗೋಪಾಲ್, ಸಂತೋಷ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)