ಸೋಮವಾರ, ಜನವರಿ 24, 2022
28 °C

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ- ಜಿಲ್ಲಾ ಲೋಕಾಯುಕ್ತ ಡಿವೈಎಸ್‍ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಾಭಿಕೊತ್ತನೂರು: ‘ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಬೇಕು. ಸಮಾಜವನ್ನು ಸರಿ ದಾರಿಗೆ ತರುವ ಸಂಕಲ್ಪದೊಂದಿಗೆ ಕಲಿಕೆ ಮುಂದುವರಿಸಿ’ ಎಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್‍ಪಿ ಜಿ.ಕೃಷ್ಣಮೂರ್ತಿ ಕಿವಿಮಾತು ಹೇಳಿದರು.

ಲೋಕಾಯುಕ್ತ ಕಾನೂನುಗಳ ಸಂಬಂಧ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ‘1984ರಲ್ಲಿ ಆರಂಭವಾದ ಲೋಕಾಯುಕ್ತ ಸಂಸ್ಥೆ ಸಮಾಜದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದೆ. ಈ ಕಾರ್ಯದಲ್ಲಿ ಯಶ ಕಾಣಲು ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ಮನವಿ ಮಾಡಿದರು.

‘ಕೋವಿಡ್ 3ನೇ ಅಲೆ ಆರಂಭದ ಸೂಚನೆ ಸಿಕ್ಕಿದೆ. ಶಾಲೆಗಳಲ್ಲಿ ಅಂತರ ಕಾಯ್ದುಕೊಳ್ಳಿ. ಮನೆಯಿಂದಲೇ ಕುಡಿಯುವ ನೀರು ತನ್ನಿ ಮತ್ತು ಆಹಾರ ಹಂಚಿ ತಿನ್ನದಿರಿ. ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಜಿಲ್ಲೆ ಹಸಿರು ವಲಯದಲ್ಲಿದೆ. ಆದರೂ ನಿರ್ಲಕ್ಷ್ಯ ಬೇಡ. ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ ಮಾರ್ಗಸೂಚಿ ಪಾಲಿಸುವುದು ಹೆಚ್ಚು ಸೂಕ್ತ’ ಎಂದು ತಿಳಿಸಿದರು.

‘ಕೋವಿಡ್ ಬಗ್ಗೆ ಆತಂಕ ಬೇಡ. ಕೋವಿಡ್ 2ನೇ ಅಲೆಯಲ್ಲಿ ಸಾಕಷ್ಟು ಸಾವು ನೋವು ಕಂಡಿದ್ದೇವೆ. ಅಂತಹ ಪರಿಸ್ಥಿತಿ ಮರುಕಳಿಸಬಾರದು. ಸ್ವಚ್ಛತೆಗೆ ಒತ್ತು ಕೊಡಿ. ಪರಸ್ಪರ ಕೈ ಕುಲುಕುವುದು, ಗುಂಪು ಸೇರುವುದು ಮಾಡದಿರಿ’ ಎಂದು ಸಲಹೆ ನೀಡಿದರು.

ಮುಖ್ಯ ಘಟ್ಟ: ‘ಎಸ್ಸೆಸ್ಸೆಲ್ಸಿಯು ಜೀವನದ ಅತ್ಯಂತ ಮುಖ್ಯ ಘಟ್ಟ. ಈ ಹಂತದಲ್ಲಿ ಚೆನ್ನಾಗಿ ಓದಿ ಪೋಷಕರ ಆಶಯ ಈಡೇರಿಸಿ. ಶೇ 100ರಷ್ಟು ಫಲಿತಾಂಶ ಸಾಧನೆಯು ನಿಮ್ಮ ಗುರಿಯಾಗಲಿ. ಜೀವನದ ಅಡಿಪಾಯವಾದ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸದಿದ್ದರೆ ಮುಂದೆ ಸಮಸ್ಯೆಯಾಗುತ್ತದೆ’ ಎಂದರು.

ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಗೋಪಾಲಕೃಷ್ಣ, ಭವಾನಿ, ಶ್ವೇತಾ, ಲೀಲಾ, ಸುಗುಣಾ, ವೆಂಕಟರೆಡ್ಡಿ, ಫರೀದಾ, ಶ್ರೀನಿವಾಸಲು, ಚಂದ್ರಶೇಖರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು