ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಆರೋಗ್ಯ ಸೇವೆ ನೀಡಿ

ವೈದ್ಯಕೀಯ ಸಿಬ್ಬಂದಿಗೆ ಡಿಎಚ್‌ಒ ವಿಜಯ್‌ಕುಮಾರ್‌ ಕಿವಿಮಾತು
Last Updated 29 ನವೆಂಬರ್ 2019, 16:28 IST
ಅಕ್ಷರ ಗಾತ್ರ

ಕೋಲಾರ: ‘ಲಭ್ಯ ಸಂಪನ್ಮೂಲ ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಿ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್ ವೈದ್ಯಕೀಯ ಸಿಬ್ಬಂದಿಗೆ ಕಿವಿಮಾತು ಹೇಳಿದರು.

ಶ್ರೀ ನರಸಿಂಹರಾಜ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾರಾ ಮೆಡಿಕಲ್ ಸೈನ್ಸ್‌ ವತಿಯಿಂದ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನದ ಮಹತ್ವದ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಕೋಲಾರ ಜಿಲ್ಲಾ ಆಸ್ವತ್ರೆಯು ಉತ್ತಮ ಸೇವೆ ಮೂಲಕ ದೇಶದಲ್ಲೇ ಖ್ಯಾತಿ ಪಡೆದಿದೆ. ಇಂತಹ ಆಸ್ಪತ್ರೆಯಲ್ಲಿ ಕಲಿಕೆಗೆ ಅವಕಾಶ ಸಿಕ್ಕಿರುವುದು ವಿದ್ಯಾರ್ಥಿಗಳ ಸೌಭಾಗ್ಯ’ ಎಂದರು.

‘ಆಸ್ಪತ್ರೆಯನ್ನು ದೇವಾಲಯದಂತೆ ಭಾವಿಸಿ ಕಲಿಕೆಯ ಜತೆಗೆ ಉತ್ತಮವಾಗಿ ಕೆಲಸ ಮಾಡಬೇಕು. ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಬೇರೆಯವರ ಜೀವ ಉಳಿಸುವುದು ಆದ್ಯ ಕರ್ತವ್ಯವಾಗಬೇಕು. ಪ್ಯಾರಾ ಮೆಡಿಕಲ್ ಕೋರ್ಸ್‌ ಓದಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶವಿದೆ’ ಎಂದು ತಿಳಿಸಿದರು.

‘ಎಷ್ಟೇ ಕಲಿತರೂ ರೋಗಿಗಳನ್ನು ಮನುಷ್ಯತ್ವದ ದೃಷ್ಟಿಯಲ್ಲಿ ನೋಡಬೇಕು. ಮಾನವೀಯ ಮೌಲ್ಯ ರೂಢಿಸಿಕೊಂಡು ಸರಿ ದಾರಿಯಲ್ಲಿ ನಡೆಯಬೇಕು. ಅಂಕ ಗಳಿಕೆಯೇ ವಿದ್ಯಾರ್ಥಿಗಳ ಧ್ಯೇಯವಾಗಿರಬಾರದು’ ಎಂದು ಎಸ್‌ಎನ್‌ಆರ್‌ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್‌.ಜಿ.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

ಹಣ ಮುಖ್ಯವಲ್ಲ: ‘ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವ ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಸಿಗುವಂತೆ ಮಾಡಲಾಗುತ್ತಿದೆ. ವೈದ್ಯಕೀಯ ವೃತ್ತಿಯಲ್ಲಿ ಹಣ ಸಂಪಾದನೆ ಮುಖ್ಯವಲ್ಲ. ಬದಲಿಗೆ ರೋಗಿಗಳಿಗೆ ಉತ್ತಮ ಸೇವೆ ನೀಡುವುದು ಮುಖ್ಯ’ ಎಂದು ಶ್ರೀ ನರಸಿಂಹರಾಜ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾರಾ ಮೆಡಿಕಲ್ ಸೈನ್ಸ್‌ ಸಂಯೋಜಕಿ ಡಾ.ಎಸ್.ವಿಜಿಯಮ್ಮ ಅಭಿಪ್ರಾಯಪಟ್ಟರು.

‘ಸರ್ಕಾರಿ ಕಾಲೇಜು ಆಸ್ಪತ್ರೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ನೈಜವಾಗಿ ಕಲಿಯುವುದರ ಜತೆಗೆ ಸಾಮಾನ್ಯ ಜ್ಞಾನ ಪಡೆಯುತ್ತಾರೆ’ ಎಂದು ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾರಾ ಮೆಡಿಕಲ್ ಸೈನ್ಸ್‌ ಉಪ ಪ್ರಾಂಶುಪಾಲೆ ಡಾ.ವಿ.ಸುಧಾಮಣಿ ಹೇಳಿದರು.

ರಕ್ತದ ಅವಶ್ಯಕತೆ: ‘ಪ್ರತಿ 2 ಸೆಕೆಂಡ್‌ಗೆ ಒಬ್ಬರಿಗೆ  ರಕ್ತದ ಅವಶ್ಯಕತೆ ಇರುತ್ತದೆ. ಅಪಘಾತ, ಗರ್ಭಿಣಿಯರಿಗೆ, ಹೆರಿಗೆ ಸಂದರ್ಭ, ಡಯಾಲಿಸಿಸ್, ಶಸ್ತ್ರಚಕಿತ್ಸೆಗೆ ರಕ್ತದ ಅವಶ್ಯಕತೆ ಇರುತ್ತದೆ. ಸ್ವಯಂಪ್ರೇರಿತ ದಾನಿಗಳಿಂದ ರಕ್ತ ಪಡೆದರೆ ಗುಣಮಟ್ಟದ ರಕ್ತ ಸಿಗಲು ಸಾಧ್ಯ. 18 ವರ್ಷದಿಂದ 60 ವರ್ಷವರೆಗಿನ ವಯೋಮಿತಿಯವರು, 45 ಕೆ.ಜಿಗಿಂತ ಹೆಚ್ಚು ತೂಕ ಇರುವವರು ರಕ್ತದಾನ ಮಾಡಬಹುದು’ ಎಂದು ರಕ್ತನಿಧಿ ವೈದ್ಯಾಧಿಕಾರಿ ಡಾ.ರೇವತಿ ಮಾಹಿತಿ ನೀಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳಿಗೆ ವೃತ್ತಿ ಸಂಬಂಧ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT