ಗುರುವಾರ , ನವೆಂಬರ್ 21, 2019
21 °C
ಜನರ ಓಡಾಟಕ್ಕೆ– ವಾಹನ ಸಂಚಾರಕ್ಕೆ ಸಮಸ್ಯೆ: ಶಾಸಕರ ಪರಿಶೀಲನೆ

ರೈಲ್ವೆ ಕೆಳ ಸೇತುವೆಯಲ್ಲಿ ಮಳೆ ನೀರು ಸಂಗ್ರಹ

Published:
Updated:
Prajavani

ಕೋಲಾರ: ನಗರದಲ್ಲಿ ಶನಿವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದರಿಂದ ಖಾದ್ರಿಪುರ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ (ಅಂಡರ್‌ಪಾಸ್‌) ನೀರು ತುಂಬಿಕೊಂಡಿದ್ದರಿಂದ ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡು ಜನರಿಗೆ ತೀವ್ರ ತೊಂದರೆಯಾಯಿತು.

ಅಂತರಗಂಗೆ ಬೆಟ್ಟದ ರಸ್ತೆಯ ಕೀಲುಕೋಟೆ ರೈಲ್ವೆ ಕೆಳ ಸೇತುವೆಯಲ್ಲೂ ನೀರು ನಿಂತು ಜನರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಈ ಸಂಗತಿ ತಿಳಿದ ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾರ್ವಜನಿಕರು ಮಳೆ ನೀರು ತೆರವು ಮಾಡಿಸುವಂತೆ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಬಳಿಕ ಶಾಸಕರು ನಗರಸಭೆ ಅಧಿಕಾರಿಗಳನ್ನು ಕರೆಸಿ ಮಳೆ ನೀರು ತೆರವು ಮಾಡಿಸುವಂತೆ ಸೂಚಿಸಿದರು.

‘ಖಾದ್ರಿಪುರ ರೈಲ್ವೆ ಕೆಳ ಸೇತುವೆಯು ನಗರಸಭೆ ವ್ಯಾಪ್ತಿಯಲ್ಲಿ ಇಲ್ಲ. ಬದಲಿಗೆ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ’ ಎಂದು ನಗರಸಭೆ ಅಧಿಕಾರಿಗಳು ಶಾಸಕರಿಗೆ ತಿಳಿಸಿದರು. ಬಳಿಕ ಶಾಸಕರು, ‘ಕೊಂಡರಾಜನಹಳ್ಳಿ ಗ್ರಾ.ಪಂ ಅಧಿಕಾರಿಗಳಿಗೆ ಕೆಳ ಸೇತುವೆ ನಿರ್ವಹಣೆ ಮಾಡುವಂತೆ ಸೂಚಿಸುತ್ತೇನೆ. ಕೆಳ ಸೇತುವೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ರೈಲ್ವೆ ಮಂಡಳಿ ಅಧಿಕಾರಿಗಳ ಸಭೆ ಕರೆಯಿರಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಮಳೆಗಾಲದಲ್ಲಿ ನರಕ: ‘ಖಾದ್ರಿಪುರ ರಸ್ತೆಯಲ್ಲಿ ಕೆಳ ಸೇತುವೆ ನಿರ್ಮಾಣ ಮಾಡಬಾರದೆಂದು ಹಿಂದಿನ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಮಾಡಿದ್ದೆವು. ಆದರೆ, ಅವರು ಸಾಧಕ ಬಾಧಕ ತಿಳಿಯದೆ ಮತ್ತು ಸ್ಥಳೀಯರ ಜತೆ ಚರ್ಚಿಸದೆ ರಾಜಕೀಯ ಮುಖಂಡರ ಮಾತು ಕೇಳಿ ಕೆಳ ಸೇತುವೆ ಮಂಜೂರು ಮಾಡಿದರು. ಇದರಿಂದ ಈಗ ಸ್ಥಳೀಯರು ಮಳೆಗಾಲದಲ್ಲಿ ನರಕ ಅನುಭವಿಸುವಂತಾಗಿದೆ’ ಎಂದು ಸಾರ್ವಜನಿಕರು ಶಾಸಕರ ಎದುರು ಅಳಲು ತೋಡಿಕೊಂಡರು.

‘ಕೆಳ ಸೇತುವೆಯಿಂದ ನೀರು ಹೊರ ಹೋಗುವ ಪೈಪ್‌ಗಳನ್ನು ತುಂಬಾ ಎತ್ತರಕ್ಕೆ ಇಡಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗದೆ ಕೆಳ ಸೇತುವೆಯಲ್ಲಿ ಶೇಖರಣೆಯಾಗುತ್ತಿದೆ. ಗ್ರಾ.ಪಂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಆಯುಕ್ತ (ಪ್ರಭಾರ) ಶಿವಪ್ರಕಾಶ್‌ ನೇತೃತ್ವದ ತಂಡವು ಜೆಸಿಬಿ, ಸಕ್ಕಿಂಗ್ ಯಂತ್ರಗಳ ಮೂಲಕ ಸೇತುವೆ ಕೆಳಗಿನ ನೀರನ್ನು ತೆರವುಗೊಳಿಸಿದರು.

ಪ್ರತಿಕ್ರಿಯಿಸಿ (+)