ಶನಿವಾರ, ನವೆಂಬರ್ 16, 2019
21 °C
ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಮಯ್ಯ ವಿ.ವಿ ಕುಲಪತಿ ಸುಂದರೇಶ್ ಕಿವಿಮಾತು

ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ: ರಾಜಿ ಬೇಡ

Published:
Updated:
Prajavani

ಕೋಲಾರ: ‘ಸಂಶೋಧನಾ ಸಾಹಿತ್ಯದ ವಿಮರ್ಶೆಯೊಂದಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಕುರಿತು ಆಲೋಚಿಸಿ’ ಎಂದು ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಸಿ.ಸುಂದರೇಶ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿ ಶನಿವಾರ ನಡೆದ ಜಾಲಪ್ಪ ಆಸ್ಪತ್ರೆಯ ಬೆಳ್ಳಿ ಹಬ್ಬ ಹಾಗೂ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪರ 95ನೇ ಹುಟ್ಟು ಹಬ್ಬ ಸಮಾರಂಭದಲ್ಲಿ ಮಾತನಾಡಿ, ‘ಆಧುನಿಕ ಯುಗದಲ್ಲಿ ಬೆರಳ ತುದಿಯಲ್ಲೇ ಮಾಹಿತಿ ಲಭ್ಯ ಇರುವುದರಿಂದ ವ್ಯವಸ್ಥೆ ಸುಧಾರಣೆಗೆ ಚಿಂತನೆ ಅಗತ್ಯ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರ ನಂಬಿಕೆ ಗಳಿಸಿ’ ಎಂದರು.

‘ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಅಗತ್ಯ. ಪ್ರತಿ ರೋಗಿಯ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಬೇಕು. ರೋಗಿಗಳ ಹಿತದೃಷ್ಟಿಯಿಂದ ಮಾಹಿತಿ ಸೋರಿಕೆಯಾಗದಂತೆ ಎಚ್ಚರ ವಹಿಸಬೇಕು. ಇಂಟರ್‌ನೆಟ್ ಯುಗದಲ್ಲಿ ಟೆಲಿಮೆಡಿಸನ್ ವ್ಯವಸ್ಥೆಯ ಅಳವಡಿಕೆ ದೊಡ್ಡ ಕೆಲಸವಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಟೆಲಿಮೆಡಿಸನ್ ವ್ಯವಸ್ಥೆ ಬಹಳ ಮುಖ್ಯ’ ಎಂದು ಅಭಿಪ್ರಾಯಪಟ್ಟರು.

‘ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ವಿಚಾರದಲ್ಲಿ ಯಾವುದೇ ರಾಜಿ ಬೇಡ. ವೈದ್ಯಕೀಯ ಕ್ಷೇತ್ರದಲ್ಲಿನ ಆಧುನಿಕ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕು. ವೈದ್ಯಕೀಯ ವೃತ್ತಿಯಲ್ಲಿ ಹಣ ಸಂಪಾದನೆಗಿಂತ ಮಾನವೀಯತೆ ಮುಖ್ಯ. ರೋಗಿ ಹಾಗೂ ವೈದ್ಯರ ಸಂಬಂಧ ಪ್ರಮುಖವಾದದು. ರೋಗಿಗಳಿಗೆ ವಿಶ್ವಾಸದಿಂದ ಚಿಕಿತ್ಸೆ ನೀಡಿದರೆ ಶೇ 100ರಷ್ಟು ಗುಣಮುಖರಾಗುತ್ತಾರೆ’ ಎಂದು ಸಲಹೆ ನೀಡಿದರು.

ವೈದ್ಯಕೀಯ ಸೇವೆ: ‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ಜಾಲಪ್ಪರ ಆಸ್ಪತ್ರೆಯು ಸಾವಿರಾರು ಬಡ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ನೀಡುತ್ತಿದೆ. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣ ನೀಡುತ್ತೇವೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

‘ಜಾಲಪ್ಪ ಅವರು ರಾಜಕೀಯದ ಜತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಕೋಲಾರ ನಗರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ತೆರೆದು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ’ ಎಂದು ಬಣ್ಣಿಸಿದರು.

1,200 ಹಾಸಿಗೆ: ‘1994ರಲ್ಲಿ ಕೇವಲ 350 ಹಾಸಿಗೆ ಸಾಮರ್ಥ್ಯದೊಂದಿಗೆ ಆರಂಭವಾದ ಜಾಲಪ್ಪ ಆಸ್ಪತ್ರೆಯು ಈಗ 1,200 ಹಾಸಿಗೆ ಸಾಮರ್ಥ್ಯ ಹೊಂದಿದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಜತೆಗೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಲಕ್ಷ್ಮಯ್ಯ ವಿವರಿಸಿದರು.

‘ಸಂಸ್ಥೆಯಲ್ಲಿ ವೈದ್ಯಕೀಯ ಪದವಿಯಲ್ಲಿ 1 ಸಾವಿರ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿಯಲ್ಲಿ 600 ಹಾಗೂ ಅರೆ ವೈದ್ಯಕೀಯ ಪದವಿಗಳಲ್ಲಿ 680 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳಿಗಾಗಿ ಒಂದು ವರ್ಷದೊಳಗೆ ಗಂಥಿ ಸಂಸ್ಥೆ ಸ್ಥಾಪಿಸಲಾಗುತ್ತದೆ’ ಎಂದು ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಕುಲಪತಿ ಡಾ.ಎಸ್.ಕುಮಾರ್ ತಿಳಿಸಿದರು.

ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿಗಳು, ಶುಶ್ರೂಷಕಿಯರು ಹಾಗೂ ಸಿಬ್ಬಂದಿಗೆ ಪ್ರಶಸ್ತಿ ನೀಡಲಾಯಿತು. ಮಾಜಿ ಶಾಸಕ ಹಾಗೂ ಜಾಲಪ್ಪರ ಪುತ್ರ ನರಸಿಂಹಸ್ವಾಮಿ, ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ್‌, ಉಪಾಧ್ಯಕ್ಷ ರಾಜೇಶ್‌ ಎನ್‌.ಜಗದಾಳೆ, ನಿರ್ದೇಶಕ ಜೆ.ರಾಜೇಂದ್ರ, ಕುಲಸಚಿವ ಡಾ.ಕೆ.ಎನ್.ವಿ.ಪ್ರಸಾದ್, ದೇವರಾಜ ಅರಸು ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಪಿ.ಎನ್‌.ಶ್ರೀರಾಮುಲು, ವಿಶ್ರಾಂತ ಕುಲಪತಿಗಳಾದ ಡಾ.ಎ.ವಿ.ಎಂ.ಕುಟ್ಟಿ, ಡಾ.ಸಿ.ಕೆ.ರಂಜನ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)