ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಲಕ್ಷ್ಮಿನಾರಾಯಣ, ರಾಜಣ್ಣಗೆ ರಾಜ್ಯೋತ್ಸವ ಗೌರವ

ಉದ್ಯಮದ ಮೂಲಕ ಸಮಾಜಸೇವೆ ಒಬ್ಬರು, ಅಂಗವಿಲಕ ಉದ್ಧಾರಕ್ಕಾಗಿ ದುಡಿದ ಮತ್ತೊಬ್ಬರು
Last Updated 28 ಅಕ್ಟೋಬರ್ 2020, 13:58 IST
ಅಕ್ಷರ ಗಾತ್ರ

ಮಂಡ್ಯ: ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ನಾಗಮಂಗಲ ತಾಲ್ಲೂಕು ಹರದನಹಳ್ಳಿಯ ಉದ್ಯಮಿ, ಸಮಾಜ ಸೇವಕ ವಿ.ಲಕ್ಷ್ಮಿನಾರಾಯಣ, ಅಂಗವಿಕಲರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಡಾ.ಕೆ.ಎಸ್‌.ರಾಜಣ್ಣ ಆಯ್ಕೆಯಾಗಿದ್ದಾರೆ.

ನಾಗಮಂಗಲ ತಾಲ್ಲೂಕಿನ ಹರದನಹಳ್ಳಿಯಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಉದ್ಯಮಿಯಾಗಿ ‘ನಿರ್ಮಾಣ’ ರಿಯಲ್‌ ಎಸ್ಟೇಟ್‌ ಸಂಸ್ಥೆ ಕಟ್ಟಿರುವ ಲಕ್ಷ್ಮಿನಾರಾಯಣ ಅವರು ಮೂರು ದಶಕದಿಂದ ಸಮಾಜ ಸೇವೆ ಮಾಡುತ್ತಿದ್ದಾರೆ. ವಸತಿ ಸಮುಚ್ಛಯ ನಿರ್ಮಾಣದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ಅವರು ವ್ಯವಹಾರ ವಹಿವಾಟು ನಡೆಸುತ್ತಲೇ ಸಮಾಜ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ಸಂಕೀರ್ಣ ವಿಭಾಗದಲ್ಲಿ ಅವರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ.

ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿಯುಳ್ಳವರಾದ ವಿ.ಲಕ್ಷ್ಮಿನಾರಾಯಣರು ನೂರಾರು ಕಲಾವಿದರಿಗೆ ಪ್ರೋತ್ಸಾಹ ಮಾಡುತ್ತಾ ಬಂದಿದ್ದಾರೆ. ಉದ್ಯಮಿಯಾಗಿ ಹಲವು ಅನಾಥಾಲಯ, ವೃದ್ಧಾಶ್ರಮಗಳನ್ನು ನಿರ್ಮಾಣ ಮಾಡಿದ್ದಾರೆ. ‘ನಿರ್ಮಾಣ್‌’ ಸಂಸ್ಥೆಯಿಂದ ಬೆಂಗಳೂರಿನ ಜಿಗಣಿಯಲ್ಲಿ ‘ಪ್ರಬುದ್ಧಾಲಯ’ ವೃದ್ಧಾಶ್ರಮ ನಿರ್ಮಾಣ ಮಾಡಿದ್ದು ರಾಜ್ಯ, ಹೊರರಾಜ್ಯಗಳಿಂದ ಬಂದ ಹಿರಿಯ ನಾಗರಿಕರಿಗೆ ಆಶ್ರಯ ನೀಡಿದ್ದಾರೆ. ಆಶ್ರಮದಲ್ಲಿ 380 ಮಂದಿಗೆ ಆಶ್ರಯ ನೀಡಿದ್ದು ಜೀವನದ ಸಂಧ್ಯಾಕಾಲವನ್ನು ಆರೋಗ್ಯಯುತವಾಗಿ ಕಳೆಯವ ವಾತಾವರಣ ಸೃಷ್ಟಿಸಿದ್ದಾರೆ.

ಸಂಘ ಸಂಸ್ಥೆಯಲ್ಲಿ ಸೇವೆ: ಲಕ್ಷ್ಮಿನಾರಾಯಣರು ವಿವಿಧ ಸಂಸ್ಥೆಗಳಲ್ಲಿ ಉನ್ನತ ಹುದ್ದೆ ನಿಭಾಯಿಸಿದ್ದು ಸೇವಾಕಾರ್ಯ ಮಾಡಿದ್ದಾರೆ. ಪುರಂದರ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಯಾಗಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದ್ದಾರೆ. ಯುವ ಗಾಯಕರಿಗೆ ವೇದಿಕೆ ಒದಗಿಸುವ ಕೆಲಸ ಮಾಡಿದ್ದಾರೆ. ನಿರ್ಮಾಣ್‌ ಸಂಸ್ಥೆಯ ವತಿಯಿಂದ ಪ್ರತಿಷ್ಠಿತ ರಾಜ್ಯ ಪುರಂದರ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ. ಜೊತೆಗೆ ಅನಕೃ ಪ್ರತಿಷ್ಠಾನದಲ್ಲಿಯೂ ವ್ಯವಸ್ಥಾಪಕ ಟ್ರಸ್ಟಿಯಾಗಿ ಕೆಲಸ ಮಾಡಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಸಾಹಿತಿಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದಾರೆ.

ಅಂಗವಿಕಲ ಸಾಧಕನಿಗೆ ಗೌರವ: ಮದ್ದೂರು ತಾಲ್ಲೂಕು ಕೊಪ್ಪದಲ್ಲಿ ಜನ್ಮಿಸಿ, ಮೇಲುಕೋಟೆಯಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಅಂಗವಿಕಲ ಸಾಧಕ ಡಾ.ಕೆ.ಎಸ್‌.ರಾಜಣ್ಣ ಅವರಿಗೆ ಸಂದಿರುವ ರಾಜ್ಯೋತ್ಸವ ಗೌರವ ಸಾಮಾಜದ ಅಂಗವಿಕಲ ಸಮುದಾಯಕ್ಕೆ ಸಂದ ಗೌರವವಾಗಿದೆ. ಅಂತರಾಷ್ಟ್ರೀಯ ಮಟ್ಟದ ಅಂಗವಿಕಲ ಕ್ರೀಡಾಪಟುವೂ ಆಗಿರುವ ಅವರು 2 ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಅನುಷ್ಠಾನ ಸಂಬಂಧ ರಾಜ್ಯ ಆಯುಕ್ತರಾಗಿ ಕೆಲಸ ಮಾಡಿರುವ ರಾಜಣ್ಣ ಅಂಗವೈಕಲ್ಯ ಅನುಭವಿಸುವ ವ್ಯಕ್ತಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಕೆಲಸ ಮಾಡಿದ್ದಾರೆ. 2013ರಿಂದ 2016ರವರೆಗೆ ಆಯುಕ್ತರಾಗಿ ಕೆಲಸ ಮಾಡಿದ್ದಾರೆ. ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್‌ನ ಸುರೇಂದ್ರ ಕೌಲಗಿ ಅವರ ಶಿಷ್ಯರೂ ಆದ ರಾಜಣ್ಣ ಚಿತ್ರಕಲೆಯಲ್ಲೂ ಸಾಧನೆ ಮಾಡಿದ್ದಾರೆ.

ಉದ್ಯಮಿಯಾಗಿಯೂ ಗುರುತಿಸಿಕೊಂಡಿರುವ ಅವರು ಅಂಗವಿಕಲರಿಗೆ ಅವಶ್ಯವಿರುವ ಪರಿಕರಗಳನ್ನು ತಯಾರಿಕೆಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಎನ್‌ಜಿಇಎಫ್‌ (ರಾಷ್ಟ್ರೀಯ ಸರ್ಕಾರಿ ವಿದ್ಯುನ್ಮಾನ ಕೈಗಾರಿಕೆ)ಗೆ ಸಂಯೋಜನೆಗೊಂಡಿರುವ ಉದ್ಯಮ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. 2003ರಲ್ಲಿ ರಾಜಣ್ಣ ಅವರು ಅಬ್ದುಲ್‌ ಕಲಾಂ ಅವರಿಂದ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

**********

ತೆರೆಮರೆಯಲ್ಲಿ ಎಲೆಮರೆ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿರುವ ನನ್ನಂಥವನನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಬಹಳ ಸಂತೋಷವಾಗಿದೆ.

– ವಿ.ಲಕ್ಷ್ಮಿನಾರಾಯಣ, ಸಮಾಜ ಸೇವಕ

********

ಎಂದೋ ರಾಜ್ಯೋತ್ಸವ ಪ್ರಶಸ್ತಿ ಬರಬೇಕಾಗಿತ್ತು. ತಡವಾಗಿಯಾದರೂ ರಾಜ್ಯ ಸರ್ಕಾರ ಗುರುತಿಸಿದೆ. ಮುಂದೆಯೂ ಅಂಗವಿಕಲರ ಪರವಾಗಿ, ಅವರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇನೆ.

– ಡಾ.ಕೆ.ಎಸ್‌.ರಾಜಣ್ಣ, ಅಂಗವಿಕಲ ಸಾಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT