ಗುರುವಾರ , ಜೂನ್ 17, 2021
21 °C
ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಹೇಳಿಕೆ

ಕೋಲಾರ: ವಿನೂತನ ಕೌಶಾಲಧಾರಿತ ತರಬೇತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಸೃಷ್ಟಿಗೆ ಪೂರಕವಾದ ವಿನೂತನ ಕೌಶಾಲಧಾರಿತ ತರಬೇತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ನಗರದ ಹೊರವಲಯದ ಹೊನ್ನೇನಹಳ್ಳಿಯಲ್ಲಿನ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಬುಧವಾರ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ವೃತ್ತಿಯು ಕೌಶಲ ಜ್ಞಾನ ಬೇಡುತ್ತದೆ. ಕೌಶಲ ಕೊರತೆ ಕಾರಣಕ್ಕೆ ಸಾಕಷ್ಟು ಮಂದಿ ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದಾರೆ’ ಎಂದರು.

‘ಜಿಲ್ಲೆಯು ಕೃಷಿ, ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ ಕೃಷಿಯಲ್ಲಿ ಮುಂಚೂಣಿಯಲ್ಲಿ ಇರುವುದರಿಂದ ಈ ವಲಯಗಳಿಗೆ ಸಂಬಂಧಪಟ್ಟಂತೆ ತರಬೇತಿ ನೀಡುವುದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೆಚ್ಚಿನ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಉಚಿತವಾಗಿ ಸ್ವಉದ್ಯೋಗ ಆಧಾರಿತ ತರಬೇತಿ ನೀಡುವುದನ್ನು ಎಲ್ಲರಿಗೂ ತಿಳಿಸಬೇಕು. ಸಂವಹನ ಮಾರ್ಗಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮಾಹಿತಿ ನೀಡಬೇಕು. ಕೌಶಲ ವೃದ್ಧಿಸಿಕೊಳ್ಳುವತ್ತ ಎಲ್ಲರೂ ಗಮನ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.

ತರಬೇತಿ ಸಂಸ್ಥೆ: ‘ಸ್ವಉದ್ಯೋಗ ಆಧಾರಿತ ತರಬೇತಿ ನೀಡುವ ಸಲುವಾಗಿ ಕೆನರಾ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳು ರಾಜ್ಯದಲ್ಲಿ 33ಕ್ಕೂ ಹೆಚ್ಚು ಗ್ರಾಮೀಣ ಸ್ವಉದ್ಯೋಗ ಆಧಾರಿತ ತರಬೇತಿ ಸಂಸ್ಥೆ ಸ್ಥಾಪಿಸಿವೆ’ ಎಂದು ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕಿ ಮಮತಾ ಜೋಷಿ ಮಾಹಿತಿ ನೀಡಿದರು.

‘ಕೆನರಾ ಬ್ಯಾಂಕ್ ಆರಂಭದಿಂದಲೂ ಗ್ರಾಮೀಣ ಜನರ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ನಡೆಸುತ್ತಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ವಿವಿಧ ಯೋಜನೆಗಳ ಮೂಲಕ ಸಾಲದ ನೆರವು ನೀಡುವುದರ ಜತೆಗೆ ಹಲವು ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ’ ಎಂದು ವಿವರಿಸಿದರು.

ಆರ್ಥಿಕ ನೆರವು: ‘ಕೋವಿಡ್ ಕಾರಣದಿಂದಾಗಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಇವರೆಲ್ಲರೂ ಸ್ವಉದ್ಯೋಗದತ್ತ ಆಕರ್ಷಿತರಾಗುತ್ತಿದ್ದಾರೆ. ಅವರಿಗೆ ಅಗತ್ಯ ಆರ್ಥಿಕ ನೆರವು ನೀಡಲು ಜಿಲ್ಲೆಯ ಬ್ಯಾಂಕ್‌ಗಳು ಸಹಕಾರ ನೀಡಲಿವೆ’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಐ.ಹೊಸಮಠ್ ಭರವಸೆ ನೀಡಿದರು.

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಪಿ.ಕೆ.ರಾಮಮೂರ್ತಿ, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಅಂಬಾಜಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಎ.ಸಿ.ವೆಂಕಟರವಣ, ಎನ್‍ಆರ್‍ಎಲ್‍ಎಂ ಸಂಯೋಜಕ ಎಸ್‌.ಸುಂದರೇಶ್ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು