ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡಲು ಒತ್ತಾಯ

ಶ್ರದ್ಧಾಂಜಲಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಚಂದ್ರಾರೆಡ್ಡಿ ಮನವಿ
Last Updated 22 ಜನವರಿ 2019, 13:54 IST
ಅಕ್ಷರ ಗಾತ್ರ

ಕೋಲಾರ: ‘111 ವರ್ಷಗಳ ಸಾರ್ಥಕ ಬದುಕು ಸಾಗಿಸಿದ ಶಿವಕುಮಾರ ಸ್ವಾಮೀಜಿ ಸುಮಾರು 9 ದಶಕಗಳ ಕಾಲ ತ್ರಿವಿಧ ದಾಸೋಹ ನಡೆಸಿದ್ದು, ಕೇಂದ್ರ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು’ ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮನವಿ ಮಾಡಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಶಿವಕುಮಾರ ಸ್ವಾಮೀಜಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ‘ಶತಾಯುಷಿ ಶಿವಕುಮಾರ ಸ್ವಾಮೀಜಿ ಸಮಾಜಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಶಾಲಾ ಕಾಲೇಜು ಆರಂಭಿಸಿ ಬಡ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ’ ಎಂದರು.

‘ಸಾವಿರಾರು ಬಡ ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿರುವ ಸ್ವಾಮೀಜಿಯು ರಾಜ್ಯಕ್ಕೆ ಮಾದರಿ. ಅವರ ತತ್ವಾದರ್ಶ ಪಾಲಿಸಬೇಕು. ಬಸವಣ್ಣ 12ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದರು. ಅವರಂತೆಯೇ ಶಿವಕುಮಾರ ಸ್ವಾಮೀಜಿಯವರು ರಾಜ್ಯದ ಎಲ್ಲಾ ವರ್ಗಗಳಿಗೂ ಶಿಕ್ಷಣ ನೀಡಿ ಸಾಮಾಜಿಕ ಕ್ರಾಂತಿ ಸೃಷ್ಟಿಸಿದರು’ ಎಂದು ಸ್ಮರಿಸಿದರು.

ಸ್ವಾರ್ಥ ಹೆಚ್ಚಿದೆ: ‘ಜನರಲ್ಲಿ ಇತ್ತೀಚೆಗೆ ಸ್ವಾರ್ಥ ಹೆಚ್ಚಿದೆ. ಆದರೆ, ಶಿವಕುಮಾರ ಸ್ವಾಮೀಜಿಯವರು ನಿಸ್ವಾರ್ಥ ಸೇವೆ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ’ ಎಂದು ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಬಣ್ಣಿಸಿದರು.

‘ಪ್ರತಿನಿತ್ಯ 10 ಸಾವಿರ ಮಕ್ಕಳಿಗೆ ಊಟ ನೀಡಿ ಸಾಕುವುದು ಸುಲಭದ ವಿಚಾರವಲ್ಲ. ಸ್ವಾಮೀಜಿಯು ಶಿಕ್ಷಣದ ಮಹತ್ವ ತಿಳಿದು ರಾಜ್ಯದಲ್ಲಿ ಅಕ್ಷರ ಕ್ರಾಂತಿ ಮಾಡಿದ್ದಾರೆ. ಸರಳ ಸಜ್ಜನಿಕೆಯ ಸ್ವಾಮೀಜಿಯವರು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಅವರು ನಿಜಕ್ಕೂ ಪವಾಡ ಪುರುಷರು’ ಎಂದು ಅಭಿಪ್ರಾಯಪಟ್ಟರು.

ತ್ರಿಚಕ್ರ ವಾಹನ ಚಾಲಕರ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್, ಕಾಂಗ್ರೆಸ್‌ ಮುಖಂಡರಾದ ಮುನಿವೆಂಕಟಪ್ಪ, ಉದಯ್‌ಶಂಕರ್‌, ಪ್ರಸಾದ್‌ಬಾಬು, ಕೆ.ಜಯದೇವ್ ಪಾಲ್ಗೊಂಡಿದ್ದರು.

ಪುಷ್ಪನಮನ: ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಪದಾಧಿಕಾರಿಗಳು ನಗರದ ಕಾಲೇಜು ವೃತ್ತದಲ್ಲಿ ಸಿದ್ಧಗಂಗಾ ಶ್ರೀಗಳ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪನಮನ ಸಲ್ಲಿಸಿದರು.

‘ತ್ರಿವಿಧ ದಾಸೋಹಿಯಾಗಿ ಖ್ಯಾತಿ ಪಡೆದಿರುವ ಶಿವಕುಮಾರ ಸ್ವಾಮೀಜಿಯವರ ನಿಧನವು ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ನಿಧನದಿಂದ ಕೋಟ್ಯಂತರ ಭಕ್ತರು ದುಖಃತಪ್ತರಾಗಿದ್ದಾರೆ’ ಎಂದು ಸಂಘದ ಅಧ್ಯಕ್ಷ ಸದಾನಂದ ಹೇಳಿದರು.

‘ಅಕ್ಷರ, ಜ್ಞಾನ, ಅನ್ನ ದಾಸೋಹಕ್ಕೆ ಹೆಸರಾಗಿರುವ ಸಿದ್ಧಗಂಗಾ ಮಠದಿಂದ ಲಕ್ಷಾಂತರ ಮಂದಿ ಪ್ರಯೋಜನ ಪಡೆದಿದ್ದಾರೆ. ಸಿದ್ಧಗಂಗಾ ಶ್ರೀಗಳ ನಿಸ್ವಾರ್ಥ ಸೇವೆ ಇತರರಿಗೂ ಮಾದರಿಯಾಗಬೇಕು. ಶ್ರೀಗಳ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಬೇಕು’ ಎಂದರು.

ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಅಧ್ಯಕ್ಷ ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷ ಹರಿಪ್ರಕಾಶ್, ಖಜಾಂಚಿ ಜಮೀರ್, ಪದಾಧಿಕಾರಿಗಳಾದ ವಿ.ನಾರಾಯಣಸ್ವಾಮಿ, ಗೋಪಾಲಪ್ಪ, ಆನಂದ್, ರವಿ, ಚಲಪತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT