ಕೋಲಾರ ಜಿಲ್ಲೆಯಲ್ಲಿ ಮಳೆ ಕೊರತೆ: ₹26.09ಕೋಟಿ ಬೆಳೆ ನಷ್ಟ, ಸಂಕಷ್ಟದಲ್ಲಿ ಅನ್ನದಾತ

7
ಮುಂಗಾರು ಹಂಗಾಮಿನಲ್ಲಿ ವರುಣನ ಮುನಿಸು

ಕೋಲಾರ ಜಿಲ್ಲೆಯಲ್ಲಿ ಮಳೆ ಕೊರತೆ: ₹26.09ಕೋಟಿ ಬೆಳೆ ನಷ್ಟ, ಸಂಕಷ್ಟದಲ್ಲಿ ಅನ್ನದಾತ

Published:
Updated:
Deccan Herald

ಕೋಲಾರ: ವರುಣ ದೇವನ ಮುನಿಸಿಗೆ ತುತ್ತಾಗಿರುವ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 38,304 ಹೆಕ್ಟೇರ್‌ ಪ್ರದೇಶದಲ್ಲಿನ ಸುಮಾರು ₹ 26.09 ಕೋಟಿ ಮೊತ್ತದ ಬೆಳೆ ನಷ್ಟವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ ತಿಂಗಳ ಮಧ್ಯ ಭಾಗದವರೆಗಿನ ಅವಧಿಯನ್ನು ಮುಂಗಾರು ಹಂಗಾಮು ಎಂದು ಪರಿಗಣಿಸಲಾಗಿದ್ದು, ಈ ಅವಧಿಯಲ್ಲಿ ಬಿತ್ತನೆ ಕಾರ್ಯ ಚುರುಕಾಗಿರುತ್ತದೆ. ರಾಗಿ, ನೆಲಗಡಲೆ, ತೊಗರಿ, ಅವರೆ, ಅಲಸಂದೆಯು ಪ್ರಮುಖ ಬೆಳೆಗಳಾಗಿವೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ವಾಡಿಕೆ ಮಳೆ 237 ಮಿ.ಮೀ ಇದ್ದು, ಈ ಬಾರಿ ವಾಡಿಕೆಗಿಂತಲೂ ಕಡಿಮೆ 148 ಮಿ.ಮೀ ಮಳೆಯಾಗಿದೆ. ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ಮೂರೂವರೆ ತಿಂಗಳಲ್ಲಿ ಮಳೆರಾಯ ಆಗೊಮ್ಮೆ ಈಗೊಮ್ಮೆ ಮುಖ ತೋರಿಸಿ ಮರೆಯಾಗಿದ್ದು, ಶೇ 38ರಷ್ಟು ಮಳೆ ಕೊರತೆಯಾಗಿದೆ. ಮಳೆಯ ಕಣ್ಣಾಮುಚ್ಚಾಲೆಯಿಂದ ಎಲ್ಲೆಡೆ ಬಿತ್ತನೆ ಕುಂಠಿತಗೊಂಡಿದೆ.

ಬರ ಘೋಷಣೆ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 1.02 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯಿತ್ತು. ಮಳೆ ಕೊರತೆ ಕಾರಣಕ್ಕೆ 61,116 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ 59.9ರಷ್ಟು ಗುರಿ ಸಾಧನೆಯಾಗಿದೆ. ಬೆಳೆ ನಷ್ಟ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದು, ಒಟ್ಟಾರೆ ಬಿತ್ತನೆ ಪ್ರದೇಶದಲ್ಲಿ ಶೇ 62.67ರಷ್ಟು ಬೆಳೆ ನಷ್ಟವಾಗಿದೆ.

ಅನಾವೃಷ್ಟಿ ಕಾರಣಕ್ಕೆ 40,884 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಮಳೆ ನಂಬಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆಯೊಡೆದಿಲ್ಲ. ಮತ್ತೊಂದೆಡೆ ಬೆಳೆದು ನಿಂತ ಪೈರುಗಳು ನೀರಿಲ್ಲದೆ ಒಣಗಿವೆ. ರಾಜ್ಯ ಸರ್ಕಾರ ಜಿಲ್ಲೆಯ 5 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದೆ.

ಬೇಡಿಕೆಯಿಲ್ಲ: ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರದ ಬೇಡಿಕೆ 14,480 ಮೆಟ್ರಿಕ್‌ ಟನ್‌ ಇತ್ತು. ಈ ಪೈಕಿ 7,551 ಮೆಟ್ರಿಕ್‌ ಟನ್‌ ಪೂರೈಕೆಯಾಗಿದೆ. ಜಿಲ್ಲೆಗೆ 1,714 ಕ್ವಿಂಟಾಲ್‌ ಬಿತ್ತನೆ ಬೀಜ ಪೂರೈಕೆಯಾಗಿದ್ದು, ಮಳೆ ಕೊರತೆ ಕಾರಣಕ್ಕೆ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಬೇಡಿಕೆಯಿಲ್ಲದೆ ಗೋದಾಮಿನಲ್ಲೇ ಉಳಿದಿದೆ.

ಬೆಳೆ ನಷ್ಟ, ಇನ್‌ಪುಟ್‌ ಸಬ್ಸಿಡಿ ಸಂಬಂಧ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸದ್ಯದಲ್ಲೇ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗೆ ಸಮಗ್ರ ವರದಿ ನೀಡಲಿದ್ದಾರೆ. ಬಳಿಕ ಜಿಲ್ಲಾಧಿಕಾರಿ ವರದಿ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆ.

ಕೆರೆ, ಕೊಳವೆ ಬಾವಿ, ಕೃಷಿ ಹೊಂಡಗಳಲ್ಲಿ ಜೀವಸೆಲೆ ಬತ್ತಿದೆ. ಬೇಸಿಗೆಗೂ ಮುನ್ನವೇ ಮೇವಿನ ಸಮಸ್ಯೆ ಸೃಷ್ಟಿಯಾಗುವ ಆತಂಕವಿದ್ದು, ರೈತರು ಜಾನುವಾರುಗಳನ್ನು ಮಾರಾಟ ಮಾಡಲಾರಂಭಿಸಿದ್ದಾರೆ.

ತಾಲ್ಲೂಕುವಾರು ಬೆಳೆ ನಷ್ಟದ ಅಂದಾಜು
ತಾಲ್ಲೂಕು           ಬೆಳೆ ನಷ್ಟ (ಹೆಕ್ಟೇರ್‌ನಲ್ಲಿ)      ನಷ್ಟದ ಪ್ರಮಾಣ (₹ ಕೋಟಿಗಳಲ್ಲಿ)

ಕೋಲಾರ           6,488                              4.40
ಮಾಲೂರು          12,951                            8.81
ಬಂಗಾರಪೇಟೆ       7,203                              4.90
ಮುಳಬಾಗಿಲು       9,193                              6.25
ಶ್ರೀನಿವಾಸಪುರ      2,469                              1.73

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕುವಾರು ಬಿತ್ತನೆ ವಿವರ (ಹೆಕ್ಟೇರ್‌ನಲ್ಲಿ)
ತಾಲ್ಲೂಕು            ಗುರಿ         ಬಿತ್ತನೆ          ಬಿತ್ತನೆಯಾಗದ ಪ್ರದೇಶ
ಬಂಗಾರಪೇಟೆ       23,630   14,137        9,493
ಕೋಲಾರ           19,115   15,887        3,228
ಮಾಲೂರು          16,055   13,644        2,411
ಮುಳಬಾಗಿಲು       26,015    9,839         16,176
ಶ್ರೀನಿವಾಸಪುರ      17,185   7,609          9,576

ಪ್ರಮುಖ ಬೆಳೆಗಳ ನಷ್ಟ ವಿವರ (ಹೆಕ್ಟೇರ್‌ಗಳಲ್ಲಿ)
ಬೆಳೆ              ಬಿತ್ತನೆ ಪ್ರದೇಶ          ನಷ್ಟ
ರಾಗಿ               42,916           31,575
ನೆಲಗಡಲೆ          5,667             5,640
ತೊಗರಿ             2,409            1,266
ಅಲಸಂದೆ/ ಅವರೆ   7,524            3,718

ಅಂಕಿ ಅಂಶ..
* 1.02 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ
* 61,116 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ
* 40,884 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿಲ್ಲ
* ಶೇ 38ರಷ್ಟು ಮಳೆ ಕೊರತೆ
* 38,304 ಹೆಕ್ಟೇರ್‌ ಬೆಳೆ ನಾಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !