ಪುಂಡ ಪೋಕರಿಗಳಿಗೆ ಕೇಶಮುಂಡನದ ಶಿಕ್ಷೆ– ಸಭ್ಯತೆಯ ಪಾಠ

7

ಪುಂಡ ಪೋಕರಿಗಳಿಗೆ ಕೇಶಮುಂಡನದ ಶಿಕ್ಷೆ– ಸಭ್ಯತೆಯ ಪಾಠ

Published:
Updated:
Deccan Herald

ಕೋಲಾರ: ಚಿತ್ರವಿಚಿತ್ರವಾಗಿ ಕೇಶ ವಿನ್ಯಾಸ ಮಾಡಿಸಿಕೊಂಡು ಬೀದಿ ಸುತ್ತುವ ಪುಂಡ ಪೋಕರಿಗಳಿಗೆ ಜಿಲ್ಲೆಯ ಮಾಲೂರು ಪೊಲೀಸರು ಕೇಶಮುಂಡನ ಮಾಡಿಸಿ ಸಭ್ಯತೆಯ ನೀತಿಪಾಠ ಹೇಳುತ್ತಿದ್ದಾರೆ.

ಮಾಲೂರಿನಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ಕೊಟ್ಟಿರುವ ಪೊಲೀಸರು ಬೀದಿ ಕಾಮಣ್ಣರ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಮಾಲೂರು ಪಟ್ಟಣದ ಮೂಲೆ ಮೂಲೆಯನ್ನು ಜಾಲಾಡುತ್ತಿರುವ ಪೊಲೀಸರು ಉದ್ದ ಕೂದಲು ಮತ್ತು ಚಿತ್ರ ವಿಚಿತ್ರವಾಗಿ ಗಡ್ಡ ಬಿಟ್ಟುಕೊಂಡು ಶಾಲಾ ಕಾಲೇಜುಗಳ ಬಳಿ ಹಾಗೂ ಹಾದಿ ಬೀದಿಯಲ್ಲಿ ಹುಡುಗಿಯರನ್ನು ಚುಡಾಯಿಸುವ ಯುವಕರನ್ನು ಕ್ಷೌರದಂಗಡಿಗೆ ಎಳೆತಂದು ಕೇಶ ರಾಶಿಗೆ ಕತ್ತರಿ ಪ್ರಯೋಗ ಮಾಡಿಸುತ್ತಿದ್ದಾರೆ.

ಪಟ್ಟಣದ ಮಾಸ್ತಿ ವೃತ್ತ ಹಾಗೂ ಹನುಮಂತನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸೋಮವಾರ ಕಾರ್ಯಾಚರಣೆ ನಡೆಸಿದ ಎಸ್‌ಐ ಮುರಳಿ ಮತ್ತು ಸಿಬ್ಬಂದಿಯು ಒಂದೇ ದಿನ ನಾಲ್ಕೈದು ಯುವಕರನ್ನು ಕ್ಷೌರದಂಗಡಿಗೆ ಕರೆತಂದು ಗಡ್ಡ ಬೋಳಿಸಿ ಕೇಶಮುಂಡನ ಮಾಡಿಸಿದ್ದಾರೆ.

ಮಾಲೂರಿನ ರಸ್ತೆಗಳಲ್ಲಿ ಈಗ ಪೊಲೀಸ್‌ ವಾಹನ ಕಂಡರೆ ಸಾಕು ಯುವಕರು ಕೇಶಮುಂಡನದ ಭಯದಿಂದ ಕಾಲ್ಕಿಳುತ್ತಾರೆ. ಅವರನ್ನು ಬೆನ್ನತ್ತುವ ಪೊಲೀಸರು ಮನೆವರೆಗೂ ಹುಡುಕಿಕೊಂಡು ಹೋಗಿ ಕ್ಷೌರದಂಗಡಿಗೆ ಎಳೆದುಕೊಂಡು ಬರುತ್ತಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಆಟಾಟೋಪಕ್ಕೆ ಕಡಿವಾಣ: ‘ಪಟ್ಟಣದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪುಂಡ ಪೋಕರಿಗಳ ಆಟಾಟೋಪಕ್ಕೆ ಸಂಪೂರ್ಣ ಕಡಿವಾಣ ಹಾಕಲು ಪಣ ತೊಟ್ಟಿದ್ದೇವೆ. ನಾಗರಿಕ ಸಮಾಜದಲ್ಲಿ ಸಭ್ಯವಾಗಿರುವಂತೆ ಯುವಕರಿಗೆ ತಿಳಿ ಹೇಳುತ್ತಿದ್ದೇವೆ. ವಿಚಿತ್ರವಾಗಿ ಕೇಶ ವಿನ್ಯಾಸ ಮಾಡಿಸಿಕೊಂಡಿರುವ ಯುವಕರನ್ನು ಪತ್ತೆ ಹಚ್ಚಿ ಸ್ವಂತ ಹಣದಲ್ಲಿ ಕ್ಷೌರ ಮಾಡಿಸುತ್ತಿದ್ದೇವೆ’ ಎಂದು ಎಸ್‌ಐ ಮುರಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲಾ ಕಾಲೇಜುಗಳ ಸುತ್ತಮುತ್ತ ಗಸ್ತು ಹೆಚ್ಚಿಸಿದ್ದೇವೆ. ಕೇಶಮುಂಡನದ ಕಾರ್ಯಾಚರಣೆ ಮೂಲಕ ಯುವಕರಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದೇವೆ. ಈ ಕಾರ್ಯಾಚರಣೆ ಮುಂದುವರಿಯುತ್ತದೆ’ ಎಂದು ಹೇಳಿದ್ದಾರೆ.

 

 

Tags: 

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !