ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿವೇಶನ ಖರೀದಿ: ಆರೋಪದಲ್ಲಿ ಹುರುಳಿಲ್ಲ’

ಕೋಚಿಮುಲ್‌ ಮಾಜಿ ನಿರ್ದೇಶಕರ ಆರೋಪಕ್ಕೆ ತಿರುಗೇಟು
Last Updated 7 ಫೆಬ್ರುವರಿ 2023, 5:05 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ಪಟ್ಟಣದಲ್ಲಿ ಕೋಮುಲ್ ಶಿಬಿರ ಕಚೇರಿ ನಿರ್ಮಿಸಲು ನಿವೇಶನ ಖರೀದಿಗೆ ಸಂಬಂಧಿಸಿದಂತೆ ಕೋಚಿಮುಲ್ ಮಾಜಿ ನಿರ್ದೇಶಕ ಪಾಳ್ಯ ಬೈರೆಡ್ಡಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ’ ಎಂದು ಕೋಮುಲ್ ನಿರ್ದೇಶಕ ಎನ್. ಹನುಮೇಶ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೇಶನ ಖರೀದಿಯಲ್ಲಿ ₹ 35 ಲಕ್ಷ ಲಾಭ ಮಾಡಿಕೊಳ್ಳಲಾಗಿದೆ ಎಂದು ಪಾಳ್ಯ ಬೈರೆಡ್ಡಿ ಹೇಳಿರುವುದು ಸರಿಯಲ್ಲ ಎಂದರು.

ನಿಯಮಾನುಸಾರ ಆಡಳಿತ ಮಂಡಳಿಯ ಅನುಮೋದನೆ ಪಡೆದ ಬಳಿಕ 30*40 ಚದರ ಅಡಿ ನಿವೇಶನ ಖರೀದಿಗೆ ಅರ್ಹ ಮಾಲೀಕರಿಂದ ಅರ್ಜಿ ಕರೆಯಲಾಗಿತ್ತು. ನಿಗದಿತ ಅವಧಿಯೊಳಗೆ ಆಸಕ್ತ ಮಾಲೀಕರಿಂದ ಬಂದ ಅರ್ಜಿ ಮತ್ತು ದಾಖಲೆಗಳನ್ನು ಕಾನೂನು ತಜ್ಞರ ಪರಿಶೀಲನೆಗೆ ಒಳಪಡಿಸಲಾಗಿತ್ತು. ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನೂ ಕಲ್ಪಿಸಲಾಗಿತ್ತು ಎಂದು ಹೇಳಿದರು.

ಯಾವುದೇ ಆಕ್ಷೇಪಣೆ ಬಾರದ ಹಿನ್ನೆಲೆಯಲ್ಲಿ ನೋಂದಾಯಿತ ಮೌಲ್ಯಮಾಪಕರಿಂದ ದರ ನಿಗದಿಪಡಿಸಲಾಯಿತು. ಪ್ರತಿ ಚದರ ಅಡಿಗೆ ₹ 2,350 ರಿಂದ ₹ 2,500 ನೀಡಬಹುದೆಂದು ಅಭಿಪ್ರಾಯಪಟ್ಟಿದ್ದರು ಎಂದು ಹೇಳಿದರು.

ಒಕ್ಕೂಟದ ಅಧಿಕಾರಿಗಳ ಸಮಿತಿ ನಿವೇಶನದ ಸ್ಥಳ ಪರಿಶೀಲನೆ ನಡೆಸಿ, ಒಕ್ಕೂಟದ ಶಿಬಿರ ಕಚೇರಿ ನಿರ್ಮಿಸಲು ಅದು ಸೂಕ್ತ ಸ್ಥಳವೆಂದು ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ನಿವೇಶನದ ದರವನ್ನು ಪರಿಶೀಲಿಸಿ ಖರೀದಿ ದರ ನಿಗದಿಪಡಿಸುವಂತೆ ಆಡಳಿತ ಮಂಡಳಿಯನ್ನು ಕೋರಲಾಯಿತು. ಮಂಡಳಿ ಸಭೆಯಲ್ಲಿ ಚರ್ಚಿಸಿ ಚದರ ಅಡಿಯೊಂದಕ್ಕೆ ₹ 2,190 ಅಂತಿಮಗೊಳಿಸಿ, ಸಹಕಾರ ಇಲಾಖೆಯ ಅನುಮೋದನೆಗೆ ಪ್ರಸ್ತಾವ ಸಲ್ಲಿಸಲಾಯಿತು ಎಂದು ಹೇಳಿದರು.

‘ಮಾಜಿ ನಿರ್ದೇಶಕರಿಗೆ ಸರ್ಕಾರ ನಿಗದಿಪಡಿಸಿರುವ ದರಕ್ಕೂ, ಮುಕ್ತ ಮಾರುಕಟ್ಟೆ ದರಕ್ಕೂ ಇರುವ ವ್ಯತ್ಯಾಸದ ಮಾಹಿತಿ ಇಲ್ಲ. ಅವರು ತಿಳಿಸಿರುವಂತೆ ವಾರ್ಡ್‌ ನಂ. 19ರಲ್ಲಿ ಮೂಲೆ ನಿವೇಶನ ನಂ. 39, 40ರಲ್ಲಿ ಸರ್ಕಾರ ನಿಗದಿಪಡಿಸಿರುವ ದರದಲ್ಲಿ ನಿವೇಶನ ಕೊಡಿಸಿದರೆ ಒಪ್ಪಿಕೊಳ್ಳುತ್ತೇನೆ’ ಎಂದು ಹೇಳಿದರು.

ಪಟ್ಟಣ ಹೊರವಲಯದ ಪನಸಮಾಕನಹಳ್ಳಿ ಸಮೀಪ ಒಕ್ಕೂಟದ 10 ಎಕರೆ ಜಮೀನನ್ನು ಹಾಲಿನ ಉತ್ಪನ್ನ ಸಂಗ್ರಹಿಸಿರುವ ಬಾಕ್ಸ್ ತಯಾರಿಕಾ ಘಟಕ ಸ್ಥಾಪಿಸಲು ಮೀಸಲಿಡಲಾಗಿದೆ. ಶಿಬಿರ ಕಚೇರಿ ನಿರ್ಮಿಸಲು ಪ್ರಯತ್ನಿಸಿದರೂ ಅಲ್ಲಿಗೆ ಬಸ್ ಸೌಲಭ್ಯ ಇಲ್ಲ. ಸರಿಯಾದ ರಸ್ತೆ ಸೌಲಭ್ಯವೂ ಇಲ್ಲ. ಪಟ್ಟಣದಿಂದ 6 ಕಿ.ಮೀ ದೂರ ಇರುವುದರಿಂದ ಹಾಲು ಉತ್ಪಾದಕರು ಹಾಗೂ ಸಿಬ್ಬಂದಿ ಓಡಾಟಕ್ಕೆ ಕಷ್ಟವಾಗುತ್ತದೆ. ಪಟ್ಟಣದಲ್ಲಿ ಕಚೇರಿ ಇದ್ದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಮಾನಿಕೆರೆ ಮೈದಾನದಲ್ಲಿ ಮಂಜೂರಾಗಿರುವ ನಿವೇಶನದಲ್ಲಿ ಶಿಬಿರ ಕಚೇರಿ ಕಟ್ಟಡ ನಿರ್ಮಿಸುವಂತೆ ಸಲಹೆ ಮಾಡಲಾಗಿದೆ. ಆದರೆ, ಆ ಸ್ಥಳದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಕಟ್ಟಡ ನಿರ್ಮಾಣ ಸಾಧ್ಯವಾಗುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ಅಮಾನಿಕರೆ ಮೈದಾನ ನ್ಯಾಯಾಲಯದ ತಡೆಯಾಜ್ಞೆಗೆ ಒಳಪಟ್ಟಿರುವುದರಿಂದ ಆ ಜಾಗ ಒಕ್ಕೂಟದ ಹೆಸರಿಗೆ ಮಂಜೂರಾಗಿಲ್ಲ ಎಂದು ಹೇಳಿದರು.

‘ಶ್ರೀನಿವಾಸಪುರ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಕೋಮುಲ್ ಶಿಬಿರ ಕಚೇರಿ ಕಟ್ಟಡ ನಿರ್ಮಿಸಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಒತ್ತಾಯದ ಮೇರೆಗೆ ಪುರಸಭೆ ವ್ಯಾಪ್ತಿಯಲ್ಲಿ ಶಿಬಿರ ಕಚೇರಿ ನಿರ್ಮಿಸಲು ನಿವೇಶನ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ’ ಎಂದು ಹೇಳಿದರು.

‘ಪಾಳ್ಯ ಬೈರೆಡ್ಡಿ ಹೇಳಿರುವಂತೆ ಆ ಜಾಗದಲ್ಲಿ ಚದರ ಅಡಿಯೊಂದಕ್ಕೆ ₹ 650ರಂತೆ ನಿವೇಶನ ಕೊಡಿಸಿದರೆ ಈಗ ಖರೀದಿಸುತ್ತಿರುವ ನಿವೇಶನಕ್ಕೆ ಬದಲಾಗಿ ಅದನ್ನೇ ಖರೀದಿಸಲಾಗುವುದು’ ಎಂದು ಹೇಳಿದರು.

ಕೋಚಿಮುಲ್ ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವಿ. ಸುಧಾಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಮುಖಂಡರಾದ ಪಾಳ್ಯ ಗೋಪಾಲರೆಡ್ಡಿ, ನಾಗದೇನಹಳ್ಳಿ ಸೀತಾರಾಮರೆಡ್ಡಿ, ಕೇತಗಾನಹಳ್ಳಿ ನಾಗರಾಜ್, ಅಯ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT