ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹರಿಗೆ ಸರ್ಕಾರಿ ಸೇವೆ ಕಲ್ಪಿಸಿ

ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಮುನಿಸ್ವಾಮಿ ಸೂಚನೆ
Last Updated 29 ಆಗಸ್ಟ್ 2019, 14:30 IST
ಅಕ್ಷರ ಗಾತ್ರ

ಕೋಲಾರ: ‘ಬಲಾಢ್ಯರನ್ನು ಬಿಟ್ಟು ಅರ್ಹ ಫಲಾನುಭವಿ ಗುರುತಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಸೇವೆ ಕಲ್ಪಿಸಿ’ ಎಂದು ಸಂಸದ ಎಸ್.ಮುನಿಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಸಂಬಂಧ ಇಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಆರ್ಥಿಕ ಸ್ಥಿತಿವಂತರು ಹಾಗೂ ರಾಜಕೀಯ ಮುಖಂಡರು ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗುತ್ತಿದ್ದಾರೆ. ಬಲಾಢ್ಯರ ಮನೆ ಬಾಗಿಲಿಗೆ ಯೋಜನೆಗಳ ಸವಲತ್ತು ಹೋಗುತ್ತಿವೆ. ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು’ ಎಂದು ಎಚ್ಚರಿಕೆ ನೀಡಿದರು.

‘ದೇಶ, ರಾಜ್ಯ ಹಾಗೂ ಜಿಲ್ಲೆಯ ಪರಿಸ್ಥಿತಿಯನ್ನು ಅರಿತು ಸರ್ಕಾರಗಳು ಯೋಜನೆ ಜಾರಿಗೊಳಿಸುತ್ತಿವೆ. ಸರ್ಕಾರದ ಉದ್ದೇಶ ಅರಿತು ಕೆಲಸ ಮಾಡಬೇಕು. ರಾಜಕೀಯ ಪಕ್ಷಗಳ ಮುಖಂಡರ ಜತೆ ಶಾಮೀಲಾಗಿ ಜನರನ್ನು ಸರ್ಕಾರದ ಸವಲತ್ತುಗಳಿಂದ ವಂಚಿಸಬಾರದು’ ಎಂದು ಸಲಹೆ ನೀಡಿದರು.

‘ಪ್ರಧಾನಮಂತ್ರಿ ವಸತಿ ಯೋಜನೆಯಡಿ ಜಿಲ್ಲೆಗೆ 1,272 ಮನೆ ನಿರ್ಮಾಣದ ಗುರಿ ನೀಡಲಾಗಿತ್ತು. ಈ ಪೈಕಿ 446 ಮನೆಗಳು ಪೂರ್ಣಗೊಂಡಿವೆ. 831 ಮನೆಗಳ ಕೆಲಸ ಪ್ರಗತಿಯಲ್ಲಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ವಿವರಿಸಿದರು.

ಶಿಸ್ತುಕ್ರಮ ಜರುಗಿಸಿ: ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ‘ಮನೆ ಹಂಚಿಕೆಗೆ ಫಲಾನುಭವಿಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ? ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳನ್ನು ಬಿಟ್ಟು, ಹಣವಂತರಿಗೆ ಹಾಗೂ ರಾಜಕೀಯ ಮುಖಂಡರ ಬೆಂಬಲಿಗರಿಗೆ ಮನೆ ಮಂಜೂರು ಮಾಡಲಾಗಿದೆ. ಅಧಿಕಾರಿಗಳು ಹಣದಾಸೆಗೆ ವಸತಿರಹಿತರು ಹಾಗೂ ನಿವೇಶನರಹಿತರನ್ನು ವಂಚಿಸಿದ್ದಾರೆ. ಈ ಬಗ್ಗೆ ದೂರು ಬಂದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ’ ಎಂದು ಆದೇಶಿಸಿದರು.

‘ಶ್ರೀಮಂತರನ್ನು ಹಾಗೂ ರಾಜಕೀಯ ಮುಖಂಡರು ಸೂಚಿಸಿದವರಿಗೆ ಮನೆ ಮಂಜೂರು ಮಾಡುವುದನ್ನು ಬಿಟ್ಟು, ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಕರ್ಯ ಕಲ್ಪಿಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ರಾಜಕೀಯ ಮಾಡಬೇಡಿ’ ಎಂದು ತಾಕೀತು ಮಾಡಿದರು.

ಪಟ್ಟಿ ಸಿದ್ಧ: ‘ಜಿಲ್ಲೆಯಲ್ಲಿ ಈಗಾಗಲೇ ವಸತಿರಹಿತರ ಹಾಗೂ ನಿವೇಶನರಹಿತರ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿನ ವ್ಯಕ್ತಿಗಳಿಗೆ ಮನೆ ಮಂಜೂರು ಮಾಡಲಾಗುತ್ತದೆ. ಈವರೆಗೆ 38,231 ಮಂದಿ ವಸತಿರಹಿತರು ಹಾಗೂ ನಿವೇಶನರಹಿತರನ್ನು ಗುರುತಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾಹಿತಿ ನೀಡಿದರು.

‘ನೀರಿನ ಲಭ್ಯತೆ ಖಚಿತಪಡಿಸಿಕೊಂಡು ಕೊಳವೆ ಬಾವಿ ಕೊರೆಸಲಾಗುತ್ತದೆ. ನೀರು ಸಿಗುವುದಿಲ್ಲ ಎಂಬ ಅನುಮಾನ ಬಂದರೆ ಟ್ಯಾಂಕರ್ ಅಥವಾ ಖಾಸಗಿ ಕೊಳವೆ ಬಾವಿಯನ್ನು ಗುತ್ತಿಗೆಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 130 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ’ ಎಂದು ಹೇಳಿದರು.

ನೀರಿನ ಘಟಕ ಸ್ಥಗಿತ: ‘ಮಾಲೂರು ತಾಲ್ಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕವನ್ನು ವಿನಾಕಾರಣ ಸ್ಥಗಿತಗೊಳಿಸಲಾಗಿದೆ. ಗ್ರಾಮದಲ್ಲಿ ನೀರು ಲಭ್ಯವಿದ್ದರೂ ಸ್ಥಳೀಯ ರಾಜಕೀಯ ದ್ವೇಷದಿಂದ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೂ ಅಲ್ಲಿನ ರಾಜಕೀಯಕ್ಕೂ ಏನು ಸಂಬಂಧ’ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು.

‘ಶ್ರೀ ನರಸಿಂಹರಾಜ (ಎಸ್‍ಎನ್‍ಆರ್) ಜಿಲ್ಲಾ ಆಸ್ಪತ್ರೆ ಸುತ್ತಮುತ್ತ ಇರುವ ಖಾಸಗಿ ಪ್ರಯೋಗಾಲಯಗಳನ್ನು ಬಂದ್‌ ಮಾಡಿಸಬೇಕು. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ತಾಸೂ ಸೇವೆ ಸಿಗುವಂತೆ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ನಗರಸಭೆಯ ಟ್ಯಾಂಕರ್ ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿದೆ. ಟ್ಯಾಂಕರ್‌ಗೆ ಯಾಕೆ ವಾಹನ ವಿಮೆ ಮಾಡಿಸಿಲ್ಲ?’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ನಗರಸಭೆ ಆಯುಕ್ತ ಟಿ.ಆರ್‌.ಸತ್ಯನಾರಾಯಣ, ‘ಅಪಘಾತಕ್ಕೀಡಾಗಿರುವ ಟ್ಯಾಂಕರ್ ನಗರಸಭೆಗೆ ಸೇರಿದ್ದು, ವಾಹನದ ವಿಮೆ ಪಾವತಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ’ ಎಂದರು.

ಆಯುಕ್ತರ ವಿವರಣೆ ಬಗ್ಗೆ ಅನುಮಾನಗೊಂಡ ಸಂಸದರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಫಾರೂಕ್‌ ಪಾಷಾ ಅವರನ್ನು ಸಭೆಗೆ ಕರೆಸಿ ಅಪಘಾತದ ಬಗ್ಗೆ ವಿಚಾರಿಸಿದಾಗ ಟ್ಯಾಂಕರ್‌ನ ವಿಮೆ ಕಟ್ಟದಿರುವುದು ಗೊತ್ತಾಯಿತು.

ಇದರಿಂದ ಸಿಡಿಮಿಡಿಗೊಂಡ ಸಂಸದರು, ‘ನಗರ ಅಭಿವೃದ್ಧಿಯಾಗಬೇಕಾದರೆ ಮೊದಲು ನಗರಸಭೆ ಆಯುಕ್ತರು ಬದಲಾಗಬೇಕು. ಏನು ಕೇಳಿದರೂ ಸುಳ್ಳು ಹೇಳುತ್ತೀರಿ. ಹೇಗೆ ಕೆಲಸ ಮಾಡುಬೇಕೆಂಬುದು ಗೊತ್ತಿಲ್ಲ. ಇಂತಹ ಅಧಿಕಾರಿಗಳನ್ನು ಇಟ್ಟುಕೊಂಡು ಊರು ಉದ್ಧಾರ ಮಾಡುವುದು ಹೇಗೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಉಪ ವಿಭಾಗಾಧಿಕಾರಿ ಸೋಮಶೇಖರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಹಾಜರಿದ್ದರು.

ಅಂಕಿ ಅಂಶ.....
* 1,272 ಮನೆ ನಿರ್ಮಾಣ ಗುರಿ
* 446 ಮನೆಗಳ ಕೆಲಸ ಪೂರ್ಣ
* 831 ಮನೆ ನಿರ್ಮಾಣ ಬಾಕಿ
* 130 ಗ್ರಾಮದಲ್ಲಿ ನೀರಿನ ಸಮಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT