ಪ್ರಶ್ನಿಸುವ ಗುಣ ಜ್ಞಾನ ವೃದ್ಧಿಗೆ ಸಹಕಾರಿ

7

ಪ್ರಶ್ನಿಸುವ ಗುಣ ಜ್ಞಾನ ವೃದ್ಧಿಗೆ ಸಹಕಾರಿ

Published:
Updated:
Prajavani

ಕೋಲಾರ: ‘ವಿದ್ಯಾರ್ಥಿಗಳು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳುವುದರಿಂದ ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಅಭಿಪ್ರಾಯಪಟ್ಟರು.

ನಗರದಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ವರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ‘ಕಲಿಕೆಯ ಸಂದರ್ಭದಲ್ಲಿ ಎದುರಾಗುವ ಅನುಮಾನಗಳನ್ನು ತರಗತಿಯಲ್ಲೇ ಪರಿಹರಿಸಿಕೊಳ್ಳಬೇಕು ಪ್ರಶ್ನಿಸಬೇಕು’ ಎಂದು ತಿಳಿಸಿದರು.

‘ಪ್ರತಿಯೊಬ್ಬರಲ್ಲೂ ಬುದ್ದಿಶಕ್ತಿ ಇದೆ. ಆದರೆ ಅದನ್ನು ಅರಿತು ಸಾಧನೆಯ ಯಶಸ್ಸು ಕಾಣಲು ಬಳಸಿಕೊಳ್ಳುವ ಸಾಮರ್ಥ್ಯ ಮತ್ತು ನಾನು ಕಲಿಯಬೇಕೆಂಬ ಆಶಯಗಳು ಇರಬೇಕು. ಸಾಮಾನ್ಯ ಜ್ಞಾನ ವೃದ್ದಿ ನೋಡುವುದರಿಂದ, ಕೇಳುವುದರಿಂದ, ಓದುವುದರಿಂದ ಸಾಧ್ಯ, ಕಾಟಾಚಾರಕ್ಕೆ ಓದಿ, ನೋಡಿ ಹೋದರೆ ಪ್ರಯೋಜನವಿಲ್ಲ. ಪ್ರತಿ ವಿಷಯದ ಕುರಿತು ವಿಶ್ಲೇಷಣೆ ಮಾಡುವಂತಾಗಬೇಕು’ ಎಂದು ಹೇಳಿದರು.

‘ಜೀವನದ ಪ್ರತಿ ಕೆಲಸದಲ್ಲೂ ವಿಜ್ಞಾನ ಹಾಸುಹೊಕ್ಕಾಗಿದೆ. ವಿದ್ಯಾರ್ಥಿಗಳು ಯಾವುದೇ ವಸ್ತುವನ್ನು ವೀಕ್ಷಿಸಿ, ವಿಶ್ಲೇಷಣೆ ಮಾಡುವ ಶಕ್ತಿ ಪಡೆದುಕೊಳ್ಳಬೇಕು’ ಎಂದು ಕರ್ನಾಟಕ ವಿಜ್ಞಾನ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶಿವಣ್ಣ ಸಲಹೆ ನೀಡಿದರು.

‘ಭಾರತೀಯ ಸಂಸ್ಕೃತಿಯಲ್ಲಿ ಸಂಪ್ರದಾಯಗಳ ಜತೆ ವಿಜ್ಞಾನಕ್ಕೂ ನಿಕಟ ಸಂಬಂಧವಿದೆ. ವಿಶ್ವದಲ್ಲೇ ಅನೇಕ ಸಾಧಕ ಜ್ಞಾನಿಗಳು ನಮ್ಮ ದೇಶದವರೇ ಇದ್ದಾರೆ’ ಎಂದರು.

ಕರ್ನಾಟಕ ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮಂಜುಳಾ ಭೀಮರಾವ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಗಟ್ಟಿಗೊಳಿಸಲು ವಿಜ್ಞಾನ ಪರಿಷತ್ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ’ ಎಂದು ತಿಳಿಸಿದರು.

‘ಒಲಂಪಿಯಡ್ ಶಾಲೆ ಸ್ವರ್ಧೆಯಲ್ಲಿ ರಾಜ್ಯದ 14,780 ಶಾಲೆಗಳ ಪೈಕಿ ಕೇವಲ 9 ಸಾವಿರ ವಿದ್ಯಾರ್ಥಿಗಳು ಮಾತ್ರ ಕಳೆದ ವರ್ಷ ಪಾಲ್ಗೊಂಡಿದ್ದರು. ಈ ಭಾರಿ ಇನ್ನು ಹೆಚ್ಚಿಗೆ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಪ್ರವೇಶ ಉಚಿತ’ ಎಂದು ಹೇಳಿದರು.

‘ರಸಪ್ರಶ್ನೆ ಸ್ವರ್ಧೆಯಲ್ಲಿ ಪಾಲ್ಗೊಂಡಿರುವ ಮಕ್ಕಳಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುವ ಶಕ್ತಿ ಉತ್ತಮವಾಗಿದೆ. ಆದರೆ ಪರಿಸರದಲ್ಲಿನ ಸಸ್ಯಗಳನ್ನು ಗುರುತಿಸುವಲ್ಲಿ ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ನಿಮ್ಮ ವಿಜ್ಞಾನ ಶಿಕ್ಷಕರ ಸಹಾಯದಿಂದ ಪರಿಸರದಲ್ಲಿ ಕಂಡು ಬರುವ ಗಿಡಮರಗಳನ್ನು ಗುರುತಿಸುವ ಮತ್ತು ಅವುಗಳ ಮಹತ್ವವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ವರ್ಧೆಗಳಲ್ಲಿ ಕೆಜಿಎಫ್‌ನ ಮಹಾವೀರ್ ಜೈನ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಸೆಂಟ್ ತೆರೇಸಾ ಬಾಲಕಿಯರ ಪ್ರೌಢಶಾಲೆ ಮಕ್ಕಳು ದ್ವೀತೀಯ ಸ್ಥಾನ ಹಾಗೂ ತಾಲ್ಲೂಕಿನ ಮದನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಷಯ ಪರಿವೀಕ್ಷಕರಾದ ಶಶಿವಧನಾ, ಗಾಯತ್ರಿ, ವಿಜ್ಞಾನ ಪರಿಷತ್ ಉಪಾಧ್ಯಕ್ಷ ಜಿ.ಎಂ.ವೆಂಕಟರಮಣಪ್ಪ, ಶಿಕ್ಷಣ ಸಂಯೋಜಕ ಸುಬ್ರಮಣಿ, ಶಿಕ್ಷಕ ಕೃಷ್ಣಮೂರ್ತಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !