ಗುರುವಾರ , ಆಗಸ್ಟ್ 22, 2019
26 °C
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಮೆಚ್ಚುಗೆ

ಜಿಲ್ಲಾ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ

Published:
Updated:
Prajavani

ಕೋಲಾರ: ‘ಜಿಲ್ಲಾ ಕೇಂದ್ರದಲ್ಲಿನ ಶ್ರೀ ನರಸಿಂಹರಾಜ (ಎಸ್‌ಎನ್ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಎನ್‌ಆರ್‌ ಆಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟ ಖಾತ್ರಿ ಮಾನ್ಯತೆ ಸಿಕ್ಕಿರುವ ಹಿನ್ನೆಲೆಯಲ್ಲಿ ಶನಿವಾರ ಈ ಆಸ್ಪತ್ರೆಗೆ ಭೇಡಿ ನೀಡಿ ಪರಿಶೀಲನೆ ನಡೆಸಿ, ‘ಆಸ್ಪತ್ರೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಸದ್ಯದಲ್ಲೇ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಸಿಗುತ್ತಿದೆ. ಈ ಕಾರಣಕ್ಕಾಗಿಯೇ ಆಸ್ಪತ್ರೆಯು ರಾಷ್ಟ್ರೀಯ ಗುಣಮಟ್ಟ ಖಾತ್ರಿ ಮಾನ್ಯತೆ ಪಡೆದಿದೆ. ವೈದ್ಯರು ಮತ್ತಷ್ಟು ಉತ್ತಮ ಸೇವೆ ನೀಡಿ ಜಿಲ್ಲೆಗೆ ಕೀರ್ತಿ ತರಬೇಕು. ಆಸ್ಪತ್ರೆ ಅಭಿವೃದ್ಧಿಗೆ ಸೌಕರ್ಯ ಕಲ್ಪಿಸುತ್ತೇವೆ’ ಎಂದು ತಿಳಿಸಿದರು.

‘ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡಿರುವ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಸದ್ಯದಲ್ಲೇ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಬಳಿಗೆ ಒಟ್ಟಾರೆ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ 565ಕ್ಕೆ ಏರಿಕೆಯಾಗಲಿದೆ. ಅದಕ್ಕೆ ತಕ್ಕಂತೆ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಯನ್ನು ಒದಗಿಸಬೇಕು’ ಎಂದು ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಜಿ.ನಾರಾಯಣಸ್ವಾಮಿ ಮನವಿ ಮಾಡಿದರು.

‘ಜಿಲ್ಲೆಯ ಇತರೆ ತಾಲ್ಲೂಕುಗಳಿಂದಲೂ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಹೆಚ್ಚಿನ ಸಿಬ್ಬಂದಿಯಿಲ್ಲದ ಕಾರಣ ಹಾಲಿ ಸಿಬ್ಬಂದಿ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ. ಖಾಲಿ ಇರುವ ಸಿಬ್ಬಂದಿ ಹುದ್ದೆ ಭರ್ತಿ ಮಾಡುವಂತೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಈ ಬಗ್ಗೆ ಚರ್ಚಿಸಬೇಕು’ ಎಂದು ಕೋರಿದರು.

‘ಆಸ್ಪತ್ರೆಯಲ್ಲಿ ಒಂದೇ ಒಂದು ನೀರು ಶುದ್ಧೀಕರಣ ಘಟಕವಿದೆ. ಹೆರಿಗೆ ಮತ್ತು ತೀವ್ರ ನಿಗಾ ಘಟಕಕ್ಕೆ ತಲಾ ಒಂದೊಂದು ನೀರಿನ ಘಟಕದ ಅಗತ್ಯವಿದೆ. ರಕ್ತ ನಿಧಿ ಕೇಂದ್ರಕ್ಕೆ ಪ್ರತ್ಯೇಕ ಆಂಬುಲೆನ್ಸ್‌ ಹಾಗೂ ಹೆಚ್ಚುವರಿ ಸಿಬ್ಬಂದಿ ಒದಗಿಸಬೇಕು’ ಎಂದು ಹೇಳಿದರು.

ಆಮ್ಲಜನಕ ಘಟಕ: ‘ಸದ್ಯ ಖಾಸಗಿ ಏಜೆನ್ಸಿಗಳ ಮೂಲಕ ಆಸ್ಪತ್ರೆಗೆ ಆಮ್ಲಜನಕದ ಸಿಲಿಂಡರ್‌ ತರಿಸುತ್ತಿರುವುದರಿಂದ ಹೆಚ್ಚಿನ ಹಣ ವ್ಯಯವಾಗುತ್ತಿದೆ. ಆದ ಕಾರಣ ಆಸ್ಪತ್ರೆಯಲ್ಲೇ ಆಮ್ಲಜನಕ ಘಟಕ ಸ್ಥಾಪನೆಗೆ ಅನುದಾನ ನೀಡಬೇಕು. ಆಮ್ಲಜನಕ ಘಟಕ ಆರಂಭವಾದರೆ ವರ್ಷಕ್ಕೆ ಸುಮಾರು ₹ -12 ಲಕ್ಷ ಉಳಿತಾಯವಾಗಲಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಆರೋಗ್ಯ ಇಲಾಖೆ ಅಧಿಕಾರಿಗಳು, ಆಸ್ಪತ್ರೆ ವೈದ್ಯರು ಹಾಜರಿದ್ದರು.

Post Comments (+)