ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬಿ ಜೀವನಕ್ಕೆ ಕೌಶಲ ತರಬೇತಿ ನೀಡಿ

ಡಿಸಿಸಿ ಬ್ಯಾಂಕ್‌ಗೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕದೇವಿ ಕಿವಿಮಾತು
Last Updated 16 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಕೋಲಾರ: ‘ಡಿಸಿಸಿ ಬ್ಯಾಂಕ್‌ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಸಾಲ ನೀಡುವುದಕ್ಕಷ್ಟೇ ಸೀಮಿತವಾಗಬಾರದು. ಸಾಲ ನೀಡಿಕೆ ಜತೆಗೆ ಮಹಿಳೆಯರಿಗೆ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಕೌಶಲ ತರಬೇತಿ ನೀಡಬೇಕು’ ಎಂದು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ನಾಗಾಂಬಿಕದೇವಿ ಕಿವಿಮಾತು ಹೇಳಿದರು.

ಇಲ್ಲಿ ಬುಧವಾರ ಡಿಸಿಸಿ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘₹ 48 ಕೋಟಿ ನಷ್ಟದಿಂದ ಪಾರಾಗಿರುವ ಅವಿಭಜಿತ ಕೋಲಾರ ಜಿಲ್ಲೆಯ ಡಿಸಿಸಿ ಬ್ಯಾಂಕ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಹಕಾರ ಬ್ಯಾಂಕ್‌ಗಳು ಸಾಲ ಕೊಡಲು ಮತ್ತು ಸಾಲ ಮಾಡುವುದಕ್ಕೆ ಸೀಮಿತವಾಗಬಾರದು. ಯಾವ ಸಂಘ ಆರ್ಥಿಕವಾಗಿ ಶಕ್ತಿಯುತವಾಗಿದೆ ಎಂಬುದನ್ನು ಗುರುತಿಸಿ ಉತ್ತೇಜನ ನೀಡಬೇಕು. ಜಮೀನು ಖರೀದಿಸಿ ಕೌಶಲ ತರಬೇತಿ ಕೇಂದ್ರ ನಿರ್ಮಿಸುವ ಜತೆಗೆ ಮಾರುಕಟ್ಟೆ ಚಟುವಟಿಕೆಗಳನ್ನು ನಡೆಸಬೇಕು’ ಎಂದು ಸಲಹೆ ನೀಡಿದರು.

‘ನೆಲಕಚ್ಚಿದ್ದ ಡಿಸಿಸಿ ಬ್ಯಾಂಕ್ ಈಗ ಮನೆ ಮಾತಾಗಿದೆ. ಬ್ಯಾಂಕ್‌ನ ಸಾಧನೆಯಿಂದ ಬಡ್ಡಿ ಮಾಫಿಯಾ ಸಂಸ್ಥೆಗಳು ಬಾಗಿಲು ಮುಚ್ಚಿಕೊಂಡು ಹೋಗಿವೆ. ಬ್ಯಾಂಕ್‌ನ ಪ್ರಗತಿ ಸಹಿಸದ ಕೆಲ ವ್ಯಕ್ತಿಗಳು ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಮಹಿಳೆಯರಿಗೆ ನೀಡಿರುವ ಸಾಲಕ್ಕೆ ಮುಂಗಡವಾಗಿ ಬಡ್ಡಿ ವಸೂಲಿ ಮಾಡಿದ ನಂತರ ಪಾವತಿಸುವುದಾಗಿ ಸರ್ಕಾರ ತಿಳಿಸಿದೆ. ಇದರಿಂದ ಬ್ಯಾಂಕ್ ಮತ್ತು ಸಂಘಗಳ ಅಭಿವೃದ್ಧಿ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಇದಕ್ಕೆ ಯಾರು ಒಪ್ಪುತ್ತಾರೆ?’ ಎಂದು ಪ್ರಶ್ನಿಸಿದರು.

‘ವಾಣಿಜ್ಯ ಬ್ಯಾಂಕ್‌ನವರು ರೈತರಿಗೆ ಪಾಲಿಹೌಸ್‌ಗಳ ಸಹಾಯಧನದ ಹಣ ನೀಡುತ್ತಿರಲಿಲ್ಲ. ಪಾಲಿಹೌಸ್‌ ಯೋಜನೆ ಡಿಸಿಸಿ ಬ್ಯಾಂಕ್‌ನಿಂದಲೇ ಶೇ 100ರಷ್ಟು ಕಾರ್ಯಗತವಾಯಿತು. ಅದೇ ರೀತಿ ಇತರ ಇಲಾಖೆಗಳ ಅನುದಾನವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿಯಿಡಬೇಕು. ಜತೆಗೆ ಯೋಜನೆಗಳ ಹಣವನ್ನು ಈ ಬ್ಯಾಂಕ್ ಮೂಲಕವೇ ಫಲಾನುಭವಿಗಳಿಗೆ ತಲುಪಿಸಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು.

ಗಣಕೀಕರಣ: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 201 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಪಾರದರ್ಶಕ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಸೊಸೈಟಿಗಳ ಕಾರ್ಯ ಚಟುವಟಿಕೆ ಗಣಕೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಗಣಕೀಕರಣಕ್ಕೆ ಸ್ಥಳೀಯ ಶಾಸಕರ ಅಭಿವೃದ್ಧಿ ನಿಧಿಯಿಂದ ತಲಾ ₹ 25 ಲಕ್ಷ ಬಿಡುಗಡೆ ಮಾಡಲು ಒಪ್ಪಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ವಿವರಿಸಿದರು.

‘23,500 ಸ್ತ್ರೀಶಕ್ತಿ ಸಂಘಗಳ ಪೈಕಿ 22,620 ಸಂಘಗಳ ಸದಸ್ಯರಿಗೆ ಸಾಲ ನೀಡಲಾಗಿದೆ. ಬಡವರ ಬಂಧು ಯೋಜನೆಯಡಿ 30 ಫಲಾನುಭವಿಗಳಿಗೆ ₹ 2.68 ಕೋಟಿ ಸಾಲ ಕೊಟ್ಟಿದ್ದೇವೆ. ಕಾಯಕ ಯೋಜನೆಯಡಿ ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸಾಲ ಮನ್ನಾ ಯೋಜನೆಯಡಿ ಸರ್ಕಾರದಿಂದ ₹ 50 ಲಕ್ಷ ಬಿಡುಗಡೆಯಾಗಬೇಕಾಗಿದೆ. ಆ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.

ಸಂಪೂರ್ಣ ಸಹಕಾರ: ‘ಸೊಸೈಟಿಗಳ ಗಣಕೀಕರಣಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಸಾಫ್ಟ್‌ವೇರ್‌ ಖರೀದಿ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಬೇಡಿ. ಅವರು ತಾಂತ್ರಿಕ ಸಮಸ್ಯೆ ನಿವಾರಣೆ ಬಗ್ಗೆ ತರಬೇತಿ ನೀಡಲ್ಲ. ಮಧ್ಯದಲ್ಲಿ ಕೈಬಿಟ್ಟು ಹೋದರೆ ಯಾರು ಹೊಣೆ’ ಎಂದು ನಾಗಾಂಬಿಕದೇವಿ ಹೇಳಿದರು.

‘ಗಣಕೀರಣದ ಜತೆಗೆ ಸಂಘಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಬೇಕು. ತಿಂಗಳಲ್ಲಿ ಕನಿಷ್ಠ 25 ಸಾವಿರ ಮಂದಿ ಸದಸ್ಯರಾಗಬೇಕು. ಇದರಿಂದ ಮತ್ತಷ್ಟು ಮಂದಿಗೆ ಬ್ಯಾಂಕ್‌ನ ಸೌಕರ್ಯ ಕಲ್ಪಿಸಬಹುದು. ಸಾಲ ಪಡೆದವರಿಗೆ ಪುನಃ ಸೌಕರ್ಯ ನೀಡಿದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲಾಗುವುದಿಲ್ಲ. ಬ್ಯಾಂಕ್‌ನ ಸಾಧನೆ ತೃಪ್ತಿ ತಂದಿದೆ. ಸರ್ಕಾರದ ಹಣ ಅರ್ಹ ಫಲಾನುಭವಿಗೆ ತಲುಪಬೇಕು’ ಎಂದರು.

ಸಹಕಾರ ಇಲಾಖೆ ಜಂಟಿ ನಿರ್ದೇಶಕ ನರಸಿಂಹಮೂರ್ತಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಕೆ.ವಿ.ದಯಾನಂದ್, ಸೋಮಣ್ಣ, ಸೊಣ್ಣೇಗೌಡ, ಎಂ.ಎಲ್‌.ಅನಿಲ್‌ಕುಮಾರ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿ ಹಾಜರಿದ್ದರು.

ಅಂಕಿ ಅಂಶ...
* 12 ಡಿಸಿಸಿ ಬ್ಯಾಂಕ್ ಶಾಖೆಗಳು
* 201 ಕೃಷಿ ಪತ್ತಿನ ಸಹಕಾರ ಸಂಘ
* 22,183 ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ
* ₹ 78.38 ಕೋಟಿ ಷೇರು ಬಂಡವಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT