7
ಮುನಿದ ವರುಣ ದೇವ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಮಳೆರಾಯನ ಕಣ್ಣಾಮುಚ್ಚಾಲೆ

ಮಳೆ ಕೊರತೆ: ಕುಂಟುತ್ತಾ ಸಾಗಿದ ಬಿತ್ತನೆ

Published:
Updated:
ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ರೈತರು ಬಿತ್ತನೆಗಾಗಿ ಜಮೀನು ಉಳುಮೆ ಮಾಡುತ್ತಿರುವುದು

ಕೋಲಾರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭವಾಗಿ ತಿಂಗಳು ಕಳೆದರೂ ವರುಣ ದೇವನ ಕಣ್ಣಾಮುಚ್ಚಾಲೆ ಆಟದಿಂದಾಗಿ ಬಿತ್ತನೆ ಕಾರ್ಯ ಕುಂಟುತ್ತಾ ಸಾಗಿದೆ.

ಬರಪೀಡಿತ ಜಿಲ್ಲೆಯಲ್ಲಿ ಜೂನ್‌ ತಿಂಗಳ ಮೊದಲ ವಾರದಲ್ಲಿ ಮಳೆರಾಯ ಆಗೊಮ್ಮೆ ಈಗೊಮ್ಮೆ ಮುಖ ತೋರಿಸಿ ಮರೆಯಾಗಿದ್ದ. ನಂತರ ಎಲ್ಲಿಯೂ ಹೇಳಿಕೊಳ್ಳುವಂತ ಮಳೆಯಾಗಿಲ್ಲ. ಮಳೆ ನಂಬಿ ಅಲ್ಪಸ್ವಲ್ಪ ಬಿತ್ತನೆ ಮಾಡಿರುವ ರೈತರಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.

ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 724 ಮಿ.ಮೀ ಇದ್ದು, ನಾಲ್ಕೈದು ವರ್ಷಗಳಿಂದ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಜೂನ್‌ ತಿಂಗಳಿನಿಂದ ಆಗಸ್ಟ್‌ ಅಂತ್ಯದವರೆಗಿನ ಅವಧಿಯನ್ನು ಮುಂಗಾರು ಹಂಗಾಮು ಎಂದು ಪರಿಗಣಿಸಲಾಗಿದ್ದು, ಸಾಮಾನ್ಯವಾಗಿ ಈ ಅವಧಿಯಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಹೀಗಾಗಿ ಈ ಮೂರು ತಿಂಗಳಲ್ಲಿ ಬಿತ್ತನೆ ಕಾರ್ಯವೂ ಚುರುಕಾಗಿರುತ್ತದೆ.

ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ರಾಗಿ, ಮುಸುಕಿನ ಜೋಳ, ಮೇವಿನ ಜೋಳ, ತೊಗರಿ, ಹುರಳಿ, ಹೆಸರುಕಾಳು, ಅಲಸಂದೆ, ಅವರೆ, ಉದ್ದು, ನೆಲಗಡಲೆ, ಸೂರ್ಯಕಾಂತಿ, ಎಳ್ಳು, ಸಾಸಿವೆ, ಹರಳು, ಸೋಯಾ ಅವರೆ ಹಾಗೂ ಹುಚ್ಚೆಳ್ಳು ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ವಾಣಿಜ್ಯ ಬೆಳೆಗಳಾದ ಭತ್ತ, ಕಬ್ಬು ಹಾಗೂ ಹತ್ತಿಯನ್ನು ಅಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

ಬಿತ್ತನೆ ಗುರಿ: ಜಿಲ್ಲೆಯಲ್ಲಿ ಜನವರಿಯಿಂದ ಜೂನ್‌ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣ 269 ಮಿ.ಮೀ ಇದೆ. ಈ ಬಾರಿ ವಾಡಿಕೆಗಿಂತಲೂ ಕಡಿಮೆ 208.6 ಮಿ.ಮೀ ಮಳೆಯಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಐದೂ ತಾಲ್ಲೂಕುಗಳಿಂದ 1.02 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಆದರೆ, ಈವರೆಗೆ 1,510 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿ ಕೇವಲ ಶೇ 1.5ರಷ್ಟು ಬಿತ್ತನೆ ಗುರಿ ಸಾಧನೆಯಾಗಿದೆ.

ಜಿಲ್ಲೆಯ 14 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಹಾಗೂ 1,496 ಹೆಕ್ಟೇರ್‌ ಖುಷ್ಕಿ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದೆ. ಮುಳಬಾಗಿಲು ತಾಲ್ಲೂಕಿನಲ್ಲಿ ಅತಿ ಹೆಚ್ಚು 921 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯವೇ ಆರಂಭವಾಗಿಲ್ಲ. ಉಳಿದಂತೆ ಬಂಗಾರಪೇಟೆ ತಾಲ್ಲೂಕಿನಲ್ಲಿ 112, ಕೋಲಾರ 82 ಹಾಗೂ ಮಾಲೂರು ತಾಲ್ಲೂಕಿನಲ್ಲಿ 395 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಮೇ ಅಂತ್ಯದಲ್ಲಿ ಮತ್ತು ಜೂನ್‌ ಮೊದಲ ವಾರದಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ರೈತರು ಜೋಳ, ತೊಗರಿ, ನೆಲಗಡಲೆ, ಎಳ್ಳು ಬಿತ್ತನೆ ಮಾಡಿದ್ದಾರೆ. ನಂತರ ಮಳೆ ಕೈಕೊಟ್ಟಿದ್ದು, ಬೀಜಗಳು ಮೊಳಕೆಯೊಡೆದಿಲ್ಲ.

ಬೀಜ– ಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರದ ಬೇಡಿಕೆ 14,480 ಟನ್‌ ಇತ್ತು. ಈ ಪೈಕಿ 7,551 ಟನ್‌ ಪೂರೈಕೆಯಾಗಿದೆ. ಹಿಂದಿನ ವರ್ಷದ ದಾಸ್ತಾನು ಸೇರಿದಂತೆ 10,475 ಟನ್‌ ಗೊಬ್ಬರ ಮಾರಾಟವಾಗಿದೆ. ರಾಜ್ಯ ಸಹಕಾರ ಮಾರುಕಟ್ಟೆ ಒಕ್ಕೂಟದಲ್ಲಿ (ಕೆಎಸ್‌ಸಿಎಂಎಫ್‌) 1,543 ಟನ್‌ ಮತ್ತು ಖಾಸಗಿಯವರ ಬಳಿ 5,753 ಟನ್‌ ಸೇರಿದಂತೆ 7,296 ಟನ್‌ ರಸಗೊಬ್ಬರ ದಾಸ್ತಾನು ಇದೆ.

ಜಿಲ್ಲೆಗೆ 1,714 ಕ್ವಿಂಟಲ್‌ ಬಿತ್ತನೆ ಬೀಜ ಪೂರೈಕೆಯಾಗಿದ್ದು, ಈವರೆಗ 540 ಕ್ವಿಂಟಲ್‌ ಬೀಜ ವಿತರಣೆ ಮಾಡಲಾಗಿದೆ. ಮಳೆ ಕೊರತೆಯ ಕಾರಣಕ್ಕೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೇಳುವವರಿಲ್ಲ. ಆಗಸ್ಟ್‌ ತಿಂಗಳಲ್ಲಿ ಮಳೆ ಬಾರದಿದ್ದರೆ ಬಿತ್ತನೆ ಕಾರ್ಯ ಮತ್ತಷ್ಟು ಡೋಲಾಯಮಾನವಾಗಲಿದೆ.

**

ಜುಲೈನಲ್ಲಿ ಉತ್ತಮ ಮಳೆಯಾದರೆ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ. ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಇದೆ.

–ಎಚ್‌.ಕೆ.ಶಿವಕುಮಾರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ

**

ಈಗಾಗಲೇ ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆದಿದೆ. ಬಿತ್ತನೆಗೆ ಜಮೀನು ಉಳುಮೆ ಮಾಡಿ ಮಳೆಗಾಗಿ ಕಾಯುತ್ತಿದ್ದೇವೆ.

–ರಮೇಶ್‌ ತೊಟ್ಲಿ ಗ್ರಾಮದ ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !