ಮಂಗಳವಾರ, ನವೆಂಬರ್ 19, 2019
27 °C
ಅಧಿಕಾರಿಗಳು– ಗುತ್ತಿಗೆದಾರರಿಗೆ ಸಂಸದ ಮುನಿಸ್ವಾಮಿ ಎಚ್ಚರಿಕೆ

ಕಾಮಗಾರಿ ಗುಣಮಟ್ಟ: ರಾಜಿಯಿಲ್ಲ

Published:
Updated:
Prajavani

ಕೋಲಾರ: ‘ಕೇಂದ್ರ ಸರ್ಕಾರದ ನಗರೋತ್ಥಾನ ಮತ್ತು ಅಮೃತ್ ಯೋಜನೆಯಲ್ಲಿ ಅಕ್ರಮ ನಡೆಯಲು ಬಿಡುವುದಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.

ನಗರದ ವಿವಿಧೆಡೆ ಅಮೃತ್ ಮತ್ತು ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿ ಮಾತನಾಡಿ, ‘ಈವರೆಗೆ ಆಗಿರುವ ಕಾಮಗಾರಿಗಳ ಗುಣಮಟ್ಟ ಉತ್ತಮವಾಗಿದೆ. ಮುಂದೆಯೂ ಇದೇ ರೀತಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ಗುಣಮಟ್ಟದ ವಿಚಾರದಲ್ಲಿ ರಾಜಿಯಿಲ್ಲ. ಸರ್ಕಾರದ ಹಣ ಪೋಲಾಗಲು ಬಿಡುವುದಿಲ್ಲ’ ಎಂದರು.

‘ಅಮೃತ್ ಯೋಜನೆಯಲ್ಲಿ ನಗರಕ್ಕೆ ₹ 96 ಕೋಟಿ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ಯಾವ ಕೆಲಸ ಆಗಿವೆ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳೊಂದಿಗೆ ಕಾಮಗಾರಿ ವೀಕ್ಷಣೆ ಮಾಡಿದ್ದೇನೆ. ನಗರದಲ್ಲಿ 21 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಬೇಕೆಂಬುದು ಯೋಜನೆಯಲ್ಲಿದೆ. ಆದರೆ, 4 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶ್ರದ್ಧೆಯಿಂದ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ಕಾಮಗಾರಿಗಳ ಕಡೆಗೆ ತಿರುಗಿ ನೋಡುವುದಿಲ್ಲ ಎಂದು ಭಾವಿಸಬೇಡಿ. ನಾನು ಅಂತಹವನಲ್ಲ, ಎಲ್ಲವನ್ನೂ ಪರಿಶೀಲಿಸುತ್ತೇನೆ. ಕಾಮಗಾರಿಯಲ್ಲಿ ಲೋಪವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಹಳ್ಳಿಯಂತಿದೆ: ‘ನಗರದ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆ ಆಗುತ್ತಿದ್ದರೂ ಕೋಲಾರದ ಚಿತ್ರಣ ಬದಲಾಗುತ್ತಿಲ್ಲ. ಜಿಲ್ಲಾ ಕೇಂದ್ರವಾದ ಕೋಲಾರ ಹಳ್ಳಿಯಂತಿದೆ. ಜಿಲ್ಲಾ ಕೇಂದ್ರದಲ್ಲಿ ಮೂಲಸೌಕರ್ಯ ಸಮಸ್ಯೆ ಇರಬಾರದು. ಅದಕ್ಕೆ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಬೀದಿ ದೀಪ, ಕಸ, ಚರಂಡಿ, ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಗಮನಹರಿಸಿ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಕುಡಿಯುವ ನೀರಿನ ಸೌಕರ್ಯಕ್ಕೆ ಅಮೃತ್ ಯೋಜನೆಯಲ್ಲಿ ₹ 16 ಕೋಟಿ ಮಂಜೂರಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸಮಸ್ಯೆ ಬಗೆಹರಿದಿಲ್ಲ. ನಗರದ ಯಾವ ಭಾಗಕ್ಕೆ ಕಾಲಿಟ್ಟರೂ ನೀರಿನದೇ ದೊಡ್ಡ ಸಮಸ್ಯೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎಂದು ನಗರಸಭೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಆತಂಕಪಡಬೇಕಿಲ್ಲ: ‘ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕುಸಿದಿದೆ, ಇದರಿಂದ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದೆ. ಆದರೂ ನಗರದ ಜನತೆ ಆತಂಕಪಡಬೇಕಿಲ್ಲ. ಟ್ಯಾಂಕರ್ ಮೂಲಕ ಮತ್ತು ನಲ್ಲಿಗಳ ಮೂಲಕ ನೀರು ಪೂರೈಸಲಾಗುತ್ತದೆ’  ಎಂದು ಭರವಸೆ ನೀಡಿದರು.

‘ನಗರದ ಕ್ಲಾಕ್ ಟವರ್‌ನಿಂದ ಬಂಗಾರಪೇಟೆ ವೃತ್ತದವರೆಗೆ, ಬಂಗಾರಪೇಟೆ ವೃತ್ತದಿಂದ ಮೆಕ್ಕೆ ವೃತ್ತದವರೆಗೆ ರಸ್ತೆ ವಿಸ್ತರಣೆ ಮಾಡಲಾಗುತ್ತದೆ. ಈ ರಸ್ತೆಗಳಲ್ಲಿ ಒತ್ತುವರಿ ಆಗಿರುವ ಜಾಗವನ್ನು ತೆರವು ಮಾಡಬೇಕು. ರಸ್ತೆ ವಿಸ್ತರಣೆಗೆ ಸಾರ್ವಜನಿಕರು ಸಹಕರಿಸೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ಎಲ್ಲರೂ ಒಗ್ಗೂಡಿ ನಗರವನ್ನು ಅಭಿವೃದ್ಧಿ ಮಾಡಬೇಕು’ ಎಂದು ಮನವಿ ಮಾಡಿದರು.

ನಗರಾಭಿವೃದ್ಧಿ ಕೋಶದ ನಿರ್ದೇಶಕ ರಂಗಸ್ವಾಮಿ, ನಗರಸಭೆ ಆಯುಕ್ತ (ಪ್ರಭಾರ) ಸುಧಾಕರ್‌ಶೆಟ್ಟಿ, ಮಾಜಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)