ಬುಧವಾರ, ಮೇ 18, 2022
27 °C
ಸುಸೂತ್ರ ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ: ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಹೇಳಿಕೆ

ದ್ವಿತೀಯ ಪಿಯುಸಿ ಪರೀಕ್ಷೆ: ಹಿಜಾಬ್‌ಗೆ ಅವಕಾಶವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ 29 ಕೇಂದ್ರಗಳಲ್ಲಿ ಶುಕ್ರವಾರದಿಂದ (ಏ.22) ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ತಿಳಿಸಿದರು.

ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಇಲ್ಲಿ ಬುಧವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಈ ಬಾರಿ ಪರೀಕ್ಷೆಗೆ 17,008 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಯು ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕತೆ ಬಿಂಬಿಸುವ ವಸ್ತ್ರ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬರುವಂತಿಲ್ಲ’ ಎಂದು ಸೂಚಿಸಿದರು.

‘ಈ ಬಾರಿ ಹೊಸದಾಗಿ 7,116 ಬಾಲಕರು, 7,626 ಬಾಲಕಿಯರು ಸೇರಿದಂತೆ 14,742 ಮಂದಿ ಪರೀಕ್ಷೆಗೆ ಕುಳಿತಿದ್ದಾರೆ. ಪುನರಾವರ್ತಿತ ಅಭ್ಯರ್ಥಿಗಳಲ್ಲಿ 1,760 ಬಾಲಕರು, 1,030 ಬಾಲಕಿಯರು ಸೇರಿದಂತೆ 2,790 ಮಂದಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಖಾಸಗಿಯಾಗಿ 267 ಬಾಲಕರು, 189 ಬಾಲಕಿಯರು ಸೇರಿದಂತೆ 456 ಮಂದಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. 984 ಬಾಲಕರು, 826 ಬಾಲಕಿಯರು ಸೇರಿದಂತೆ 1,810 ಮಂದಿ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ’ ಎಂದು ವಿವರಿಸಿದರು.

‘ಕೋಲಾರದಲ್ಲಿ 11, ಬಂಗಾರಪೇಟೆ 3, ಕೆಜಿಎಫ್ 3, ಶ್ರೀನಿವಾಸಪುರ 3, ಮುಳಬಾಗಿಲು 5, ಮಾಲೂರಿನ 4 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಗೆ ಹಿಜಾಬ್, ಕೇಸರಿ ಶಾಲು ಸೇರಿದಂತೆ ಧಾರ್ಮಿಕತೆ ಬಿಂಬಿಸುವ ವಸ್ತ್ರ ಧರಿಸಿ ಬರಲು ಅವಕಾಶವಿಲ್ಲ. ಈ ನಿಯಮ ಖಾಸಗಿ ಅಭ್ಯರ್ಥಿಗಳು ಹಾಗೂ ಪರೀಕ್ಷಾ ಕಾರ್ಯ ನಿರ್ವಹಿಸುವ ಸಿಬ್ಬಂದಿಗೂ ಅನ್ವಯ. ಹೊಸ ಅಭ್ಯರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷೆಗೆ ಬರಬೇಕು. ಖಾಸಗಿ ಅಭ್ಯರ್ಥಿಗಳು ಸಾಮಾನ್ಯ ವಸ್ತ್ರಸಂಹಿತೆ ಪಾಲಿಸಬೇಕೆಂದು ಶಿಕ್ಷಣ ಸಚಿವರು ಆದೇಶಿಸಿದ್ದಾರೆ’ ಎಂದರು.

‘ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಗುರುತಿನ ಚೀಟಿ ಇದ್ದರೆ ಮಾತ್ರ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು, ಅನಧಿಕೃತ ವ್ಯಕ್ತಿಗಳು ಕೇಂದ್ರದಲ್ಲಿ ಕಂಡುಬಂದರೆ ಆಯಾ ಮುಖ್ಯ ಅಧೀಕ್ಷಕರನ್ನೇ ಹೊಣೆಗಾರರಾಗಿ ಮಾಡಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ಒಬ್ಬರು ಮುಖ್ಯ ಅಧೀಕ್ಷಕರಿದ್ದು, ಅವರೊಂದಿಗೆ ಜಂಟಿ ಮುಖ್ಯ ಅಧೀಕ್ಷಕರು ಕಾರ್ಯ ನಿರ್ವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

ಜಿಪಿಎಸ್‌ ಕಣ್ಗಾವಲು: ‘ಪರೀಕ್ಷಾ ಅಕ್ರಮ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಸಣ್ಣಪುಟ್ಟ ಗೊಂದಲಕ್ಕೂ ಅವಕಾಶವಾಗದಂತೆ ಎಚ್ಚರ ವಹಿಸಲಾಗಿದೆ. ಮಾರ್ಗಾಧಿಕಾರಿಗಳಾಗಿ ನೇಮಕಗೊಂಡಿರುವ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರಾಂಶುಪಾಲರನ್ನೊಳಗೊಂಡ ತಂಡ ಕಾರ್ಯ ನಿರ್ವಹಿಸುತ್ತದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರಪ್ಪ ಹೇಳಿದರು.

‘ಪರೀಕ್ಷೆಗೆ ಮುನ್ನ ಖಜಾನೆಯಿಂದ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಪಡೆದು ಪರೀಕ್ಷಾ ಕೇಂದ್ರಗಳಿಗೆ ಪೂರೈಸಲು ಪೊಲೀಸ್ ಬಂದೋಬಸ್ತ್ ಇರುವ 9 ವಾಹನಗಳು 9 ಮಾರ್ಗದಲ್ಲಿ ಸಂಚರಿಸಲಿವೆ. ಈ ವಾಹನಗಳಿಗೆ ಜಿಪಿಎಸ್ ಅಳವಡಿಸಿದ್ದು, ಯಾವುದೇ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಸಮಸ್ಯೆ ಎದುರಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ’ ಎಂದರು.

‘ಕೇಂದ್ರ ಕಚೇರಿಯ 2 ಜಾಗೃತ ದಳ, ಜಿಲ್ಲಾಧಿಕಾರಿ ನೇತೃತ್ವದಲ್ಲಿ 1, ಪೊಲೀಸ್ ಇಲಾಖೆಯಿಂದ 1, ಉಪ ನಿರ್ದೇಶಕರ ನೇತೃತ್ವದಲ್ಲಿ 1, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಜಾಗೃತ ದಳ ರಚಿಸಲಾಗಿದೆ. ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದಲೇ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಹೊರ ಜಿಲ್ಲೆಗಳ ತಲಾ ಇಬ್ಬರು ಸ್ಥಾನಿಕ ಜಾಗೃತದಳ ಸಿಬ್ಬಂದಿಯನ್ನು ನೇಮಿಸಲಾಗಿದೆ’ ಎಂದು ತಿಳಿಸಿದರು.

ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳಾದ ದಯಾನಂದ್, ಸುಜಾತಾ, ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾದೇವಿ, ಕೆಂಪಯ್ಯ, ಚಂದ್ರಶೇಖರ್, ಎ.ಬಿ.ರಾಮಕೃಷ್ಣಪ್ಪ, ಕೃಷ್ಣಮೂರ್ತಿ, ಮಾರ್ಗಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.