ಬುಧವಾರ, ನವೆಂಬರ್ 13, 2019
25 °C
ವೈಟ್‌ಫೀಲ್ಡ್‌– ಕೋಲಾರ ನಡುವೆ ರೈಲು ಸೇವೆ: ಸಂಸದ ಮುನಿಸ್ವಾಮಿ ಹೇಳಿಕೆ

ಕೋಲಾರ–ವೈಟ್‌ಫೀಲ್ಡ್‌ ಮಾರ್ಗ: 31ಕ್ಕೆ ಪ್ರಾಯೋಗಿಕ ರೈಲು ಸಂಚಾರ ಆರಂಭ

Published:
Updated:
Prajavani

ಕೋಲಾರ: ‘ಬೆಂಗಳೂರಿನ ವೈಟ್‌ಫೀಲ್ಡ್‌ ಮತ್ತು ಕೋಲಾರದ ನಡುವೆ ಅ.31ರಿಂದ ಹೊಸದಾಗಿ ರೈಲು ಸೇವೆ ಆರಂಭವಾಗಲಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಇಲ್ಲಿನ ರೈಲು ನಿಲ್ದಾಣಕ್ಕೆ ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾತನಾಡಿ, ‘ವೈಟ್‌ಫೀಲ್ಡ್‌ನಿಂದ ಕೋಲಾರಕ್ಕೆ ಬೆಳಿಗ್ಗೆ 8 ಗಂಟೆ ನಂತರ ಸದ್ಯ ಯಾವುದೇ ರೈಲು ಸೇವೆಯಿಲ್ಲ. ಹೀಗಾಗಿ ಸದ್ಯಕ್ಕೆ ಪ್ರಾಯೋಗಿಕವಾಗಿ ಒಂದು ರೈಲನ್ನು ಓಡಿಸಲಾಗುವುದು’ ಎಂದರು.

‘ಪ್ರಯಾಣಿಕರ ಬೇಡಿಕೆಗೆ ಅನುಸಾರವಾಗಿ ವೈಟ್‌ಫೀಲ್ಡ್‌ನಿಂದ ಕೋಲಾರಕ್ಕೆ ರೈಲು ಸಂಚಾರ ಆರಂಭಿಸಲು ಸಿದ್ಧತೆ ಮಾಡಲಾಗಿದೆ. ಕೋಲಾರದಲ್ಲೇ ಸೇವೆಗೆ ಚಾಲನೆ ನೀಡಲಾಗುತ್ತದೆ. ಬಳಿಕ ಪ್ರಯಾಣಿಕರ ಸ್ಪಂದನೆ ಆಧರಿಸಿ ರೈಲಿಗೆ ವೇಳಾಪಟ್ಟಿ ನಿಗದಿಪಡಿಸಲಾಗುವುದು’ ಎಂದು ವಿವರಿಸಿದರು.

‘ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲೆಯ ಎಲ್ಲಾ ರೈಲು ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಕುಡಿಯುವ ನೀರು, ವಿದ್ಯುತ್‌ ದೀಪ, ಮೇಲ್ಛಾವಣಿ ಸಮಸ್ಯೆ, ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ, ಬಂಗಾರಪೇಟೆ ನಿಲ್ದಾಣದಲ್ಲಿ ಕೊಯಮತ್ತೂರು ರೈಲಿನ ನಿಲುಗಡೆ, ರೈಲ್ವೆ ಕೆಳ ಸೇತುವೆಗಳಲ್ಲಿ ನೀರು ತುಂಬಿಕೊಳ್ಳದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

‘ವೈಟ್‌ಫೀಲ್ಡ್‌ನಿಂದ ಹೊಸ ಮಾರ್ಗ ಮಾಡುವುದಕ್ಕೆ ಒಪ್ಪಿಗೆ ಸಿಕ್ಕಿದೆ. ರೈಲ್ವೆ ಕೋಚ್ ಕಾರ್ಖಾನೆ ಬದಲು ವರ್ಕ್‌ಶಾಪ್‌ ನಿರ್ಮಾಣ ಮಾಡಲು ಜಿಲ್ಲಾಧಿಕಾರಿ ಬಳಿ ಚರ್ಚಿಸಿ 400 ಎಕರೆ ಜಮೀನು ಪಡೆಯಲಾಗುವುದು. ಕೋಲಾರ ಮಾರ್ಗವನ್ನು ಎಲೆಕ್ಟ್ರಿಕಲ್ ಮಾರ್ಗವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದು. ಈ ಯೋಜನೆಗಳ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪರ ಬಳಿ ಚರ್ಚಿಸಲಾಗುವುದು’ ಎಂದು ಹೇಳಿದರು.

‘ಮಾರಿಕುಪ್ಪಂ, ಕೆಜಿಎಫ್ ಭಾಗದಿಂದ ಪ್ರತಿನಿತ್ಯ ಸಾವಿರಾರು ಮಂದಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ.  ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೆಲ ಕೋಚ್‌ಗಳನ್ನು ಅವರಿಗೆ ಮೀಸಲಿಡುವಂತೆ ಸೂಚನೆ ನೀಡಲಾಗಿದೆ. ರೈಲು ಪ್ರಯಾಣಿಕರ ಸಮಸ್ಯೆ ಅರಿತು ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ದೂರು ಬಂದಿವೆ: ‘ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ಪರಿಶೀಲನೆ ಮಾಡಿದ್ದೇವೆ. ಅನೇಕ ರೈಲ್ವೆ ಕೆಳ ಸೇತುವೆಗಳಲ್ಲಿ ಮಳೆ ನೀರು ತುಂಬಿಕೊಂಡು ಜನರಿಗೆ ಸಮಸ್ಯೆಯಾಗುತ್ತಿರುವ ಸಂಬಂಧ ಸಾಕಷ್ಟು ದೂರು ಬಂದಿವೆ. ಈ ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ’ ಎಂದು ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್‌ ತಿಳಿಸಿದರು.

‘ಹೊಸ ಲೆವೆಲ್ ಕ್ರಾಸಿಂಗ್‌ ನಿರ್ಮಾಣ, ಹೊಸ ರೈಲು ಸೇವೆ ಆರಂಭ, ಕೆಲವೆಡೆ ಹಳೆ ಹಳಿಗಳ ಬದಲಾವಣೆ, ಕೆಜಿಎಫ್ ಭಾಗದ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಕೋಚ್‌ ಮೀಸಲಿಡುವುದು ಮತ್ತು ಅವರ ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ನಗರ ಘಟಕದ ಅಧ್ಯಕ್ಷ ಎಂ.ಪಿ.ನಾರಾಯಣಸ್ವಾಮಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)