ಅರ್ಹರಿಗೆ ಸೌಲಭ್ಯ ಪಾರದರ್ಶಕವಾಗಿ ಕಲ್ಪಿಸಿ

ಸೋಮವಾರ, ಮೇ 27, 2019
23 °C
ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ ಸೂಚನೆ

ಅರ್ಹರಿಗೆ ಸೌಲಭ್ಯ ಪಾರದರ್ಶಕವಾಗಿ ಕಲ್ಪಿಸಿ

Published:
Updated:
Prajavani

ಕೋಲಾರ: ‘ಜಿಲ್ಲೆಯಲ್ಲಿ ಈಗಾಗಲೇ ವಸತಿರಹಿತರು ಹಾಗೂ ನಿವೇಶನರಹಿತರ ಪಟ್ಟಿ ಸಿದ್ಧಪಡಿಸಲಾಗಿದ್ದು, ಅರ್ಹರಿಗೆ ಮಾತ್ರ ಪಾರದರ್ಶಕವಾಗಿ ಸೌಲಭ್ಯ ಕಲ್ಪಿಸಿ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಮಂಜುಳಾ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಅರ್ಹರಲ್ಲದವರಿಗೆ ಯಾವುದೇ ಕಾರಣಕ್ಕೂ ಸರ್ಕಾರಿ ಸೌಲಭ್ಯ ನೀಡಬಾರದು. ಸರ್ಕಾರದ ಸವಲತ್ತು ದುರ್ಬಳಕೆಯಾಗದಂತೆ ಅಧಿಕಾರಿಗಳು ಫಲಾನುಭವಿಗಳನ್ನು ಆಯ್ಕೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ ಬರ ಪರಿಸ್ಥಿತಿಯಿದ್ದು, ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ತೀವ್ರಗೊಳ್ಳುವ ಸಂಭವವಿದೆ. ಆದ ಕಾರಣ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ನೀರಿನ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಿ. ಗ್ರಾಮೀಣ ಪ್ರದೇಶದಂತೆಯೇ ನಗರ ಪ್ರದೇಶದಲ್ಲೂ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಶೇ 11.69ಕ್ಕೂ ಹೆಚ್ಚಿನ ಅಪಾಯದ ಗರ್ಭಪಾತ ಪ್ರಕರಣಗಳು ಕಂಡುಬಂದಿವೆ. ಗರ್ಭಿಣಿಯರ ಆರೋಗ್ಯ ಹಾಗೂ ಪೌಷ್ಟಿಕತೆ ಉತ್ತಮಗೊಳಿಸಲು ಹಲವು ಯೋಜನೆಗಳಿದ್ದರೂ ಗರ್ಭಪಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಗರ್ಭಪಾತದ ಪ್ರಮಾಣವನ್ನು ಶೇ 10ಕ್ಕಿಂತ ಕಡಿಮೆ ಮಾಡಲು ಶ್ರಮಿಸಬೇಕು. ಹೆಚ್ಚಿನ ಅಪಾಯದ ಹೆರಿಗೆ ಪ್ರಕರಣಗಳ ಕಾರಣ ಪತ್ತೆ ಹಚ್ಚಿ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೀರಿನ ಸಮಸ್ಯೆ: ‘ಜಿಲ್ಲೆಯಲ್ಲಿ ಈವರೆಗೆ 183 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಈ ಪೈಕಿ 130 ಗ್ರಾಮಗಳ ಸಮಸ್ಯೆ ಬಗೆಹರಿಸಲಾಗಿದೆ. ಇದೇ ಮೊದಲ ಬಾರಿಗೆ ನೀರನ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. 39 ಖಾಸಗಿ ಕೊಳವೆ ಬಾವಿ ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾಹಿತಿ ನೀಡಿದರು.

‘ಕುಡಿಯುವ ನೀರಿಗೆ ಹೊಸದಾಗಿ ಕೊಳವೆ ಬಾವಿ ಕೊರೆಸಿದರೆ ಪೈಪ್‌ಲೈನ್‌ ಅಳವಡಿಸಲು ಪ್ರಾಕೃತಿಕ ವಿಕೋಪ ನಿಧಿ (ಸಿಆರ್ಎಫ್) ಅನುದಾನದಲ್ಲಿ ₹ 1.50 ಲಕ್ಷ ನೀಡಲಾಗುತ್ತಿದೆ. ಕೆ.ಸಿ ವ್ಯಾಲಿ ಯೋಜನೆ ನೀರು ಜಿಲ್ಲೆಗೆ ಹರಿಯುತ್ತಿದ್ದು, ಈಗಾಗಲೇ 9 ಕೆರೆ ತುಂಬಿವೆ. ಸದ್ಯದಲ್ಲೇ ಮಳೆಗಾಲ ಆರಂಭವಾಗಲಿದ್ದು, ಈ ಕೆರೆಗಳ ಆಸುಪಾಸಿನಲ್ಲಿ ಮಳೆಯಾದರೆ ಕಾಲುವೆಗಳು ತುಂಬಿ ಹರಿಯುತ್ತವೆ. ಕಾಲುವೆಗಳಿಗೆ ತಡೆಗೋಡೆ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಮೇವು ಲಭ್ಯವಿದೆ: ‘ಜಿಲ್ಲೆಯಲ್ಲಿ ಹಸಿರು ಮೇವಿನ ಕೊರತೆಯಾಗದಂತೆ ಕ್ರಮ ತೆಗೆದುಕೊಂಡಿದ್ದೇವೆ. ಈಗಾಗಲೇ ರೈತರಿಗೆ 80 ಸಾವಿರ ಮಿನಿಕಿಟ್‌ ವಿತರಿಸಿ ಹಸಿರು ಮೇವು ಬೆಳೆಯಲು ಪ್ರೋತ್ಸಾಹ ನೀಡಲಾಗಿದೆ. ಸಿಆರ್ಎಫ್ ಅನುದಾನದಲ್ಲಿ 20 ಸಾವಿರ ಮಿನಿಕಿಟ್‌ ವಿತರಿಸಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಹಸಿರು ಮೇವು ಲಭ್ಯವಿದೆ. ಜಿಲ್ಲೆಯ 2 ಕಡೆ ಮೇವು ಬ್ಯಾಂಕ್ ಸ್ಥಾಪಿಸಿ ಒಣ ಮೇವು ದಾಸ್ತಾನು ಮಾಡಿ ಅಗತ್ಯವಿರುವ ರೈತರಿಗೆ ನೀಡಲಾಗುತ್ತಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ 38,235 ವಸತಿರಹಿತ ಕುಟುಂಬಗಳು ಹಾಗೂ 9,069 ನಿವೇಶನ ರಹಿತ ಕುಟುಂಬಗಳಿವೆ. ಒಟ್ಟಾರೆ 47,304 ವಸತಿ ಹಾಗೂ ನಿವೇಶನರಹಿತ ಕುಟುಂಬಗಳನ್ನು ಗುರುತಿಸಲಾಗಿದೆ. ಈ ಕುಟುಂಬಗಳಿಗೆ ನಿವೇಶನ ನೀಡಲು ಈಗಾಗಲೇ ಜಮೀನು ನೀಡಲಾಗಿದೆ. 46,565 ಖಾಲಿ ನಿವೇಶನಗಳನ್ನು ಜಿಪಿಎಸ್ ಮಾಡಲಾಗಿದೆ’ ಎಂದರು.

‘ವಿವಿಧ ವಸತಿ ಯೋಜನೆಗಳಡಿ 57,224 ಮನೆ ನಿರ್ಮಾಣದ ಗುರಿ ಹೊಂದಲಾಗಿತ್ತು. ಇದರಲ್ಲಿ 56,798 ಮನೆಗೆ ಕಾರ್ಯಾದೇಶ ನೀಡಿದ್ದು, 31,286 ಮನೆಗಳು ಪೂರ್ಣಗೊಂಡಿವೆ. ಮನೆ ಪೂರ್ಣಗೊಳಿಸದ ಫಲಾನುಭವಿಗಳಿಗೆ ನೋಟಿಸ್ ನೀಡಲಾಗಿದೆ. 1,790 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನಿಡಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ತಿಳಿಸಿದರು.

ಅಂಗನವಾಡಿ ನಿರ್ಮಾಣ: ‘ಮಾತೃ ವಂದನಾ ಯೋಜನೆಯಡಿ 6,383 ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ. ಮಾತೃಶ್ರೀ ಯೋಜನೆಯಡಿ 5,117 ಅರ್ಜಿ ಬಂದಿದ್ದು, 1,153 ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ. ಹಿಂದಿನ ವರ್ಷ 162 ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತರ ಹುದ್ದೆ ಭರ್ತಿ ಮಾಡಲಾಗಿದೆ. ಇನ್ನು 104 ಹುದ್ದೆ ಖಾಲಿಯಿವೆ. 238 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಸೌಮ್ಯ ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಅಂಕಿ ಅಂಶ.....
* 183 ಗ್ರಾಮದಲ್ಲಿ ನೀರಿನ ಸಮಸ್ಯೆ
* 38,235 ವಸತಿರಹಿತ ಕುಟುಂಬಗಳು
* 9,069 ನಿವೇಶನ ರಹಿತ ಕುಟುಂಬಗಳು
* 57,224 ಮನೆ ನಿರ್ಮಾಣದ ಗುರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !