ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ವಿದ್ಯಾರ್ಥಿಗಳಿಗೆ ರಾಮಾನುಜನ್ ಸ್ಪೂರ್ತಿ

Last Updated 31 ಡಿಸೆಂಬರ್ 2019, 14:04 IST
ಅಕ್ಷರ ಗಾತ್ರ

ಕೋಲಾರ: ‘ಗಣಿತ ಶೈಕ್ಷಣಿಕ ವ್ಯವಸ್ಥೆಯಲ್ಲಿ ನರವ್ಯೂಹವಿದ್ದಂತೆ. ವಿಷಯವನ್ನು ಪ್ರೀತಿಸಿ, ಗೌರವಿಸಿ, ನಾನು ಒಬ್ಬ ರಾಮಾನುಜನ್ ಆಗಬೇಕು ಎಂಬ ಸ್ಪೂರ್ತಿಯಿಂದ ಮುನ್ನಡೆದರೆ ಸುಲಭವಾಗುತ್ತದೆ’ ಎಂದು ಬೆಂಗಳೂರು ವಿವಿ ಗಣಿತ ಪ್ರಾಧ್ಯಾಪಕ ಪ್ರೊ.ಪ್ರದೀಪ್ ಜಿ.ಸಿದ್ದೇಶ್ವರ್ ತಿಳಿಸಿದರು.

ಇಲ್ಲಿನ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದಲ್ಲಿ ಗಣಿತ ಶಾಸ್ತ್ರ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಗಣಿತವನ್ನು ಸರಳಗೊಳಿಸಿ ಗಣಿತ ತಜ್ಞ ರಾಮಾನುಜನ್ ಅವರನ್ನು ನೀವು ಸ್ಪೂರ್ತಿಯಾಗಿಸಿಕೊಳ್ಳಿ’ ಎಂದು ಹೇಳಿದರು.

‘ಗಣಿತ ಕ್ಷೇತ್ರಕ್ಕೆ ರಾಮಾನುಜನ್, ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯರಂತಹ ತಜ್ಞರನ್ನು ಭಾರತ ಕೊಡುಗೆಯಾಗಿ ನೀಡಿದೆ. ಸೊನ್ನೆಯನ್ನು ಕೊಡುಗೆಯಾಗಿ ನೀಡಿದ ದೇಶ ಮುಂಚೂಣಿಯಲ್ಲಿದೆ. ರಾಮಾನುಜನ್ ಅವರ ಜನ್ಮ ದಿನಾಚರಣೆಯನ್ನು ವಿಶ್ವವೇ ಆಚರಿಸುತ್ತಿದ್ದು, ಕೇಂಬ್ರಿಡ್ಸ್ ವಿ.ವಿಯಲ್ಲಿ ಅತ್ಯಂತ ಮಹತ್ವವನ್ನು ನೀಡಲಾಗಿದೆ’ ಎಂದರು.

ಬೆಂಗಳೂರು ಉತ್ತರ ವಿ.ವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಮಾತನಾಡಿ, ‘ಶೇ.೫೬ ರಷ್ಟು ಯುವಕರಿಗೆ ಗುಣಮಟ್ಟದ ಶಿಕ್ಷಣ, ಕೌಶಲ ನೀಡುವುದು ದೊಡ್ಡ ಸವಾಲಾಗಿದ್ದು, ಅಂತಹ ಹೊಣೆಯನ್ನು ವಿಶ್ವವಿದ್ಯಾಲಯಗಳು ನಿರ್ವಹಿಸಲಿವೆ’ ಎಂದು ತಿಳಿಸಿದರು.

‘ಗಣಿತ ಶಿಕ್ಷಣ ಪಡೆದುಕೊಂಡವರಿಗೆ ಇತ್ತೀಚಿನ ದಿನಗಳಲ್ಲಿ ಉದ್ಯೋಗಾವಕಾಶ ಸಿಗುತ್ತಿದೆ. ಕೈಗಾರಿಕೆಗಳಲ್ಲಿ ಅಲ್ಲದೆ, ಶಿಕ್ಷಣ ಸಂಸ್ಥೆಗಳಲ್ಲೂ ಎಂಎಸ್ಸಿ ಗಣಿತ ಮಾಡಿದವರಿಗೆ ಬೇಡಿಕೆ ಇದೆ. ಗಣಿತ ಐಸೋಲೇಟೇಡ್ ವಿಷಯವಲ್ಲ. ಇದು ವಿಜ್ಞಾನ, ಅರ್ಥಶಾಸ್ತ್ರ ಸೇರಿದಂತೆ ಎಲ್ಲಾ ವಿಷಯಗಳೊಂದಿಗೆ ಸಂಬಂಧ ಹೊಂದಿದೆ’ ಎಂದರು.

ಕುಲಸಚಿವ ಪ್ರೊ.ಜನಾರ್ಧನಂ ಮಾತನಾಡಿ, ‘ಭಾರತದ ಗಣಿತ ಕ್ಷೇತ್ರದ ಮಹಾನ್ ಚೇತನ ರಾಮಾನುಜನ್, ಅವರು ಗಣಿತಕ್ಕೆ ನೀಡಿದ ಕೊಡುಗೆ ಅಪಾರ. ಕೇವಲ ೩೩ ವರ್ಷ ಬದುಕಿದ್ದರೂ ಸಾರ್ಥಕ ಜೀವನ ನಡೆಸಿ ಇಡೀ ವಿಶ್ವಕ್ಕೆ ಸ್ಪೂರ್ತಿಯಾಗಿದ್ದಾರೆ’ ಎಂದು ಸ್ಮರಿಸಿದರು.

‘ಗಣಿತ ಹುಟ್ಟಿದಂದಿನಿಂದ ಸಾಯುವವರೆಗೂ ಇಡೀ ಜೀವನದಲ್ಲಿ ಹಾಸುಹೊಕ್ಕಾಗಿದೆ. ನಮ್ಮ ಕುಟುಂಬ ನಿರ್ವಹಣೆಯಲ್ಲೂ ಗಣಿತ ಪ್ರಮುಖ ಪಾತ್ರ ವಹಿಸುತ್ತದೆ. ಗಣಿತ ಕಷ್ಟವಲ್ಲ ಎಂಬುದನ್ನು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕು’ ಎಂದು ಸಲಹೆ ನೀಡಿದರು.

ಗಣಿತ ವಿಭಾಗದ ಸಂಯೋಜಕಿ ಸಿ.ಎಸ್.ಶ್ರೀಲತಾ, ‘ಗಣಿತ ದಿನಾಚರಣೆಯ ಮೂಲಕ ಗಣಿತದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಮಾಡಲಾಗಿದೆ’ ಎಂದು ತಿಳಿಸಿದರು.

ಉಪನ್ಯಾಸಕರಾದ ಜೆ.ಎಂ.ಶಿವರಾಜ್, ವಿಶಾಲಾಕ್ಷಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT