ಬುಧವಾರ, ನವೆಂಬರ್ 13, 2019
28 °C
ತೆಲುಗು ಚಲನಚಿತ್ರ ನಟ ಪವನ್‌ ಕಲ್ಯಾಣ್‌ ಅಭಿಪ್ರಾಯ

ಮಳೆ ನೀರು ಸಂರಕ್ಷಣೆಗೆ ಆದ್ಯತೆ ನೀಡಿ

Published:
Updated:
Prajavani

ಶ್ರೀನಿವಾಸಪುರ: ಕುಡಿಯುವ ನೀರು ಸಮಸ್ಯೆ ಎದುರಿಸುತ್ತಿರುವ ಕೋಲಾರ ಜಿಲ್ಲೆಯಲ್ಲಿ ಮಳೆ ನೀರು ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಜಲ ಮೂಲಗಳಲ್ಲಿ ತುಂಬಿರುವ ಹೂಳು ತೆಗೆದು ನೀರು ನಿಲ್ಲುವಂತೆ ಮಾಡಬೇಕು ಎಂದು ತೆಲುಗು ಚಲನಚಿತ್ರ ನಟ ಪವನ್‌ ಕಲ್ಯಾಣ್‌ ಹೇಳಿದರು.

ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ಧಾರ ಸಮಾರಂಭದಲ್ಲಿ ಮಾತನಾಡಿ, ಆಂಧ್ರ ಹಾಗೂ ಕರ್ನಾಟಕದ ರೈತರು ಒಂದೆ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತರ್ಜಲ ಕೊರತೆ ಕಾಡುತ್ತಿದೆ. ಚೆಕ್ ಡ್ಯಾಂ, ಕೆರೆ, ಕುಂಟೆಗಳಲ್ಲಿ ಮಳೆ ನೀರು ತುಂಬಿ ಅಂತರ್ಜಲ ವೃದ್ಧಿಸಬೇಕಾಗಿದೆ ಎಂದು ಹೇಳಿದರು.

ಕೃಷಿ ಪ್ರಧಾನ ದೇಶದಲ್ಲಿ ಕೃಷಿಕರ ಕಷ್ಟ ಹೇಳತೀರದು. ಬೆಳೆದ ಬೆಳೆಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲ. ಯುವ ಸಮುದಾಯಕ್ಕೆ ಉದ್ಯೋಗ ದೊರೆಯುತ್ತಿಲ್ಲ. ಪ್ರಜಾ ಹಿತಕ್ಕಾಗಿ ರಾಜಕೀಯ ಮಾಡಬೇಕು. ದ್ವೇಷ ಸಾಧನೆಗಾಗಿ ರಾಜಕೀಯ ಮಾಡುವುದರಿಂದ ಜನರ ಕಷ್ಟ ತೀರುವುದಿಲ್ಲ. ಉದ್ಯೋಗಾವಕಾಶಗಳು ಹೆಚ್ಚಾಗಲು ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು
ಎಂದರು.

‘ನೆರೆ ಹೊರೆಯ ಸ್ನೇಹಿತರ ಭಾಷಾ ಬಾಂಧವ್ಯ ದೊಡ್ಡದು. ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕೋಣ’ ಎಂದು ಹೇಳಿದರು.

ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಮಾತನಾಡಿ, ಮಹಾತ್ಮರನ್ನು ಕೊಂದವರನ್ನು ಆರಾಧಿಸುವ ದಿನಗಳು ಹತ್ತಿರವಾಗುತ್ತಿವೆ. ಇದನ್ನು ನೋಡಿದರೆ ನಾವು ಎತ್ತ ಸಾಗಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಬೆವರಿಗೆ ಬೆಲೆ ಕಟ್ಟುವಂತೆ ಕೋರಿದರೆ, ಪ್ರಸಾದನ ಸಾಮಗ್ರಿ ಬೆಲೆ ಹೆಚ್ಚಿಸುತ್ತಿದ್ದೇವೆ ಎನ್ನುವವರು ಸರ್ಕಾರದಲ್ಲಿದ್ದಾರೆ ಎಂದು ಹೇಳಿದರು.

ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ ಆಶೀರ್ವಚನ ನೀಡಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಡಿವೈಎಸ್‌ಪಿ ಉಮೇಶ್‌, ತಹಶೀಲ್ದಾರ್‌ ಕೆ.ಎನ್‌.ಸುಜಾತ, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ದೇವಾಲಯದ ಧರ್ಮಾಧಿಕಾರಿಗಳಾದ ರೇಖಾ, ಜಿ.ಎಸ್‌.ವೇಣುಗೋಪಾಲ್‌, ಮಖಂಡರಾದ ಕೆ.ಕೆ.ಮಂಜು, ಅಮರೇಂದ್ರ ಬಾಬು ಇದ್ದರು.

ಪ್ರತಿಕ್ರಿಯಿಸಿ (+)