ಮಂಗಳವಾರ, ಅಕ್ಟೋಬರ್ 22, 2019
21 °C
ತಡವಾಗಿ ಬಂದ ಮಳೆಗೆ ಬೆಳೆದು ನಿಂತ ಸಿರಿಧಾನ್ಯಗಳು

ಶ್ರೀನಿವಾಸಪುರ: ಕಣಜ ತುಂಬುವ ಭರವಸೆ ತಂದ ಮಳೆ

Published:
Updated:
Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಳೆ ಆಶ್ರಯದಲ್ಲಿ ಬಿತ್ತನೆ ಮಾಡಲಾಗಿರುವ ಬೆಳೆಗಳು ಹುಲುಸಾಗಿ ಬೆಳೆದು ನಿಂತಿವೆ. ರೈತರು ಈ ಬಾರಿಯಾದರೂ ಕಣಜ ತುಂಬಿಕೊಳ್ಳುವ ಕನಸು ಕಾಣುತ್ತಿದ್ದಾರೆ.

ಮೊದಲ ಬಿತ್ತನೆ ಸಮಯದಲ್ಲಿ ಮಳೆ ಕೈಕೊಟ್ಟ ಪರಿಣಾಮ, ವಾಡಿಕೆಯಂತೆ ನೆಲಗಡಲೆ ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ. ನೆಲಗಡಲೆ ಬೆಳೆಯುವ ಗಡಿ ಗ್ರಾಮಗಳ ರೈತರು ಬಿತ್ತನೆ ಮಾಡಲು ಸುಲಿದಿಟ್ಟುಕೊಂಡಿದ್ದ ನೆಲಗಡಲೆ ಬೀಜವನ್ನು ಮಾರಿ ಕೈತೊಳೆದುಕೊಂಡರು. ಆದರೆ ತಡವಾಗಿ ಸುರಿದ ಮಳೆಗೆ ರಾಗಿ ಬಿತ್ತನೆ ಮಾಡಲಾಗಿದ್ದ ಹೊಲಗಳು ಕಂಗೊಳಿಸುತ್ತಿವೆ.

ಮಳೆ ಸುರಿದ ಸಂದರ್ಭದಲ್ಲಿ ಈ ಹಿಂದೆ ಬಿತ್ತನೆ ಆಗದ ಜಮೀನುಗಳಿಗೆ ರಾಗಿ ಪೈರು ನಾಟಿ ಮಾಡಿದ್ದರು. ಅಂಥ ಹೊಲಗಳೂ ಸಹ ಹಚ್ಚಗೆ ಕಣ್ಸೆಳೆಯುತ್ತಿವೆ. ಕೆಲವು ರೈತರು ಮಳೆ ನಿರೀಕ್ಷೆಯಲ್ಲಿ ಒಣ ಭೂಮಿಯಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಅಂಥ ಹೊಲಗಳಲ್ಲಿ ತೆನೆ ಕಾಣಿಸಿಕೊಂಡಿದೆ. ಇನ್ನೆರಡು ಹದ ಮಳೆಯಾದರೆ ಸಾಕು ತೆನೆ ಬಲಿತುಕೊಳ್ಳುತ್ತದೆ ಎನ್ನುವುದು ಸ್ಥಳೀಯ ರೈತರ ಅಭಿಪ್ರಾಯ.

‘ಮಳೆ ಸುರಿಯುವುದು ತಡವಾದರೂ, ಇರುವ ಬೆಳೆಗಳು ಸದ್ಯಕ್ಕೆ ಚೆನ್ನಾಗಿವೆ. ಮುಂದೆ ಸಮಯಕ್ಕೆ ಸರಿಯಾಗಿ ಮಳೆಯಾದರೆ ಮೋಸವಾಗುವುದಿಲ್ಲ. ವರ್ಷದ ಕಾಳು ಮನೆಗೆ ಬರುತ್ತದೆ’ ಎಂದು ಪನಸಮಾಕನಹಳ್ಳಿ ಗ್ರಾಮದ ರೈತ ಮಹಿಳೆ ವೆಂಕಟಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಮಾನ್ಯವಾಗಿ ಮಾವಿನ ತೋಟಗಳಲ್ಲಿ ಹುರುಳಿ ಬಿತ್ತನೆ ಮಾಡಲಾಗಿದೆ. ಬೆಳೆ ಹುಲುಸಾಗಿ ಬಂದಿದೆ. ಕೆಲವು ರೈತರು ತೆಳುವಾಗಿ ಬೀಜ ಬಿತ್ತನೆ ಮಾಡಿ ಕಾಯಿ ಕಟ್ಟಲು ಕಾಯುತ್ತಿದ್ದಾರೆ. ಒಟ್ಟಾರೆ ಮಳೆ ಆಶ್ರಿತ ಬೆಳೆಗಳು ಈ ಬಾರಿ ರೈತರಿಗೆ ಭರವಸೆಯ ಬೆಳಕಾಗಿ ಪರಿಣಮಿಸಿವೆ. ಇನ್ನಷ್ಟು ಮಳೆಯ ಅಗತ್ಯ ಇರುವುದರಿಂದ ಉತ್ಪಾದನೆ ಕುರಿತು ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ರೈತನ ಬದುಕು ಮಳೆರಾಯನ ಮೇಲೆ ನಿಂತಿದೆ.

ಹೆಚ್ಚಿದ ಸಿರಿಧಾನ್ಯ
ಈ ಬಾರಿ ಅವರೆ ಗಿಡಗಳು ಹುಲುಸಾಗಿ ಬೆಳೆದಿವೆ. ಕೆಲವು ರೈತರು ಸಾಂಪ್ರದಾಯಿಕ ರಾಗಿ ಹೊಲಗಳಲ್ಲಿ ಅವರೆ, ಹುಚ್ಚೆಳ್ಳು, ಸಾಸಿವೆ, ಬಿಳಿ ಜೋಳ, ಅರೆಸಾಮೆ, ನವಣೆ, ಸಜ್ಜೆ ಮುಂತಾದ ಬೆಳೆಗಳನ್ನು ಸಾಲುಗಳಲ್ಲಿ ಬೆಳೆದಿದ್ದಾರೆ. ಬದುಗಳ ಪಕ್ಕದಲ್ಲಿ ಸಾರಿಗೆ ಬೇಕಾದ ತೊಗರಿ, ಅಲಸಂದೆ ಗಿಡ ಬೆಳೆಸಿದ್ದಾರೆ. ಶ್ರೀನಿವಾಸಪುರದ ಹೊರ ವಲಯದ ಗ್ರಾಮಗಳ ಕೆಲವು ರೈತರು ಸಾಮೆ, ನವಣೆಯನ್ನು ಪ್ರತ್ಯೇಕ ತಾಕುಗಳಲ್ಲಿ ಬೆಳೆಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿರಿ ಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ಬಂದಿರುವುದರಿಂದ ಈ ಬೆಳವಣಿಗೆ ಕಂಡುಬಂದಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)