7
ನೆಲ ಮಾಳಿಗೆಗೆ ನುಗ್ಗಿದ ನೀರು, ಕಟ್ಟಡ ಕುಸಿಯುವ ಭೀತಿ: ಒತ್ತುವರಿ ತೆರವಿಗೆ ಶಾಸಕ ಕೆ.ಶ್ರೀನಿವಾಸಗೌಡ ಸೂಚನೆ

ರಾಜಕಾಲುವೆ ಒತ್ತುವರಿ: ಕಟ್ಟಡಕ್ಕೆ ನೀರು

Published:
Updated:
ಕೋಲಾರ ತಾಲ್ಲೂಕಿನ ನರಸಾಪುರ ಬಳಿ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿರುವ ವಾಣಿಜ್ಯ ಕಟ್ಟಡದ ನೆಲ ಮಾಳಿಗೆಗೆ ನೀರು ನುಗ್ಗಿರುವುದು (ಎಡಚಿತ್ರ). ಕಟ್ಟಡಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಕೆ.ಶ್ರೀನಿವಾಸಗೌಡ ರಾಜಕಾಲುವೆ ಒತ್ತುವರಿ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದರು

ಕೋಲಾರ: ತಾಲ್ಲೂಕಿನ ನರಸಾಪುರ ಬಳಿ ರಾಜಕಾಲುವೆ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಿರುವ ವಾಣಿಜ್ಯ ಕಟ್ಟಡದ ನೆಲ ಮಾಳಿಗೆಗೆ ಬುಧವಾರ ರಾತ್ರಿ ನೀರು ನುಗ್ಗಿದ್ದು, ಕಟ್ಟಡ ಕುಸಿಯುವ ಭೀತಿ ಎದುರಾಗಿದೆ.

ಕೆ.ಸಿ ವ್ಯಾಲಿ ಯೋಜನೆ ಮೂಲಕ ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆ ತುಂಬಿ ನೀರು ರಾಜಕಾಲುವೆಯಲ್ಲಿ ನರಸಾಪುರ ಕೆರೆಗೆ ಹರಿದು ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಹಾದು ಹೋಗಿರುವ ಈ ರಾಜಕಾಲುವೆಯನ್ನು ಬಾಬ್‌ಜಿ ಎಂಬುವರು ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದಾರೆ.

ಹೀಗಾಗಿ ರಾಜಕಾಲುವೆ ಮೂಲಕ ನೀರು ಹರಿದು ಹೋಗಲು ಅಡ್ಡಿಯಾಗಿದ್ದು, ನೀರು ಕಟ್ಟಡದೊಳಗೆ ನುಗ್ಗಿದೆ. ಅಗ್ನಿಶಾಮಕ ಸಿಬ್ಬಂದಿಯು ಪಂಪ್‌ಗಳ ಮೂಲಕ ನೀರನ್ನು ತೆರವುಗೊಳಿಸುವ ಪ್ರಯತ್ನ ಮಾಡಿದರು. ಆದರೆ, ನೀರು ಹೆಚ್ಚಿನ ಪ್ರಮಾಣದಲ್ಲಿ ನೆಲ ಮಾಳಿಗೆಗೆ ಹರಿದು ಬರುತ್ತಲೇ ಇದೆ.

ಅಧಿಕಾರಿಗಳಿಗೆ ತರಾಟೆ: ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಶಾಸಕ ಕೆ.ಶ್ರೀನಿವಾಸಗೌಡ, ‘ರಾಜಕಾಲುವೆ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡದ ತೆರವಿಗೆ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ತಹಶೀಲ್ದಾರ್‌ ಮತ್ತು ಗ್ರಾ.ಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಕೆ.ಸಿ ವ್ಯಾಲಿ ನೀರು ಕೆರೆಗಳಿಗೆ ಹರಿದು ಹೋಗಲು ಯಾವುದೇ ಸಮಸ್ಯೆ ಆಗಬಾರದು. ಈ ಸಂಬಂಧ ಎಲ್ಲಾ ಇಲಾಖಾಧಿಕಾರಿಗಳ ಸಭೆ ಕರೆದು ಕೆರೆ ಮತ್ತು ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಆದರೂ ರಾಜಕಾಲುವೆ ಒತ್ತುವರಿ ತೆರವು ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಟ್ಟಡದೊಳಗೆ ಹೋಗಲು ಮುಂದಾದ ಶಾಸಕರು ಹಾಗೂ ಅಧಿಕಾರಿಗಳಿಗೆ ಕಟ್ಟಡದ ಮಾಲೀಕರ ಕಡೆಯವರು ತಡೆಯೊಡ್ಡಿದರು. ಇದರಿಂದ ಕೆಂಡಾಮಂಡಲರಾದ ಶ್ರೀನಿವಾಸಗೌಡ, ‘ನಮ್ಮ ರೈತರ ಹೊಲ ಗದ್ದೆಗಳನ್ನು ನಾಶ ಮಾಡಲಿಕ್ಕೆ ಇಲ್ಲಿಗೆ ಬಂದಿದ್ದೀರಾ? ತಪ್ಪು ಮಾಡಿರುವುದಲ್ಲದೆ ಕಟ್ಟಡದೊಳಗೆ ಬರಬೇಡಿ ಎಂದು ಬೆದರಿಕೆ ಹಾಕುತ್ತೀರಾ? ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಗುಡುಗಿದರು.

ನೋಟಿಸ್‌ ಜಾರಿ: ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಜಕಾಲುವೆಯನ್ನು ಒತ್ತುವರಿ ಮಾಡಿ 7 ಹಂತಸ್ತಿನ ವಾಣಿಜ್ಯ ನಿರ್ಮಿಸಲಾಗಿದೆ. ಈ ಸಂಬಂಧ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಬೆಳ್ಳೂರು ಗ್ರಾಮ ಪಂಚಾಯಿತಿಗೆ ಇತ್ತೀಚೆಗೆ ದೂರು ಕೊಟ್ಟಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ರಮೇಶ್‌ ಅವರು ಕಟ್ಟಡದ ಮಾಲೀಕ ಬಾಬ್‌ಜಿ ಅವರಿಗೆ ಜೂನ್‌ 27ರಂದು ನೋಟಿಸ್‌ ಜಾರಿ ಮಾಡಿದ್ದರು.

‘ಕೆ.ಸಿ ವ್ಯಾಲಿ ಯೋಜನೆಯಿಂದ ರಾಜಕಾಲುವೆ ಮೂಲಕ ಪ್ರತಿನಿತ್ಯ 130 ಎಂಎಲ್‌ಡಿ ನೀರು ಜಿಲ್ಲೆಗೆ ಹರಿದು ಬರುತ್ತಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದರಿಂದ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ. ರಾಜಕಾಲುವೆ ಒತ್ತುವರಿಯಾಗಿರುವುದು ಸ್ಥಳ ಪರಿಶೀಲನೆಯಿಂದ ದೃಢಪಟ್ಟಿದ್ದು, ಶೀಘ್ರವೇ ಒತ್ತುವರಿ ತೆರವುಗೊಳಿಸಿ’ ಎಂದು ತಹಶೀಲ್ದಾರ್‌ನಲ್ಲಿ ನೋಟಿಸ್‌ನಲ್ಲಿ ಸೂಚಿಸಿದ್ದರು.

**

ರಾಜಕಾಲುವೆ ಅತಿಕ್ರಮಿಸಿಕೊಂಡು ನೀರು ಹರಿದು ಹೋಗಲು ಅವಕಾಶವಿಲ್ಲದಂತೆ ಮಾಡಿದ್ದಾರೆ. ಈ ಕಟ್ಟಡ ಎಷ್ಟೇ ದೊಡ್ಡ ವ್ಯಕ್ತಿಗೆ ಸೇರಿರಲಿ, ಮುಲಾಜಿಲ್ಲದೆ 3 ದಿನದೊಳಗೆ ಒತ್ತುವರಿ ತೆರವುಗೊಳಿಸಿ ವರದಿ ಕೊಡಬೇಕು.

–ಕೆ.ಶ್ರೀನಿವಾಸಗೌಡ, ಶಾಸಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !